ವಿಶ್ವಶಾಂತಿಗಾಗಿ ಒತ್ತಾಯಿಸಿ ಎಐಯುಟಿಯುಸಿ ಪ್ರತಿಭಟನೆ

53
Published on

ಮೈಸೂರು: ವಿಶ್ವ ಶಾಂತಿಗಾಗಿ ಒತ್ತಾಯಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಎಐಯುಟಿಯುಸಿ) ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.


ಅಂತಾರಾಷ್ಟ್ರೀಯ ಸಂಘರ್ಷ ದಿನ ಪ್ರಯುಕ್ತ ವಿಶ್ವಕಾರ್ಮಿಕ ಸಂಘಟನೆಗಳ ಒಕ್ಕೂಟವಾದ ಡಬ್ಲುೃಎಫ್‌ಟಿಯು ಕರೆ ಮೇರೆಗೆ ರಾಮಸ್ವಾಮಿ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿದರು.


ಪ್ರಸ್ತುತ ವಿವಿಧ ದೇಶಗಳ ಮಧ್ಯೆ ರಾಜಕೀಯ, ಆರ್ಥಿಕ ಮತ್ತು ಮಿಲಿಟರಿ ಘರ್ಷಣೆಗಳು ಹೆಚ್ಚುತ್ತಿವೆ. ಸಾಮ್ರಾಜ್ಯಶಾಹಿ ದೇಶಗಳು ಪ್ರಮುಖವಾಗಿ ಅಮೆರಿಕ ಹಾಗೂ ನ್ಯಾಟೋ, ಯುರೋಪಿಯನ್ ಒಕ್ಕೂಟ ವಿವಿಧ ದೇಶಗಳ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸಿವೆ ಎಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದರು.


ಲಾಭಕ್ಕಾಗಿ ಅಲ್ಲಿಯ ಜನಗಳನ್ನು ಶೋಷಣೆಗೀಡು ಮಾಡುವುದು ಹಾಗೂ ತನ್ನ ಕಬಂಧ ಬಾಹುವನ್ನು ಇನ್ನಷ್ಟು ವಿಸ್ತರಿಸಲು ಹೊರಟಿವೆ. ಇವೆಲ್ಲದರ ಪರಿಣಾಮವಾಗಿ ಲಾಭ ಪಿಪಾಸು ಸಾಮ್ರಾಜ್ಯಶಾಹಿ ದೇಶಗಳ ಮಧ್ಯೆ ನಿರಂತರ ಘರ್ಷಣೆಗಳು ತೀವ್ರಗೊಳ್ಳುತ್ತಿವೆ. ಯುದ್ಧೋನ್ಮಾದ ಅಧಿಕವಾಗಿದೆ. ಪರಿಣಾಮವಾಗಿ ವಿಶ್ವಶಾಂತಿ ಗಂಭೀರ ಅಪಾಯದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.


ಈಗಾಗಲೇ ಎಲ್ಲ ದೇಶಗಳಲ್ಲೂ ಬೆಲೆ ಏರಿಕೆ, ಹಣದುಬ್ಬರ ತೀವ್ರ ಹೆಚ್ಚಿದೆ. ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆಯ ಕೊರತೆ ತೀವ್ರವಾಗಿ ಕಾಡುತ್ತಿದೆ. ಬಂಡವಾಳಶಾಹಿ ಪರ ಸರ್ಕಾರಗಳು ಜನಸಾಮಾನ್ಯರ, ಕಾರ್ಮಿಕರ ಬೇಡಿಕೆಗಳನ್ನು ಕಡೆಗಣಿಸಿ ಮಿಲಿಟರಿ ವೆಚ್ಚಗಳನ್ನು ಹೆಚ್ಚಿಸುತ್ತಿರುವುದು

ಆಘಾತಕಾರಿಯಾಗಿದೆ. ಹೀಗಾಗಿ ವಿವಿಧ ದೇಶಗಳ ಮಧ್ಯೆ ಸಾಮ್ರಾಜ್ಯಶಾಹಿ ಯುದ್ಧಗಳು ಮತ್ತು ಅವುಗಳ ಹುನ್ನಾರ ಬಯಲಿಗೆ ಎಳೆಯಬೇಕಾಗಿದೆ. ಇಡೀ ವಿಶ್ವಾದ್ಯಾಂತ ಶೋಷಿತ ಜನ ಸಾಮಾನ್ಯರ ಪರ, ಯುದ್ಧ ವಿರೋಧಿ, ಸಾಮ್ರಾಜ್ಯಶಾಹಿ ವಿರೋಧಿ ನೀತಿ ಖಂಡಿಸಬೇಕಿದೆ. ಇದೆಲ್ಲ ನಿಲ್ಲಿಸಿ ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆಗಳಿಗೆ ಹೆಚ್ಚಿನ ಅನುದಾನ ನೀಡಿ, ನ್ಯಾಟೋ, ಸಾಮ್ರಾಜ್ಯಶಾಹಿ ಹಸ್ತ ಕ್ಷೇಪವನ್ನು ತಗ್ಗಿಸಬೇಕು ಎಂದು ಒತ್ತಾಯಿಸಿದರು.


ಜಿಲ್ಲಾ ಸಮಿತಿ ಸದಸ್ಯೆ ಪಿ.ಎಸ್.ಸಂಧ್ಯಾ, ಎಂ.ಉಮಾದೇವಿ, ಚಂದ್ರಶೇಖರ್ ಮೇಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net