

ಬೈಲಕುಪ್ಪೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪಿರಿಯಾಪಟ್ಟಣ ರೋಟರಿ ಮಿಡ್‌ಟೌನ್ ವತಿಯಿಂದ ಪೀಠೋಪಕರಣಗಳನ್ನು ಮಂಗಳವಾರ ಕೊಡುಗೆ ನೀಡಲಾಯಿತು.
ಪಿರಿಯಾಪಟ್ಟಣ ತಾಲೂಕಿನ ಎಂ.ಹೊಸಹಳ್ಳಿ ಮತ್ತು ಗಾಂಧಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಟೇಬಲ್ ಮತ್ತು ಕುರ್ಚಿಗಳನ್ನು ವಿತರಿಸಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ತಿರುಮಲಾಪುರದ ರಾಜೇಗೌಡ, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಆಟೋಟ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಣೆಗೆ ಹಾಜರಾದಾಗ ಅತಿಥಿಗಳಿಗೆ ಕೂರಲು ಕುರ್ಚಿ ಮತ್ತು ಟೇಬಲ್ ಇಲ್ಲದಿರುವುದು ತಿಳಿಯಿತು. ಪಾಠ ಮಾಡಲು ಶಿಕ್ಷಕರಿಗೆ ಪೀಠೋಪಕರಣಗಳ ಅವಶ್ಯಕತೆ ಇದೆ ಎಂದು ಕೇಳಿಕೊಂಡ ಹಿನ್ನೆಲೆಯಲ್ಲಿ ಗುತ್ತಿಗೆದಾರ ಬಲರಾಮ್ ಅವರಿಂದ ಎರಡು ಶಾಲೆಗಳಿಗೆ 20 ಕುರ್ಚಿ ಮತ್ತು ಎರಡು ಟೇಬಲ್‌ಗಳನ್ನು ಒದಗಿಸಿ ಕೊಡಬೇಕೆಂದು ಮನವಿ ಮಾಡಿದ್ದರಿಂದ ಕೊಡುಗೆಯಾಗಿ ನೀಡಿ ಸಹಕರಿಸಿದ್ದಾರೆ ಎಂದರು.
ಗುತ್ತಿಗೆದಾರ ಬಲರಾಮ್ ಅವರನ್ನು ಶಾಲೆಯಿಂದ ಸನ್ಮಾನಿಸಲಾಯಿತು. ಸಂಸ್ಥೆ ಪ್ರಧಾನ ಕಾರ್ಯದರ್ಶಿ ಕೆ.ಪಿ.ಹೆಗಡೆ, ಸದಸ್ಯರಾದ ಬಸವಗೌಡ, ಶ್ರೀಕಾಂತ್, ಸತ್ಯನಾರಾಯಣ, ಹೇಮೇಶ್, ಮುಖ್ಯ ಶಿಕ್ಷಕ ನಿರಂಜನ್ ಇತರರು ಇದ್ದರು.