ವಾಲ್ಮೀಕಿ ತತ್ವಾದರ್ಶ ಬದುಕಿಗೆ ದಾರಿದೀಪ

Valmeeki
Published on

ಚಿತ್ರದುರ್ಗ: ಶ್ರೀ ಮಹರ್ಷಿ ವಾಲ್ಮೀಕಿ ಅವರ ತತ್ವಾದರ್ಶ ಬದುಕಿಗೆ ದಾರಿದೀಪವಾಗಿದ್ದು, ಯುವಸಮೂಹ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಲಹೆ ನೀಡಿದರು.

ಕೆಎಸ್‌ಆರ್‌ಟಿಸಿ ಚಿತ್ರದುರ್ಗ ಘಟಕದ ಆವರಣದಲ್ಲಿ ಮಂಗಳವಾರ ನಿಗಮದ ಚಿತ್ರದುರ್ಗ ವಿಭಾಗ, ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಶ್ರೀರಾಮಚಂದ್ರ ಪ್ರಭುವಿನ ಪರಿಪೂರ್ಣ ಜೀವನವನ್ನು ರಾಮಾಯಣದ ಕೃತಿಯ ಮೂಲಕ ಲೋಕಾರ್ಪಣೆಗೊಳಿಸಿದ ವಾಲ್ಮೀಕಿ ಮಹನೀಯರಾಗಿದ್ದಾರೆ. ಸಾಮಾಜಿಕ ನ್ಯಾಯದ ಸಂತರಾಗಿದ್ದಾರೆ. ಅವರ ಗುಣ ಮೈಗೂಡಿಸಿಕೊಂಡರೆ, ವಿಶ್ವಕ್ಕೆ ಶಾಂತಿ ದೊರೆಯಲಿದೆ ಎಂದು ಬಣ್ಣಿಸಿದರು.

ಮದಕರಿನಾಯಕರ ಐತಿಹಾಸಿಕ ಕೋಟೆಯನ್ನು ಅಭಿವೃದ್ಧಿಗೊಳಿಸಲು ಕ್ರಿಯಾಯೋಜನೆ ಸಿದ್ಧಗೊಂಡಿದೆ. ಜಿಲ್ಲೆಯ ಯಾವ ತಾಲೂಕಿನಲ್ಲಿ ಕೆಎಸ್‌ಆರ್‌ಟಿಸಿ ಘಟಕ ಇಲ್ಲವೋ ಅಲ್ಲಿ ನಿರ್ಮಿಸಲು ನಮ್ಮ ಸರ್ಕಾರ ಬದ್ಧವಿದೆ ಎಂದು ಭರವಸೆ ನೀಡಿದರು.

ಶಕ್ತಿ ಯೋಜನೆಯಿಂದಾಗಿ ಕೆಎಸ್‌ಆರ್‌ಟಿಸಿ ಲಾಭದತ್ತ ಸಾಗಿದೆ. ಈವರೆಗೂ 80 ಕೋಟಿಗೂ ಅಧಿಕ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಸರ್ಕಾರಕ್ಕೆ ಆಶೀರ್ವದಿಸಿದ್ದಾರೆ. ದೇಶದಲ್ಲಿ ಸಿದ್ದರಾಮಯ್ಯ ಹೊರತು ಪಡಿಸಿ ಯಾವ ಸಿಎಂ ಸಾಮಾಜಿಕ ನ್ಯಾಯದಡಿ ಅನುದಾನ ಬಿಡುಗಡೆ ಮಾಡಿಲ್ಲ. ರಾಜ್ಯ ಕಾಂಗ್ರೆಸ್ ಜನಪರ ಆಡಳಿತ ನೀಡಲಿದೆ ಎಂದು ಆಶ್ವಾಸನೆ ನೀಡಿದರು.

ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಎನ್ ಹೆಬ್ಬಾಳ್, ಪ್ರಾಂಶುಪಾಲ ಡಾ.ಎಚ್.ಗುಡ್ಡದೇಶ್ವರಪ್ಪ, ರೈತ ಮುಖಂಡ ಕೆ.ಪಿ.ಭೂತಯ್ಯ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ, ಅಧಿಕಾರಿಗಳಾದ ಸುರೇಶ್, ನಿರಂಜನಮೂರ್ತಿ, ಸಮಿತಿಯ ಎಂ.ಎಂ.ಹುಸೇನ್, ಆರ್.ಬಾಬುರಾಜ್, ಎನ್.ಪಿ.ರವಿ, ಮುಕುಂದ್ ತಳವಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net