

ಮೈಸೂರು: ಈಗಿನ ಕಲುಷಿತ ವಾತಾವರಣ ತಿಳಿಗೊಂಡು ಶಾಂತಿ ನೆಲೆಸಬೇಕಾದರೆ ಶಾಲಾ- ಕಾಲೇಜುಗಳು, ಗ್ರಾಮೀಣ ಪ್ರದೇಶಗಳಲ್ಲಿ ಬುದ್ಧನ ಚಿಂತನೆಯನ್ನು ಬಿತ್ತುವುದು ಅಗತ್ಯವಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಸಚಿವೆ ಎಂ.ಕೆ.ಸವಿತಾ ಹೇಳಿದರು.
ಬುದ್ಧ ಪೂರ್ಣಿಮೆ ಅಂಗವಾಗಿ ಮೈವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ‘ಪ್ರಬುದ್ಧ ಭಾರತ ನಿರ್ಮಾಣಕ್ಕೆ ಬುದ್ಧ’ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಅರೆಬರೆ ವಿಚಾರವನ್ನು ತಲೆಯಲ್ಲಿ ತುಂಬಿಕೊಂಡು ಮನುಷ್ಯ-ಮನುಷ್ಯರ ನಡುವೆ ದ್ವೇಷದ ಭಾವ ಬಿತ್ತಲಾಗುತ್ತಿದೆ. ಇದನ್ನು ನಿವಾರಿಸಿ ಮಾನವೀಯತೆ ನಿರ್ಮಾಣಕ್ಕೆ ಬುದ್ಧನ ಚಿಂತನೆ ಬೇಕಾಗಿದೆ ಎಂದರು.
ವಿಜ್ಞಾನ, ತಂತ್ರಜ್ಞಾನದ ಆಧುನಿಕ ಕಾಲದಲ್ಲೂ ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದೆ.
ಧರ್ಮದ ಹೆಸರಿನಲ್ಲಿ ಸಂಘರ್ಷ, ದ್ವೇಷ ನಡೆಯುತ್ತಿದೆ. ಬುದ್ಧನ ವಿಚಾರಧಾರೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಶಾಂತಿ, ಭಾತೃತ್ವ ನಿರ್ಮಾಣ ಸಾಧ್ಯ ಎಂದರು.
ಗೌತಮ ಬುದ್ಧ ಪ್ರೀತಿ, ಕರುಣೆ, ಸಮಾನತೆ, ಸಹೋದರತೆ ಮತ್ತು ಮುಕ್ತ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದರು. ಜ್ಞಾನಮಾರ್ಗ, ಮಾನವೀಯ ಮೌಲ್ಯ ಒತ್ತು ನೀಡಿದ್ದರು. ಈ ಕಾರಣಕ್ಕೆ ಬುದ್ಧನ ವಿಚಾರಧಾರೆಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ ಎಂದರು.
ಜಾತಿ ಆಧಾರಿತ ಅಸಮಾನತೆಯಿಂದ ಮನನೊಂದ ಡಾ.ಬಿ.ಆರ್.ಅಂಬೇಡ್ಕರ್ ಅವರು ಬುದ್ಧ ಧರ್ಮವನ್ನು ಸ್ವೀಕರಿಸಿದರು. ಹಿಂದುವಾಗಿ ಹುಟ್ಟಿದ್ದೇನೆ, ಆದರೆ ಹಿಂದುವಾಗಿ ಸಾಯಲಾರೆ ಎಂಬುದಾಗಿ ಘೋಷಿಸಿದರು ಎಂದು ತಿಳಿಸಿದರು.
ಹೈಕೋರ್ಟ್ ವಕೀಲ ಡಾ.ಎನ್.ಬಿ.ಶಿವರುದ್ರಪ್ಪ ಮಾತನಾಡಿ, ದೇಶ ಎಂದರೆ ಒಂದು ಪ್ರದೇಶದಲ್ಲಿ ವಾಸವಾಗಿರುವ ಜನರ ಜೀವನ. ಆದ್ದರಿಂದ ದೇಶವನ್ನು ದ್ವೇಷದಿಂದ ಕಟ್ಟಲಾಗಲ್ಲ. ಸೌಹಾರ್ದತೆ ಮತ್ತು ಪ್ರೀತಿಯ ಆಧಾರದಲ್ಲಿ ರಾಷ್ಟ್ರವನ್ನು ನಿರ್ಮಿಸಬೇಕು. ವಿಶ್ವಗುರು ಆಗಲು ಹೊರಟವರು ಸಂದಿಗ್ಧತೆಯಲ್ಲಿ ಸಿಲುಕಿಕೊಂಡಿದ್ದಾರೆ.
ಯುದ್ಧದಿಂದ ಯಾವ ರಾಷ್ಟ್ರ ಉದ್ಧಾರವಾಗಿಲ್ಲ. ಬುದ್ಧನ ತತ್ವದಿಂದ ಮಾತ್ರ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ ಎಂದರು.
ಶ್ರೇಷ್ಠತೆ-ಕನಿಷ್ಠತೆ, ಸತ್ಯ-ಮಿಥ್ಯಗಳು ನಡುವಿನ ಸಂಘರ್ಷ ಎಲ್ಲ ದೇಶಗಳಲ್ಲೂ ಇದೆ. ಈ ಸಂಘರ್ಷಕ್ಕೆ ಅಜ್ಞಾನವೇ ಕಾರಣವಾಗಿದೆ. ಆದ್ದರಿಂದ ಜನರಲ್ಲಿ ಮನೆ ಮಾಡಿರುವ ಅಜ್ಞಾನವನ್ನು ನಿವಾರಿಸಬೇಕು ಎಂದು ಗೌತಮ ಬುದ್ಧಗುರು ಹೇಳಿದ್ದಾರೆ ಎಂದರು.
ಭಂತೆ ಡಾ.ಸೋನಂ ಪುಂಟ್ಸಾಕ್, ಮೈವಿವಿ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಸ್.ನರೇಂದ್ರ ಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಡಾ.ಜೆ.ಸೋಮಶೇಖರ್ ಇದ್ದರು.