

ರಸ್ತೆಯಲ್ಲಿ ನಡೆದಾಡುವಾಗ ಅರಳೀಕಟ್ಟೆಯಲ್ಲೋ, ಫುಟ್ಪಾತ್ನ ಮಧ್ಯದಲ್ಲೋ ಸಣ್ಣ ಮೂರ್ತಿ ಇದ್ದರೂ ಕೈಮುಗಿದು ಮುಂದುವರೆಯುವ ಸಮಾಜ ನಮ್ಮದು. ಅಷ್ಟಾದರೂ ಈ ಪದ್ಧತಿಗೆ ಅನೇಕ ಕಡೆಯಿಂದ ವಿರೋಧ ಇದೆ. ದಾಳಿ ಮಾಡಿ ವಿಗ್ರಹ ಒಡೆದವರುಂಟು. ಮಾನಸಿಕ-ಬೌದ್ಧಿಕ ಮಟ್ಟದಲ್ಲಿ ಈ ಪರಂಪರೆಯನ್ನು ಒಡೆಯುವವರೂ ಉಂಟು. ‘ಈ ಕಲ್ಲಿಗ್ಯಾಕೆ ಪೂಜೆ’ ಎನ್ನುವುದು ಮೊದಲ ಏಟು. ‘ಈ ಕಲ್ಲನ್ನು ಒಡೆದರೆ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲದ ದೇವರು ನಮ್ಮನ್ನೇನು ಕಾಪಾಡುತ್ತಾನೆ...?’ ಇಂತಹ ಬಾಣಗಳು ನಮ್ಮ ಅನ್ವೇಷಣಾಪರ ಪೀಳಿಗೆಯ ಶ್ರದ್ಧೆ-ನಂಬಿಕೆಗಳನ್ನು ಸಡಿಲಗೊಳಿಸುತ್ತವೆ. ನಮ್ಮ ಸಂಸ್ಕೃತಿಯನ್ನು ರಕ್ಷಿಸಿಕೊಳ್ಳಬೇಕಾದರೆ ವಿಗ್ರಹಾರಾಧನೆಯ ರಹಸ್ಯವನ್ನು ಮೊದಲು ಭೇದಿಸಬೇಕು.
ನಮ್ಮ ದೇಶದ ಧ್ವಜವನ್ನು ಅವಮಾನಿಸಿದರೆ ಅದು ಶಿಕ್ಷಾರ್ಹ ಅಪರಾಧ. ‘ಬಣ್ಣದ ಬಟ್ಟೆಯಲ್ಲೇನಿದೆ’ ಎನ್ನುವುದಿಲ್ಲ. ಅದು ನಮ್ಮ ದೇಶವನ್ನೇ ಪ್ರತಿನಿಧಿಸುತ್ತದೆ. ಮಾತೃಭೂಮಿಗೆ ಸಲ್ಲಿಸುವ ಸಕಲ ಗೌರವವನ್ನು ಅದಕ್ಕೂ ಸಲ್ಲಿಸಬೇಕು. ನಮ್ಮ ಪ್ರೀತಿಪಾತ್ರರರೊಬ್ಬರ ಫೋಟೋ ಇದೆ ಅಂದುಕೊಳ್ಳೋಣ. ಯಾರಾದರೂ ಅದನ್ನು ನೆಲಕ್ಕೆ ಕೆಡವಿ ತುಳಿದರೆ ಆ ವ್ಯಕ್ತಿಗೆ ಮಾಡಿದ ಅಪಮಾನವೆಂದೇ ಭಾವಿಸುತ್ತೇವೆ. ಅಲ್ಲಿ ಆ ಫೋಟೋವನ್ನು ನೋಡಿದರೆ ನಮ್ಮಲ್ಲಿ ವ್ಯಕ್ತಿಯನ್ನೇ ನೋಡಿದ ಅನುಭವ ಉಂಟಾಗುತ್ತದೆ. ಆದ್ದರಿಂದ ಫೋಟೋ ಸಾಕ್ಷಾತ್ ವ್ಯಕ್ತಿಯೆಂದೇ ಭಾವಿಸುತ್ತೇವೆ. ಅಂತೆಯೇ ಮಹರ್ಷಿಗಳು ತಪಸ್ಯೆಯಲ್ಲಿ ಕಂಡನುಭವಿಸಿದ ಪ್ರಕಾಶಮಾನವಾದ ದೇವತಾಮೂರ್ತಿಗಳನ್ನು ತಮ್ಮ ಮನಃಪಟಲದಲ್ಲಿ ಸೆರೆಹಿಡಿದು ಶಿಲ್ಪಗಳಾಗಿ ಕೆತ್ತಿಸಿದರು. ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಎಲ್ಲರೂ ಆ ಅದ್ಭುತ ದೃಶ್ಯಗಳನ್ನು ಕಂಡು ಅನಂದಿಸುವಂತೆ ಮಾಡಿದರು.
ಒಂದು ಆಕ್ಷೇಪಣೆ ಮಾಡಬಹುದು. ತಪಸ್ಯೆಯಲ್ಲಿ ಮೂರ್ತಿಗಳನ್ನು ಕಂಡವರಿಗೆ ಮಾತ್ರ ದೇವಾಲಯದಲ್ಲಿ ವಿಗ್ರಹ ನೋಡಿದರೆ ಆ ಸ್ಮರಣೆ ಬರುತ್ತದೆ. ಜನರಿಗೆ ಏನು ಲಾಭ? ಜನರು ಆ ವಿಗ್ರಹವೇ ದೇವರು ಎಂದು ಭ್ರಮೆಗೊಂಡು ತೆಂಗಿನಕಾಯಿ ಒಡೆದು ಪೂಜೆ ಮಾಡುತ್ತಾರೆ. ಇದು ಮೌಢ್ಯವೆಂದು ಪ್ರಚಾರ ಮಾಡುವವರನೇಕರು. ಆದರೆ ಜನರಿಗೂ ಋಷಿಗಳಂತೆ ಒಳ ಅನುಭವ ದೊರಕಿಸುವ ವೈಜ್ಞಾನಿಕವಾದ ಒಂದು ಯಂತ್ರ ಇದು ಎಂಬುದು ರಹಸ್ಯವಾಗಿಯೇ ಉಳಿದಿದೆ. ಈ ರಹಸ್ಯವಿಜ್ಞಾನಕ್ಕೆ ಆಧಾರವೆಂದರೆ ಆ ವಿಗ್ರಹಗಳ ಮಾಟ, ಅವುಗಳ ನೋಟ ಮತ್ತು ಅದರಲ್ಲಿ ಜ್ಞಾನಿಯು ಹರಿಸುವ ಸಂಕಲ್ಪಪೂರ್ವಕ ಶಕ್ತಿ.
ಒಂದು ಮುಖಭಾವವನ್ನೋ, ಭಂಗಿಯನ್ನೂ ಚೆನ್ನಾಗಿ ನೋಡಿ ಆಲಿಸಿದರೆ ನಮ್ಮಲ್ಲಿಯೂ ಆ ಭಾವ- ಭಂಗಿಯ ಸಂಸ್ಕಾರ ಸೂಕ್ಷ್ಮರೂಪದಲ್ಲಿ ಹರಿದು ಉಳಿಯುತ್ತದೆ. ನಗುವ ಮುಖವ ನೋಡಿದರೆ ಕಿಂಚಿತ್ ಸಂತೋಷ, ಸಿಡುಕುಮೂತಿ ನೋಡಿದರೆ ಕಸಿವಿಸಿ ಉಂಟಾಗುತ್ತದೆ. ಭಾರವನ್ನು ಎತ್ತುತ್ತಿರುವವನ ಚಿತ್ರ ನೋಡಿದರೆ ಆ ವ್ಯಕ್ತಿಯ ಉಬ್ಬಿರುವ ಮಾಂಸಖಂಡಗಳನ್ನು ನೋಡಿದಾಗ ಅವನು ಪಡುತ್ತಿರುವ ಶ್ರಮ ನಮ್ಮ ಅನುಭವಕ್ಕೂ ಬರುತ್ತದೆ. ಅಂತೆಯೇ ಪೂಜಾರ್ಹ ದೇವತಾವಿಗ್ರಹಗಳಲ್ಲಿನ ಭಾವ ಭಂಗಿ ನೋಟಗಳು ಒಳ ಯೋಗದ ಸ್ಥಿತಿಗಳನ್ನು ಅಚ್ಚಳಿಯದೆ ಹೊರತರುತ್ತವೆ; ನಮ್ಮಲ್ಲಿಯೂ ಮೂಡಿಸುತ್ತವೆ. ಆ ಮಂದಹಾಸ, ಬಿಗಿದು-ಬಾಗಿರುವ ಕಟಿ, ಹಸ್ತ ವಿನ್ಯಾಸಗಳು, ಆಳಕ್ಕೆ ಹೋಗುವ ಅರೆದೆರೆದ ಕಣ್ಣು ದೃಷ್ಟಿ ಇವು ಒಳ ಆನಂದದ ಸಹಜಾಭಿವ್ಯಕ್ತಿ. ಅಲ್ಲಿ ಮನಸ್ಸು ಲೀನವಾದರೆ ನಮ್ಮಲ್ಲಿಯೂ ಒಳಯೋಗಸ್ಥಿತಿ ಉಂಟಾಗುತ್ತದೆ. ಮೂರ್ತಿಗಳಲ್ಲಿ ಅಲಂಕಾರವಾಗಿ ಕಟಿಬಂಧ, ತೋಳುಬಳೆಗಳು, ಕಿರೀಟಗಳು ಕಂಡುಬರುತ್ತವೆ. ಇವುಗಳ ಬಿಗಿತದಿಂದ ಪ್ರಾಣಸಂಚಾರ ನಿಯಂತ್ರಣವಾಗುತ್ತದೆ. ಆ ಪ್ರಾಣಸಂಚಾರ ನಮ್ಮಲ್ಲಿಯೂ ಉಂಟಾಗುತ್ತದೆ. ಕೈಲಿರುವ ಆಯುಧಗಳು ದಿವ್ಯ ಶಕ್ತಿಗಳ ಪ್ರತಿರೂಪ. ಅವುಗಳ ದರ್ಶನ ಮನಸ್ಸಿನ ಕ್ಷೋಭೆಯನ್ನು ನಾಶಮಾಡುತ್ತವೆ.
ಆದರೆ ಈ ಎಲ್ಲ ಉದ್ದಿಷ್ಟ ಪರಿಣಾಮ ದೊರಕಬೇಕಾದರೆ ನಮ್ಮಮನಸ್ಸು ಆ ವಿಗ್ರಹದಲ್ಲಿ ಒಂದಾಗಬೇಕು. ಎಲ್ಲಿ ಪ್ರೀತಿ-ವಿಶ್ವಾಸವಿದೆಯೋ ಅಲ್ಲಿ ಮನಸ್ಸು ಸಹಜವಾಗಿಯೇ ಅಂಟಿಕೊಳ್ಳುತ್ತದೆ. ಆದ್ದರಿಂದ ‘ಆ ವಿಗ್ರಹವನ್ನೇ ಒಳ ದೇವರ ಹೊರರೂಪವೆಂದು ಭಾವಿಸು, ಸಾಕ್ಷಾತ್ ಭಗವಂತ ಎಂದು ತಿಳಿ’ ಎಂಬ ಉಪದೇಶ. ಆ ವಿಗ್ರಹರೂಪದಲ್ಲಿರುವ ದೇವರಿಗೆ ಅಭಿಷೇಕ, ಅಲಂಕಾರಾದಿ ಮಾಡುವುದರಿಂದ ದೇವತಾಮೂರ್ತಿಯು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಮೂರ್ತಿಯು ಋಷಿಗಳ ನಿರ್ದೇಶನದಲ್ಲಿ, ಒಳ್ಳೆಯ ಶಿಲ್ಪಿಯಿಂದ ಕೆತ್ತಲ್ಪಟ್ಟಿದ್ದರೆ ಅದರ ರೂಪ-ಸೌಂದರ್ಯಗಳ ಧ್ಯಾನದಿಂದಲೇ ಸಾಧಕನು ಬ್ರಹ್ಮಾನುಭವ ಪಡೆಯಬಹುದು.
(ಲೇಖಕರು ಆಧ್ಯಾತ್ಮಿಕ ಚಿಂತಕರು, ಅಷ್ಟಾಂಗಯೋಗ ವಿಜ್ಞಾನಮಂದಿರಂ)