ಸಹಕಾರ ಸಂಘದ ಸದಸ್ಯರು ಸುಸ್ತಿದಾರರಾಗದಿರಿ

06tnpnewsfile01
Published on

ತಿ.ನರಸೀಪುರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ತಾಲೂಕಿನಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲು ಸದಸ್ಯರ ಸಹಕಾರ ಅತ್ಯಗತ್ಯ ಎಂದು ಸಂಘದ ಅಧ್ಯಕ್ಷ ಡಣಾಯಕನಪುರ ಮಲ್ಲಣ್ಣ ಹೇಳಿದರು.


ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರ ಸಂಘದಿಂದ ರೈತರು ಪಡೆದ 15 ಲಕ್ಷ ರೂ.ಗಳ ಸಾಲದ ಮೊತ್ತವನ್ನು ಮರುಪಾವತಿ ಮಾಡದೆ ಸುಸ್ತಿದಾರರಾದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸಂಘ 1,58,571 ರೂ.ನಷ್ಟ ಅನುಭವಿಸಿದೆ. ಜಿಲ್ಲಾ ಬ್ಯಾಂಕ್‌ಗೆ ಕೆಸಿಸಿ ಸಾಲದ ಅಸಲು 10 ಸಾವಿರ ರೂ. ಮತ್ತು ಬಡ್ಡಿ 5.10 ಲಕ್ಷ, ಎಂಎಸ್‌ಸಿ ಸಾಲದ 1.10 ಲಕ್ಷ ರೂ. ಬಡ್ಡಿ, ಮಧ್ಯಮಾವಧಿ ಸಾಲ 63,994 ರೂ. ಹಾಗೂ ಎಸ್‌ಜಿ ಸಾಲವನ್ನು ಮುಂಗಡವಾಗಿ ಮರು ಪಾವತಿ ಮಾಡಿದ್ದರಿಂದಲೂ ಹಾಗೂ ಮಾಜಿ ಪ್ರಭಾರ ಸಿಇಒ ಅವಧಿಯಲ್ಲಿ ವಿತರಿಸಿದ ಕೆಸಿಸಿ ಸಾಲದ ಮೊತ್ತ 9.55 ಲಕ್ಷ ರೂ. ಬಾಕಿ ಇರುವುದರಿಂದ ಈ ಬಾರಿ ಸಂಘ ನಷ್ಟ ಹೊಂದಿದೆ. ಮಾಜಿ ಸಿಇಒ ಅವರಿಂದ ಬಾಕಿ ಹಣ ವಸೂಲಿ ಮಾಡಿದ ನಂತರ ಅದನ್ನು ಲಾಭಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.


ಪ್ರಸಕ್ತ ಸಾಲಿನಲ್ಲಿ ಸಂಘ ಸಿ ತರಗತಿಯಲ್ಲಿ ಮುಂದುವರಿದಿದೆ. ಮಂದಿನ ಸಾಲಿನಲ್ಲಿ ಸಂಘದ ವ್ಯಾಪ್ತಿಯಲ್ಲಿನ ಸದಸ್ಯರು ಕಬ್ಬು ಬೆಳೆ ಸಾಲ, ಮಹಿಳಾ ಸ್ವ ಸಹಾಯ ಸಂಘಗಳಿಗೆ ಜಿಲ್ಲಾ ಬ್ಯಾಂಕ್‌ನಿಂದ 1 ಕೋಟಿ ರೂ.ಲಿಂಕೇಜ್ ಸಾಲ ಪಡೆದು ವಿತರಣೆ ಮಾಡಲು ಉದ್ದೇಶಿಸಲಾಗಿದೆ. ಸಂಘದ ಹಿಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ ವ್ಯಾಪಾರ ಮಳಿಗೆಗಳನ್ನು ನಿರ್ಮಿಸಲು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ ಮಂಜೂರಾದ 42.04 ಲಕ್ಷ ರೂ.ಅನುದಾನದಲ್ಲಿ ಸಹಕಾರ ಇಲಾಖೆಯಿಂದ ಅನುಮೋದನೆ ಪಡೆದು 10 ವ್ಯಾಪಾರ ಮಳಿಗೆ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಿಥಿಲಗೊಂಡಿರುವ ಗೊಬ್ಬರದ ಮಳಿಗೆಗಳನ್ನು ತೆರವುಗೊಳಿಸಿ ಹೊಸದಾಗಿ ಅಂಗಡಿ ಮಳಿಗೆ ನಿರ್ಮಾಣ ಮಾಡಲು ಅಂದಾಜು ಪಟ್ಟಿ ಹಾಗೂ ನಕ್ಷೆ ತಯಾರಿಸಲು ಕ್ರಮ ಕೈಗೊಳ್ಳಲಾಗಿದ್ದು, ಪುರಸಭೆಯಂದ ಅನುಮತಿ ಪತ್ರ ಬಾರದ ಕಾರಣ ಮಳಿಗೆ ನಿರ್ಮಾಣ ಕಾರ್ಯ ವಿಳಂಬವಾಗಿದೆ ಎಂದರು.
ಪ್ರಸಕ್ತ ಸಾಲಿನ ಅಂತ್ಯಕ್ಕೆ ರೈತರಿಗೆ ಕೆಸಿಸಿ ಕಬ್ಬು ಬೆಳೆ ಸಾಲವಾಗಿ 566 ಸದಸ್ಯರಿಗೆ 5.57 ಕೋಟಿ ರೂ.ಸಾಲ ವಿತರಿಸಿದೆ. ಜಿಲ್ಲಾ ಬ್ಯಾಂಕಿಗೆ ಸಂಘ 6,52,39,750 ರೂ. ಸಾಲ ಪಾವತಿಸಬೇಕಿದ್ದು, ಸದಸ್ಯರಿಂದ ಸಂಘಕ್ಕೆ ವಿವಿಧ ಸಾಲಗಳ ಮೊತ್ತವಾ6,60,60,881 ರೂ.ಗಳು ಬಾಕಿ ಬರಬೇಕಾಗಿದೆ. ಸಹಕಾರ ಸಂಘದಲ್ಲಿ 3803 ಸದಸ್ಯರಿದ್ದು, ಅವರಿಂದ 77,83,390 ರೂ.ಗಳ ಷೇರು ಬಂಡವಾಳ ಪಡೆಯಲಾಗಿದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಮಹದೇವಸ್ವಾಮಿ ಮಾತನಾಡಿ, ರೈತರಿಗೆ ಎಕರೆಗೆ 75 ಸಾವಿರ ರೂ. ಸಾಲ ನೀಡಲಾಗುತ್ತಿದ್ದು, ಸಾಲದ ಮೊತ್ತವನ್ನು ಹೆಚ್ಚಿಸುವಂತೆ ಸಲಹೆ ನೀಡಿದರು.


ಇದಕ್ಕೆ ಉತ್ತರಿಸಿದ ಅಧ್ಯಕ್ಷ ಮಲ್ಲಣ್ಣ, ಎಕರೆ ಜಮೀನಿಗೆ ಸಾಲದ ಮೊತ್ತವನ್ನು 90 ಸಾವಿರ ರೂ.ಗೆ ಹೆಚ್ಚಿಸಲು ಮನವಿ ಮಾಡಿದ್ದೇವೆ. ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ತಗುಲಿದ ವೆಚ್ಚದ ಬಗ್ಗೆ ಮಾಹಿತಿ ನೀಡಿದರು.
ನಿರ್ದೇಶಕರಾದ ಎಂ.ನಾಗರತ್ನ, ಎನ್.ಶೇಖರ್, ಟಿ.ಸಿ.ಫಣೀಶ್ ಕುಮಾರ್, ಮಹಾಲಿಂಗಪ್ಪ, ನಾಗಮ್ಮ, ಬಿ.ಚಂದ್ರಮ್ಮ, ದೊಡ್ಡ ಬಸವಯ್ಯ, ಸಾವಿತ್ರಮ್ಮ, ಮನ್ನೇಹುಂಡಿ ಪರಶಿವ, ಟಿ.ಜಿ.ಗುರುಪ್ರಸಾದ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಎನ್.ಎಂ.ರಮೇಶ್, ರಾಜಪ್ಪ, ಡಿ.ಎಂ.ಶಿವಕುಮಾರ್, ದಿವ್ಯಶ್ರೀ, ಸಿ.ಮಹದೇವ, ಫ್ಯಾನ್ಸಿ ಮೋಹನ್, ಸಾಲೂರು ಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net