ವಿಜಯವಾಣಿ ಸುದ್ದಿಜಾಲ ಕೋಲಾರ
ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇರುವ ಬಸ್ಸುಗಳು ಪ್ರಯಾಣಿಕರಿಗೆ ಸಕಾಗುತ್ತಿಲ್ಲ. ಸಮಯಕ್ಕೆ ಸರಿಯಾಗಿ ಬಸ್ಸುಗಳು ಬರುತ್ತಿಲ್ಲ ಎಂದು ದಿನನಿತ್ಯ ಕಛೇರಿಗಳಿಗೆ, ಶಾಲಾ ಕಾಲೇಜುಗಳಿಗೆ ಹೋಗುವವರ ವಿದ್ಯಾರ್ಥಿಗಳ ಆರೋಪವಾಗಿದೆ.
ಶಕ್ತಿ ಯೋಜನೆ ಜಾರಿಗೊಳಿಸಿದ ನಂತರ ಸಾರಿಗೆ ಸಂಸ್ಥೆಗೆ ಹೆಚ್ಚು ವರಮಾನ ಬರುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಬಸ್ಸುಗಳ ಸಂಖ್ಯೆ ಹೆಚ್ಚು ಮಾಡಬೇಕಾಗಿತ್ತು. ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣ ೧೧೦ ಟ್ರಿಪ್ ಗಳನ್ನು ಹೆಚ್ಚುವರಿಯಾಗಿ ಮಾಡಲಾಗಿದೆ ಎಂದು ಸಾರಿಗೆ ಸಂಸ್ಥೆಯವರು ಹೇಳುತ್ತಿದ್ದಾರೆ.
ಕೋಲಾರ ವಿಭಾಗದಲ್ಲಿ ಶಕ್ತಿ ಯೋಜನೆಯ ಜಾರಿಗೆ ಮುನ್ನ ೫೩೩ ಬಸ್ಸುಗಳಿದ್ದು, ಜಾರಿಯಾದ ನಂತರ ೫೪೦ ಬಸ್ಸುಗಳನ್ನು ಹೆಚ್ಚುವರಿಯಾಗಿ ಓಡಿಸುತ್ತಿದ್ದು, ೫೦೬ ರೂಟ್ ಗಳಿದ್ದು, ೩೮೮೩ ಟ್ರಿಪ್ ಗಳಾಗಿ ಬಸ್ಸುಗಳನ್ನು ಓಡಿಸಲಾಗುತ್ತಿದೆ ಎಂದು ಕೆ.ಎಸ್.ಆರ್.ಟಿ.ಸಿ.ಯವರು ಹೇಳುತ್ತಿದ್ದಾರೆ.
ಶಕ್ತಿ ಯೋಜನೆ ಜಾರಿಗೆ ಮುನ್ನ ೩೭೭೩ ರೂಟ್ಗಳಿದ್ದು, ಶಕ್ತಿ ಯೋಜನೆ ಜಾರಿಯಾದ ನಂತರ ೧೧೦ ರೂಟ್ಗಳನ್ನು ಹೆಚ್ಚುವರಿಯಾಗಿ ಓಡಿಸಲಾಗುತ್ತಿದೆ. ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕೋಲಾರ ವಿಭಾಗಕ್ಕೆ ೧೦೦ ಹೊಸ ಬಸ್ಸುಗಳ ಅವಶ್ಯಕತೆ ಇದ್ದು, ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜ್ ಹೊಸ ಬಸ್ಸುಗಳನ್ನು ನೀಡಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳಿಸಿಕೊಟ್ಟಿರುವುದಾಗಿ ತಿಳಿಸಿದ್ದಾರೆ.
ಜೂನ್ ತಿಂಗಳಿAದ ಸೆಪ್ಟೆಂಬರ್ ೧೨ರ ತನಕ ಕೋಲಾರ ವಿಭಾಗಕ್ಕೆ ಬಂದಿರುವ ಆದಾಯ ಮತ್ತು ಪ್ರಯಾಣಿಕರ ಸಂಖ್ಯೆ
ಜೂನ್ ತಿಂಗಳು : ಪ್ರಯಾಣಿಕರ ಸಂಖ್ಯೆ ೨೧,೬೦,೪೬೩ ಬಂದಿರುವ ಹಣ ೫ ಕೋಟಿ ೭೮ ಲಕ್ಷ
ಜುಲೈ ತಿಂಗಳು : ಪ್ರಯಾಣಿಕರ ಸಂಖ್ಯೆ ೪೨,೨೯,೬೨೫ ಬಂದಿರುವ ಹಣ ೧೧ ಕೋಟಿ ೧೭ ಲಕ್ಷ
ಆಗಸ್ಟ್ ತಿಂಗಳು : ಪ್ರಯಾಣಿಕರ ಸಂಖ್ಯೆ ೪೨,೩೧,೯೦೩ ಬಂದಿರುವ ಹಣ ೧೦ ಕೋಟಿ ೯೭ ಲಕ್ಷ
ಸಪ್ಟೆಂಬರು ತಿಂಗಳ ೧೩ರ ತನಕ : ಪ್ರಯಾಣಿಕರ ಸಂಖ್ಯೆ ೧೬,೧೯,೮೯೯ ಬಂದಿರುವ ಹಣ ೪ ಕೋಟಿ ೨೬ ಲಕ್ಷ
ಶಕ್ತಿ ಯೋಜನೆ ಜಾರಿಗೆ ಮುನ್ನ ಪ್ರತಿದಿನ ೫೫ ಲಕ್ಷ ಹಣ ಪ್ರಯಾಣಿಕರಿಂದ ವಸೂಲಿಯಾಗುತ್ತಿತ್ತು. ಶಕ್ತಿ ಯೋಜನೆ ಜಾರಿಯಾದ ನಂತರ ಪ್ರತಿದಿನ ಸರಾಸರಿ ೭೫ ಲಕ್ಷ ವಸೂಲಿಯಾಗುತ್ತಿದೆ. ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಮತ್ತು ವರಮಾನವೂ ಇಲಾಖೆಗೆ ಬರುತ್ತಿದೆ.
ಕೋಟ್
ಶಕ್ತಿ ಯೋಜನೆ ಜಾರಿಯಾದ ನಂತರ ಬಸ್ಸುಗಳ ಸಂಖ್ಯೆ ಕಡಿಮೆಯಾಗಿಲ್ಲ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಅದರಂತೆ ರೂಟ್ಗಳನ್ನು ಹೆಚ್ಚುವರಿ ಮಾಡಲಾಗಿದೆ. ಮತ್ತು ಟ್ರಿಪ್ಗಳನ್ನು ಹೆಚ್ಚುವರಿ ಮಾಡಲಾಗಿದೆ. ಪ್ರಯಾಣಿಕರು ಬಸ್ಸುಗಳೇ ಇಲ್ಲ ಎಂದು ಹೇಳುತ್ತಿದ್ದಾರೆ. ಬಸ್ಸುಗಳ ಸಂಖ್ಯೆ ಹೆಚ್ಚಿಗೆ ಮಾಡುವುದರ ಬದಲು ಇರುವ ಬಸ್ಸುಗಳಿಂದಲೇ ಟ್ರಿಪ್ಗಳನ್ನು ಹೆಚ್ಚಾಗಿ ಮಾಡಲಾಗಿದೆ. ಇನ್ನು ೧೦೦ ಬಸ್ಸುಗಳ ಅವಶ್ಯಕತೆ ಇದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ವಿ.ಬಸವರಾಜ್, ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ, ಕೋಲಾರ.
ಕೋಟ್
ಶಕ್ತಿ ಯೋಜನೆ ಜಾರಿಯಾದ ನಂತರ ಪಟ್ಟಣದ ಬಸ್ ನಿಲ್ದಾಣದಿಂದ ಹೊರಡುವ ಬಸ್ಸುಗಳು ವೃತ್ತಗಳಲ್ಲಿ ಮತ್ತು ರಸ್ತೆಯ ಉದ್ದಕ್ಕೂ ಇರುವ ಗೇಟ್ ಗಳಲ್ಲಿ ನಿಲ್ಲಿಸುತ್ತಿಲ್ಲ. ಬಸ್ ನಿಲ್ದಾಣದಲ್ಲಿ ಬಸ್ಸುಗಳು ಹೌಸ್ಫುಲ್ ಆಗುತ್ತವೆ. ಮುಂದಿನ ಸ್ಟಾಪ್ಗಳಲ್ಲಿ ಕಾದಿರುವ ಪ್ರಯಾಣಿಕರ ಗತಿಯೇನು, ಕಛೇರಿಗಳಿಗೆ ಹೋಗುವ ಮತ್ತು ವಿದ್ಯಾರ್ಥಿಗಳ ಪರದಾಟ ಹೆಚ್ಚಾಗಿದೆ. ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳು ಕಾಲೇಜುಗಳಿಗೆ ಹೋಗಲು ಆಗುತ್ತಿಲ್ಲ. ಸರ್ಕಾರಿ ನೌಕರರು ಸಮಯಕ್ಕೆ ಸರಿಯಾಗಿ ಕಛೇರಿಗೆ ಹೋಗಲು ಆಗುತ್ತಿಲ್ಲ. ಪ್ರಯಾಣಿಕರ ಅಗತ್ಯತೆಗೆ ಅನುಗುಣವಾಗಿ ಬಸ್ಸುಗಳನ್ನು ಓಡಿಸಬೇಕು.
-ರಾಮಕೃಷ್ಣಪ್ಪ, ಪ್ರಯಾಣಿಕ, ಕೋಲಾರ.
ಚಿತ್ರ ೧೩. ಕೆ.ಎಲ್.ಆರ್. ೦೧ : ಬಸ್ಸಿಗಾಗಿ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಕಾಯುತ್ತಿರುವುದು.