

ರಾಜ್ಯ ಸರ್ಕಾರ ಆಡಳಿತ, ಪ್ರತಿಪಕ್ಷದ ಶಾಸಕರಿಗೆ ಅನುದಾನ ಬಿಡುಗಡೆ ಮಾಡುವಾಗ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಆರೋಪಿಸಿದರು.
ಗ್ರಾಮೀಣ ಪಥದ 7,110 ಕಿ.ಮೀ. ಉದ್ದದ ರಸ್ತೆಗಳ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಬೆಂಗಳೂರು ನಗರ ಹೊರತುಪಡಿಸಿದರೆ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಶೇ.100 ಅರ್ಬನ್ ಕ್ಷೇತ್ರ ಎಂದು ತೋರಿಸಿ ಅನುದಾನ ನೀಡಿಲ್ಲ. ನಗರದ ಚಾಮರಾಜ, ನರಸಿಂಹರಾಜ ಕ್ಷೇತ್ರಕ್ಕೆ 21 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಗ್ರಾಮಾಂತರ ಪ್ರದೇಶ ಹೊಂದಿರುವ ಚಾಮುಂಡೇಶ್ವರಿ ಕ್ಷೇತ್ರಕ್ಕೆ 16 ಕೋಟಿ ರೂ. ನೀಡಿದ್ದಾರೆ. ಆದರೆ, ಕೃಷ್ಣರಾಜ ಕ್ಷೇತ್ರಕ್ಕೆ ಅನುದಾನ ಶೂನ್ಯ. ಪ್ರಿಯಾಂಕ್ ಖರ್ಗೆ ಅವರೆ ಯಾಕಿಷ್ಟು ತಾರತಮ್ಯ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ರಾಜ್ಯದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರವನ್ನು ಅರ್ಬನ್ ವಿಧಾನಸಭಾ ಕ್ಷೇತ್ರವೆಂದು ಘೋಷಿಸಿದವರು ಯಾರು? ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಯಾಕೆ? ನಾನು ಸದನದಲ್ಲಿ ಮುಡಾ, ವಾಲ್ಮೀಕಿ ಹಗರಣ ಸೇರಿದಂತೆ ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ಈ ರೀತಿ ಮಾಡುತ್ತಿದ್ದಾರೆ. ಈ ಕುರಿತು ಸದನದಲ್ಲಿ ಮಾತನಾಡುತ್ತೇನೆ. ಸಂಬಂಧಪಟ್ಟವರ ವಿರುದ್ಧ ದೂರು ನೀಡುತ್ತೇನೆ ಎಂದು ತಿಳಿಸಿದರು.
ಸರ್ಕಾರದ ವಿರುದ್ಧ ಅನೇಕ ಶಾಸಕರು, ಮಂತ್ರಿಗಳು ಅಸಮಾಧಾನಗೊಂಡಿದ್ದಾರೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಹನಿಟ್ರ್ಯಾಪ್ ಪ್ರಕರಣದಿಂದ ಹಿಡಿದು ಇತ್ತೀಚಿನ ಬಸವರಾಜ ರಾಯರೆಡ್ಡಿ ಹೇಳಿಕೆವರೆಗೂ ಶಾಸಕರು ಸರ್ಕಾರದ ಮೇಲೆ ಮುಗಿಬೀಳುತ್ತಿದ್ದಾರೆ. ಅದಕ್ಕೆ ಕಾರಣ ಅನುದಾನದ ಕೊರತೆ ಎಂದು ತಿಳಿಸಿದರು.
ನಮ್ಮ ಬಳಿ ಉತ್ತರವಿಲ್ಲ: ಪಡಿತರ ಹಣ ಸೇರಿದಂತೆ ಇತರ ಹಣವನ್ನು ಡಿಬಿಟಿ ಮೂಲಕ ಹಾಕಲಾಗುತ್ತಿದೆ ಎಂದು ಸಿಎಂ ಹಾಗೂ ಡಿಸಿಎಂ ಹೇಳುತ್ತಿದ್ದಾರೆ. ಆದರೆ, ಶಾಸಕರ ಕರ್ತವ್ಯಗಳೇನು ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಶಾಸಕರ ಬಳಿ ಉತ್ತರ ಸಿಗುತ್ತಿಲ್ಲ. ಡಿಬಿಟಿ ಮೂಲಕ ಹಣ ಕೊಟ್ಟಿದ್ದಾರೆ ಎಂದರೆ ಅದರಲ್ಲಿ ಶಾಸಕ ಪಾತ್ರ ಏನು? ಅಧಿಕಾರಿಗಳು ಬಿಪಿಎಲ್ ಕಾರ್ಡ್ ನೋಡಿ ಅನುಮೋದನೆ ಮಾಡಿರುತ್ತಾರೆ. ಸರ್ಕಾರ ನೇರವಾಗಿ ಹಣ ಪಾವತಿ ಮಾಡುತ್ತಿದೆ. ಆದರೆ ಎಂಎಲ್ಎ ಆಗಿ ಏನು ಮಾಡುತ್ತಿದ್ದೀರಿ ಎಂದು ಕೇಳಿದರೆ ಶಾಸಕನಾಗಿ ನನ್ನ ಬಳಿ ಉತ್ತರವಿಲ್ಲ ಎಂದರು.
ರಸ್ತೆ, ಅನ್ನ ಎರಡೂ ಬೇಕು: ಅನ್ನಬೇಕಾ ಅಥವಾ ರಸ್ತೆ ಬೇಕಾ ಎಂದು ಬಸವರಾಜ ರಾಯರೆಡ್ಡಿ ಕೇಳುತ್ತಾರೆ. ಮತದಾರರು ಅನ್ನ, ರಸ್ತೆ, ಅಭಿವೃದ್ಧಿ ಬೇಕು ಎಂದು ಮತ 140 ಸ್ಥಾನ ಕೊಟ್ಟಿದ್ದಾರೆ. ಚುನಾವಣೆಗೂ ಮೊದಲೇ ಜನರಿಗೆ ಇಂತಹ ಆಯ್ಕೆ ನೀಡಿದ್ದರೆ ಅಂದೇ ಜನರು ನಿರ್ಧಾರ ಮಾಡುತ್ತಿದ್ದರು. ಶಾಸಕರ ಈ ಮಾತುಗಳನ್ನು ಗಮನಿಸಿದರೆ ಗ್ಯಾರಂಟಿಗಳಿಗಿಂತ ಅಭಿವೃದ್ಧಿಯೇ ಬೇಕು ಎಂದು ಮನದಟ್ಟಾಗುತ್ತಿದೆ ಎಂದು ತಿಳಿಸಿದರು.
ಶ್ರಮಿಕರ ಅನ್ನಭಾಗ್ಯ ಕಿತ್ತುಕೊಂಡರು: ಸರ್ಕಾರ ಅನ್ನಭಾಗ್ಯದ ಅಕ್ಕಿ ಸಾಗಿಸುತ್ತಿದ್ದ ಲಾರಿ ಮಾಲೀಕರಿಗೆ ಸುಮಾರು 250 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದರಿಂದ ಲಾರಿಗಳು ಮುಷ್ಕರ ಮಾಡುತ್ತಿವೆ. ಅನ್ನಭಾಗ್ಯ ಯೋಜನೆಯ ಅಕ್ಕಿ ಪೂರೈಕೆ ಮಾಡುತ್ತಿರುವ ಲಾರಿಗಳ ಸಾಗಣೆ ವೆಚ್ಚ ಪಾವತಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಅನ್ನಭಾಗ್ಯ ಅಕ್ಕಿ ಸಾಗಾಟ ಮಾಡುವ ಲಾರಿ ಚಾಲಕರ ಕುಟುಂಬಗಳಿಗೆ ಅನ್ನಭಾಗ್ಯ ಸಿಗದಂತಾಗಿದೆ. ಇದು ರಾಜ್ಯ ಸರ್ಕಾರ ದಿವಾಳಿಯಾಗಿರುವುದನ್ನು ತೋರಿಸುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿರುವ ಲಾರಿಗಳ ಬಾಕಿ ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ದಾವಣಗೆರೆಯಲ್ಲಿ ಯಾವುದೇ ಭಿನ್ನಮತದ ಸಭೆ ನಡೆದಿಲ್ಲ. ಮಾಜಿ ಸಂಸದರ ಜನ್ಮದಿನದ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇನ್ನು 10 ದಿನದೊಳಗೆ ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷರ ಘೋಷಣೆ ಆಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಹಾಜರಿದ್ದರು.