ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ಯುಗಾದಿ ಉತ್ಸವ

23blrp3
Published on

ಬೇಲೂರು: ಪಟ್ಟಣದ ಶ್ರೀಚನ್ನಕೇಶವಸ್ವಾಮಿ ದೇಗುಲದಲ್ಲಿ ಚಾಂದ್ರಮಾನ ಯುಗಾದಿ ಹಬ್ಬದ ದಿನವಾದ ಬುಧವಾರ ವರ್ಷದ ಪ್ರಥಮ ಅಡ್ಡೆ ಉತ್ಸವ ಹಾಗೂ ಲಕ್ಷ್ಮೀ ದೇವಿ ಅಮ್ಮನವರ ಉತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಯುಗಾದಿ ಉತ್ಸವದ ದಿನ ಸಾವಿರಾರು ಸಂಖ್ಯೆಯಲ್ಲಿ ದೇಗುಲಕ್ಕೆ ಆಗಮಿಸಿದ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರೆ ರಾಜ್ಯ ಸರಕಾರದ ಆದೇಶದಂತೆ ದೇಗುಲದಲ್ಲಿ ಧಾರ್ಮಿಕ ದಿನವನ್ನು ಆಚರಿಸಲಾಯಿತು. ಬೆಳಗ್ಗೆ ಶ್ರೀಚನ್ನಕೇಶವಸ್ವಾಮಿ ದೇವರಿಗೆ ಅಭಿಷೇಕ, ನಿತ್ಯಕಟ್ಲೆ ನಂತರ ವಿವಿಧ ಆಭರಣಗಳನ್ನು ಧರಿಸಲಾಯಿತು.

ದೇಗುಲಕ್ಕೆ ಆಗಮಿಸಿದ ಎಲ್ಲ ಭಕ್ತರಿಗೂ ಬೇವು ಬೆಲ್ಲ ವಿತರಿಸಲಾಯಿತು. ಸಂಜೆ ಅರ್ಚಕರು ದೇಗುಲದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗೋಪೂಜೆ ನೆರವೇರಿಸಿದರು. ನಂತರ ಸಂಜೆ ಪೂಜೆಯ ಸಮಯದಲ್ಲಿ ಹೆಚ್ಚಿನ ಭಕ್ತರು ದೇಗುಲಕ್ಕೆ ಆಗಮಿಸಿದ್ದರಿಂದ ದೇಗುಲದೊಳಕ್ಕೆ ತೆರಳಲು ನೂಕು ನುಗ್ಗಲು ಉಂಟಾಗಿತ್ತು. ಕೆಲವರು ದೇವರ ದರ್ಶನ ಪಡೆದರೆ ಮತ್ತೆ ಕೆಲವರು ಹೊರಗೆ ನಿಂತು ಕೈ ಮುಗಿಯುತ್ತಿದ್ದರು. ದೇಗುಲದ ಆವರಣದಲ್ಲಿ ಮದ್ವಪದಿ ಹಾಗೂ ಚೌಡೇಶ್ವರಿ ಭಜನಾ ಮಂಡಳಿಯವರು ಭಜನೆ ನಡೆಸಿ ಕೊಟ್ಟರು. ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಇಒ ವಿದ್ಯುಲತಾ, ಅರ್ಚಕರಾದ ಶ್ರೀನಿವಾಸ ಭಟ್ಟರ್, ಪ್ರಿಯಾ ಭಟ್ಟರ್ ಸೇರಿದಂತೆ ಭಕ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net