ವೀಕೆಂಡ್ ರೈತನ ನೈಸರ್ಗಿಕ ಕೃಷಿ

22rajesh3
Published on

ಚಾಮರಾಜನಗರ: ಎಲ್ಲ ಕೃಷಿ ವಿಧಾನಗಳ ತಾಯಿಯಾಗಿರುವ ಸಾವಯವ ಪದ್ಧತಿ ಇಲ್ಲೊಬ್ಬರು ಐಟಿ ಕಂಪನಿ ಉದ್ಯೋಗಿಯನ್ನು ವೀಕೆಂಡ್‌ನಲ್ಲಿ ರೈತನನ್ನಾಗಿಸಿದೆ.

ಮೈಸೂರಿನ ವಿಪ್ರೋದಲ್ಲಿ ಕೆಲಸ ಮಾಡುತ್ತಿರುವ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದ ಪುಟ್ಟಪ್ಪನಹಟ್ಟಿ ಬಸವಣ್ಣ ಅವರ ಪುತ್ರ ಮಹೇಂದ್ರಕುಮಾರ್ ವಾರಾಂತ್ಯದಲ್ಲಿ(ಶನಿವಾರ ಮತ್ತು ಭಾನುವಾರ) ಪ್ರಯೋಗಶೀಲ ಕೃಷಿಕ. ಗ್ರಾಮದಲ್ಲಿರುವ 4 ಎಕರೆ ಜಮೀನು ಇವರ ಪ್ರಯೋಗ ಶಾಲೆ. ತೋಟಗಾರಿಕೆಯಲ್ಲಿ ಮಿಶ್ರ ಬೆಳೆ ಪದ್ಧತಿ ಈ ಪ್ರಯೋಗದ ಸೂತ್ರ. ಅಧಿಕ ಬಂಡವಾಳ ಬಯಸದ, ಶ್ರಮವನ್ನು ಬೇಡದ, ಅವಲಂಬನಾ ರಹಿತ ನೈಸರ್ಗಿಕ ಕೃಷಿಯೇ ಇದರ ಸಿದ್ಧಾಂತ. ವಿಷ ಮುಕ್ತ ಆಹಾರ ಬೆಳೆಯುವುದು, ಬೇರೆ ಕೆಲಸದೊಂದಿಗೂ ಕೃಷಿ ಮಾಡಬಹುದು ಎನ್ನುವುದನ್ನು ತೋರಿಸಿಕೊಡುವುದೇ ಅಂತಿಮ ಲಿತಾಂಶ.

ಪ್ರಯೋಗ ಶಾಲೆಯಲ್ಲೊಂದು ಸುತ್ತು: ಮಹೇಂದ್ರ ಕುಮಾರ್ ಅವರ ತೋಟ ಎಲ್ಲರ ತೋಟಗಳಂತಿಲ್ಲ. ಕಳೆ ತೆಗೆದು ಶುದ್ಧಗೊಂಡ ಹಾದಿ ಇಲ್ಲ. ಕಿತ್ತ ಕಳೆಯನ್ನು ಅಲ್ಲೇ ಕೊಳೆಸಿ ಗೊಬ್ಬರ ಮಾಡಿದ ನೆಲದಿಂದ ಕೂಡಿದೆ. ಹುಲ್ಲು, ಕಡ್ಡಿಗಳ ಮೇಲ್ಪದರದಿಂದ ಮುಚ್ಚಿಕೊಂಡಿರುವ ಭೂಮಿಯಲ್ಲಿ ಕಳೆದ ಸಲ ಎರಡು ಸೇಬು ಬಿಟ್ಟಿದ್ದ ಗಿಡ ಈಗ ಹೂ ಬಿಟ್ಟಿದೆ. 50 ಏಲಕ್ಕಿ ಗಿಡಗಳ ಬುಡದಿಂದ ತುದಿಯವರೆಗೂ ಹಸಿರಾಗಿದೆ. ಪ್ರಾರಂಭದಲ್ಲಷ್ಟೇ ಉಳುಮೆ ಕಂಡಿರುವ ಭೂಮಿಯಲ್ಲಿ ಜಾಯಿ ಕಾಯಿ, ಬಾದಾಯಿ, ಬಟರ್ ್ರೂಟ್, ಡ್ರಾೃಗನ್ ್ರೂಟ್, ಮೆಣಸು ಬೆಳೆಯುತ್ತಿದೆ. ಮಲಗೋಬಾ, ಬಾದಾಮಿ, ಗಿಣಿ, ಅಂಜಲಿ ಮಾವಿನ ಗಿಡಗಳು ತೋಟದ ಘಮಲು ಹೆಚ್ಚಿಸಲು ಸ್ಪರ್ಧೆಗೆ ಬಿದ್ದಂತೆ ಚಿಗುರುತ್ತಿವೆ. ನಾಲ್ಕು ವಿಧದ ಹಲಸಿನ ಗಿಡಗಳು ಹುಲುಸಾಗಿ ಮೇಲೇಳುತ್ತಿವೆ. ಒಂದಂತೂ ಸುತ್ತಲೆಲ್ಲಾ ಕಾಯಿ ಕಟ್ಟುತ್ತಿದೆ. 20 ನುಗ್ಗೆ ಗಿಡಗಳು ತೋಟವನ್ನು ಹಿಗ್ಗಿಸಿವೆ. 20 ಗೆಣಸಿನ ಗಿಡಗಳು ಪರಂಪರೆಯ ಆಹಾರ ಪ್ರತಿಯೊಬ್ಬರ ಭೂಮಿಯಲ್ಲೂ ಇರಲೇಬೇಕು ಎನ್ನುವುದನ್ನು ಸಾರಿ ಹೇಳುತ್ತಿದೆ. 8 ನಿಂಬೆ ಗಿಡಗಳು ವರ್ಷ ಪೂರ್ತಿ ಸಲು ಕೊಡಲು ಸಜ್ಜಾಗುತ್ತಿವೆ. ಗುಂಪು ವಿಧಾನದಲ್ಲಿ ಬಾಳೆ ಬೆಳೆದಿದ್ದಾರೆ. 2 ನೇರಳೆ, 4 ದಾಳಿಂಬೆ, 4 ಸಪೋಟಾ, ವಾಟರ್ ಆ್ಯಪಲ್, 2 ಶುಂಠಿ ಗಿಡಗಳ ನಡುವೆ ವಿವಿಧ ಜಾತಿಯ 10 ಸೀಬೆ, 2 ಲಕ್ಷ್ಮಣಲ ಬೆಳೆಯುತ್ತಿವೆ. ವಿಶೇಷವಾಗಿ 1 ಕಿತ್ತಲೆ ಹಣ್ಣಿನ ಗಿಡಗಳು ಗಮನ ಸೆಳೆಯುತ್ತಿವೆ. ಕಲ್ಪವೃಕ್ಷ ಎನಿಸಕೊಂಡಿರುವ ತೆಂಗು ಮತ್ತು ಅಡಿಕೆ ತೋಟದ ಪ್ರಧಾನ ಬೆಳೆಗಳಾಗಿವೆ. ಸುಮಾರು 3000 ಅಡಿಕೆ, 280 ತೆಂಗಿನ ಮರಗಳಿವೆ. ಅಡಿಕೆ ಬೆಳೆಯುವ ಹಂತದಲ್ಲಿದೆ. ತೆಂಗು ಗಿಡ್ಡಗಾತ್ರದ ಬೆಳೆವಣಿಗೆಯಲ್ಲೇ ಕಾಯಿ ಬಿಟ್ಟಿವೆ.

ಶೂನ್ಯ ಬಂಡವಾಳದ ಕೃಷಿ:

ರೈತ ಮಹೇಂದ್ರಕುಮಾರ್ ಹೆಚ್ಚು ಬಂಡವಾಳ ವ್ಯಯಿಸದೆ ಕೃಷಿ ಮಾಡುತ್ತಿದ್ದಾರೆ. ಗಿಡಗಳನ್ನು ತಂದ ಸಂದರ್ಭದಲ್ಲಿ ಹಣ ಖರ್ಚು ಮಾಡಿರುವುದನ್ನು ಬಿಟ್ಟರೆ ಉಳಿದ ಖರ್ಚುಗಳನ್ನು ಸರಳಗೊಳಿಸಿಕೊಂಡಿದ್ದಾರೆ. ಕಳೆ ಸಸ್ಯ, ಸಗಣಿ, ಕೆರೆ ಮಣ್ಣು, ಜೀವಾಮೃತ, ಗೋ ಕೃಪಾಮೃತಗಳೇ ಗೊಬ್ಬರ. 1 ಬೋರ್‌ವೆಲ್‌ನಿಂದ ಹನಿ ನೀರಾವರಿ ಮೂಲಕ ನಿಗದಿತ ಪ್ರಮಾಣದಲ್ಲಿ ನೀರು ಹರಿಸುತ್ತಿದ್ದಾರೆ. ರಾಸಾಯನಿಕ ಔಷಧಿ ಕಾಣದ ಭೂಮಿ ಲವತ್ತತೆಯಿಂದ ಕೂಡಿದೆ. ಎರಡು ಪೆಟ್ಟಿಗೆಗಳಲ್ಲಿ ಜೇನು ಸಾಕಾಣಿಕೆ ಮಾಡಲಾಗುತ್ತಿದ್ದು, ತೋಟದ ಗಿಡಗಳ ಪರಾಗಸ್ಪರ್ಶ ನಡೆಯುತ್ತಿದೆ. ಕೃತಕವಾಗಿ ಸಿಗುವ ವಸ್ತುಗಳನ್ನು ಬಿಟ್ಟು ನೈಸರ್ಗಿಕವಾಗಿ ಲಭ್ಯವಿರುವ ವಸ್ತುಗಳನ್ನೇ ಸಂಪನ್ಮೂಲಗಳನ್ನಾಗಿ ಪರಿವರ್ತನೆ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ.

ರೈತನೂ ಹೌದು, ಮಾರಾಟಗಾರನೂ ಹೌದು..

ಕೊಳ್ಳೇಗಾಲದಲ್ಲಿ ಸ್ವಾಭಿಮಾನಿ ಸಾವಯವ ರೈತರ ಬಳಗವನ್ನು ಸಮಾನ ಮನಸ್ಕರು ಕಟ್ಟಿಕೊಂಡಿದ್ದಾರೆ. ಇದರ ಸದಸ್ಯರಾಗಿರುವ ಮಹೇಂದ್ರಕುಮಾರ್ ರೈತನಷ್ಟೇ ಅಲ್ಲ, ಮಾರಾಟಗಾರ ಕೂಡ ಆಗಿದ್ದಾರೆ. ಐಟಿ ಕಂಪನಿ ಕ್ಷೇತ್ರದಲ್ಲಿ ತಮಗೆ ಇರುವ ಗೆಳೆಯರಿಗೆ ರಾಸಾಯನಿಕ ಮುಕ್ತ ಆಹಾರಗಳನ್ನು ಮಾರಾಟ ಮಾಡುತ್ತಿದ್ದಾರೆ. ಬಳಗದಲ್ಲಿರುವ ರೈತರು ಬೆಳೆದ ಬೆಳೆಯಲ್ಲಿ ಉತ್ಪನ್ನ ತಯಾರಿಸಿ ಮೌಲ್ಯವರ್ಧನೆ ಮಾಡಲಾಗುತ್ತಿದೆ.

ಕನ್ನೇರಿ ಶ್ರೀಗಳು, ನಾರಾಯಣರೆಡ್ಡಿ ಪ್ರೇರಣೆ: ರೈತ ಮಹೇಂದ್ರಕುಮಾರ್‌ಗೆ ಸಾವಯವ ಕೃಷಿ ಮಾಡಲು ಕೊಲ್ಲಾಪುರದ ಕನ್ನೇರಿ ಮಠದ ಕಾಡುಸಿದ್ದೇಶ್ವರ ಸ್ವಾಮೀಜಿ ಮತ್ತು ಸುಸ್ಥಿರ ಕೃಷಿಯ ಸಂತ ನಾರಾಯಣರೆಡ್ಡಿ ಪ್ರೇರಣೆಯಾಗಿದ್ದಾರೆ. ಸರ್ಕಾರದಿಂದ ಯಾವುದೇ ಸೌಲಭ್ಯ, ತರಬೇತಿ ಪಡೆದುಕೊಂಡಿಲ್ಲ. ಪ್ರಗತಿಪರ ರೈತರನ್ನು ಭೇಟಿ ಮಾಡಿ ಪ್ರಾಯೋಗಿಕವಾಗಿ ಅನುಭವ ಪಡೆದುಕೊಳ್ಳುತ್ತಿದ್ದಾರೆ. ಮಹೇಂದ್ರಕುಮಾರ್ ಕೃಷಿ ಕಾಯಕಕ್ಕೆ ತಂದೆ ಪುಟ್ಟಪ್ಪನಹಟ್ಟಿ ಬಸವಣ್ಣ ಸಾಥ್ ಕೊಡುತ್ತಿದ್ದಾರೆ. ಒಂದು ಕಾಲದಲ್ಲಿ ರಾಸಾಯನಿಕ ಔಷಧಿಗಳನ್ನೇ ಕಾಣದ ಸಂದರ್ಭದಲ್ಲಿ ಕೃಷಿ ಮಾಡುತ್ತಿದ್ದ ತಂದೆ ಬಸವಣ್ಣಗೆ ಇಂದು ಮಗ ಮಹೇಂದ್ರಕುಮಾರ್ ಸಾಂಪ್ರದಾಯಿಕ ಪದ್ಧತಿಯ ಅನುಸರಣಿಕೆಯನ್ನು ಮರಳಿದ್ದಾರೆ.

ಆರೋಗ್ಯಕರ ಕೃಷಿಯಿಂದ ಆರೋಗ್ಯಕರ ಸಮಾಜ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ಸಾವಯವ ಕೃಷಿ ಪದ್ಧತಿ ಅನುಸರಿಸಬೇಕು. ಕೃಷಿಯನ್ನೇ ಕೆಲಸ ಮಾಡಿಕೊಳ್ಳುವ ಬದಲು ಬೇರೆ ಕೆಲಸದೊಂದಿಗೆ ಕೃಷಿಯನ್ನು ಮಾಡಬಹುದು. ಬೇರೆಯವ ಮಾತನ್ನು ಕೇಳದೆ ರೈತರು ಪ್ರಯೋಗಕ್ಕಿಳಿಯಬೇಕು. ಮಹೇಂದ್ರಕುಮಾರ್, ಯುವ ಕೃಷಿಕ, ಹೊಸಮಾಲಂಗಿ, ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net