

ಚಿತ್ರದುರ್ಗ: ಭೋವಿ ಅಭಿವೃದ್ಧಿ ನಿಗಮದ 2022-23ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ನೇರಸಾಲ, ಮೈಕ್ರೋ ಕ್ರೆಡಿಟ್, ಉದ್ದಮಶೀಲತಾ ಯೋಜನೆಗಳಿಗೆ ನಿಗದಿಪಡಿಸಿದ ಗುರಿ ತಲುಪದ, 2023-24ನೇ ಸಾಲಿನ ಯೋಜನೆಗಳ ಗುರಿ ಸಾಧನೆ ಶೂನ್ಯ ಇರುವುದಕ್ಕೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಶೀಘ್ರವೇ ಸಹಾಯಧನ, ನೇರವಾಗಿ ಖಾತೆಗೆ ಜಮೆ ಮಾಡಲು ನಿಗಮದ ವ್ಯವಸ್ಥಾಪಕರು ಕ್ರಮ ಕೈಗೊಳ್ಳಬೇಕು. ವ್ಯಾಪಕ ಪ್ರಚಾರ ನಡೆಸಬೇಕು. ನಗರಸಭೆ, ತಾಪಂ, ತಹಸೀಲ್ದಾರ್ ಕಚೇರಿ, ಗ್ರಾಪಂ ಸೇರಿ ಎಲ್ಲ ಸ್ಥಳೀಯ ಸಂಸ್ಥೆ ಕಚೇರಿಗಳ ಮಾಹಿತಿ ಫಲಕಗಳಲ್ಲಿ ಯೋಜನೆಗಳ ವಿವರಗಳನ್ನು ಪ್ರದರ್ಶಿಸಬೇಕು ಎಂದು ಸೂಚಿಸಿದರು.
ಕಾಯ್ದೆ ದುರುಪಯೋಗ ಸಲ್ಲದು: ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಧಿತರಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ಡಿಸಿ ಸೂಚಿಸಿದರು.
ಆರೋಪಿತರು ದಾಖಲಾಗಿರುವ ಪ್ರಕರಣಗಳಿಂದ ಮುಕ್ತರಾಗುತ್ತಿದ್ದಾರೆ. ಹೀಗಾಗಿ ಶಿಕ್ಷೆಗೆ ಗುರಿಯಾದವರ ಸಂಖ್ಯೆ ಅತ್ಯಂತ ಕಡಿಮೆ ಇದೆ. ಇದರಿಂದ ಕಾಯ್ದೆ ಉದ್ದೇಶ ಈಡೇರುವುದಿಲ್ಲ. ಕಾಯ್ದೆ ದುರುಪಯೋಗ ಪಡಿಸಿಕೊಂಡು ಸುಳ್ಳು ಪ್ರಕರಣ ದಾಖಲಾಗಬಾರದು ಎಂದು ತಾಕೀತು ಮಾಡಿದರು.
ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ ಮಾತನಾಡಿ, ಜೂನ್ ತಿಂಗಳಿಂದ ಈವರೆಗೂ ಜಿಲ್ಲಾದ್ಯಂತ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ 32 ಹೊಸ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ 3ರಲ್ಲಿ ಸುಳ್ಳು ಆರೋಪ ಮಾಡಿರುವುದು ತನಿಖೆಯಿಂದ ಧೃಡಪಟ್ಟಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸಕ್ತ ತ್ರೈಮಾಸಿಕದಲ್ಲಿ ದಾಖಲಾದ 32 ಪ್ರಕರಣಗಳಲ್ಲಿ 42 ಜನ ಸಂತ್ರಸ್ತರಿದ್ದು, ಈವರೆಗೆ ಒಟ್ಟು 29.77 ಲಕ್ಷ ರೂ. ಪರಿಹಾರ ಜಮೆ ಮಾಡಲಾಗಿದೆ. ಆಗಸ್ಟ್ ಅಂತ್ಯದ ವೇಳೆ 116 ದೌರ್ಜನ್ಯ ಪಕ್ರರಣಗಳು ದಾಖಲಾಗಿವೆ. ಈ ಪೈಕಿ ಜನವರಿಯಲ್ಲಿ 6, ಫೆಬ್ರವರಿ, ಮಾರ್ಚ್‌ನಲ್ಲಿ ತಲಾ 2, ಏಪ್ರಿಲ್ನ 1 ಪ್ರಕರಣದಲ್ಲಿ ಆರೋಪಿಗಳು ನ್ಯಾಯಾಲಯದಿಂದ ಬಿಡುಗಡೆ ಹೊಂದಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಮಾಹಿತಿ ನೀಡಿದರು.
ವಲಸೆ ಮಕ್ಕಳ ಪತ್ತೆಗೆ ಸೂಚನೆ: ಜಿಲ್ಲೆಯಿಂದ ವಿವಿಧೆಡೆ ವಲಸೆ ಹೋದ ಮಕ್ಕಳ ವಿವರವನ್ನು ವಾರದಲ್ಲಿ ಶಿಕ್ಷಣ ಇಲಾಖೆಯಿಂದ ಪತ್ತೆ ಹಚ್ಚಬೇಕು ಎಂದು ವೆಂಕಟೇಶ್ ಸೂಚಿಸಿದರು.
ಚಳ್ಳಕೆರೆ ತಾಲೂಕಿನಲ್ಲಿ ಒಟ್ಟು 74 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು. ಈ ಪೈಕಿ 69 ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗಿದೆ. ಬೇರೆ ಜಿಲ್ಲೆಯಿಂದ ಜಿಲ್ಲೆಗೆ ವಲಸೆ ಬಂದು, ಇಲ್ಲಿ ನೆಲೆಸಿರುವವರ ಮಕ್ಕಳ ವಿವರಗಳನ್ನು ಪಡೆದು, ಆಯಾ ಉಪನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ ಎಂದು ಡಿಡಿಪಿಐ ಮಂಜುನಾಥ ಸಭೆಗೆ ತಿಳಿಸಿದರು.
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಜಾಗೃತಿ ಸಮಿತಿ ಸದಸ್ಯರಾದ ಡಿ.ಓ.ಮೊರಾರ್ಜಿ, ಎಂ.ಡಿ.ನವಕೋಟಿ, ಬೋರಸ್ವಾಮಿ, ಹೇಮೇಗೌಡ ಇತರರಿದ್ದರು.