ವಾರದೊಳಗೆ ಅನುದಾನ ಬಿಡುಗಡೆ ನಿರೀಕ್ಷೆ: ತನ್ವೀರ್ ಸೇಠ್ ಭರವಸೆ

5
ಅಲ್‌ಬ್ರದರ್ ವೃತ್ತದ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಗಣ್ಯರು ಭೂಮಿ ಪೂಜೆ ನೆರವೇರಿಸಿದರು. ತನ್ವೀರ್ ಸೇಠ್, ಸುನಂದಾ ಪಾಲನೇತ್ರ, ಅಯೂಬ್ ಖಾನ್, ಜಿ.ಲಕ್ಷ್ಮೀಕಾಂತ ರೆಡ್ಡಿ, ಆರಿಫ್ ಹುಸೇನ್, ಪುಷ್ಪಲತಾ ಜಗನ್ನಾಥ್, ಅಸ್ರತ್ ಉಲ್ಲಾ, ಸತ್ಯರಾಜ್ ಇದ್ದರು
Published on

ಮೈಸೂರು: ನರಸಿಂಹರಾಜ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಒಂದು ವಾರದೊಳಗೆ ಅಗತ್ಯ ಅನುದಾನ ಬಿಡುಗಡೆ ಆಗುವ ನಿರೀಕ್ಷೆ ಇದೆ ಎಂದು ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

ರಾಜೀವ್‌ನಗರದ 2ನೇ ಹಂತದಲ್ಲಿ ಅಲ್‌ಬ್ರದರ್ ವೃತ್ತವನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಬೇಡಿಕೆಗೆ ಅನುಗುಣವಾಗಿ ಹಾಗೂ ಇಲ್ಲಿಯ ಜನರ ಅಭಿಲಾಷೆಗೆ ತಕ್ಕಂತೆ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ. ಇನ್ನಷ್ಟು ಅಭಿವೃದ್ಧಿ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಅಗತ್ಯ ಕಾಮಗಾರಿಗೆ ಅನುದಾನ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಅಲ್‌ಬ್ರದರ್ ವೃತ್ತ ಸೇರಿದಂತೆ ಕೆಲವು ಭಾಗ ಈ ಹಿಂದೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸೇರಿತ್ತು. ಪುನರ್ವಿಂಗಡಣೆ ಬಳಿಕ 2008ರ ನಂತರ ಕೆಲವು ಬಡಾವಣೆ ಎನ್.ಆರ್.ಕ್ಷೇತ್ರಕ್ಕೆ ಸೇರಿಸಲಾಗಿದೆ. ಅಂದಿನಿಂದಲೂ ಒಂದೊಂದಾಗಿ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಹಿಂದೆ ಎನ್. ಆರ್.ಭಾಗದಲ್ಲಿ ಮಳೆ ಬಂದಾಗ ಚರಂಡಿ ನೀರು ಇಲ್ಲಿನ ತಗ್ಗು ಪ್ರದೇಶದಲ್ಲಿದ್ದ ಮನೆಗಳಿಗೆ ನುಗ್ಗುತ್ತಿತ್ತು. ಈಗ ಅಂತಹ ಸಮಸ್ಯೆ ಬಗೆಹರಿಸಲಾಗಿದೆ. ಬಹುತೇಕ ರಸ್ತೆಗಳು ವಿಶಾಲವಾಗಿದ್ದು, ಬೀದಿ ದೀಪ ಅಳವಡಿಸಲಾಗಿದೆ. ಕ್ಷೇತ್ರದ ಜನರಿಗೆ ಮೂಲಸೌಲಭ್ಯ ಒದಗಿಸುವುದಕ್ಕಾಗಿ ಶ್ರಮಿಸಲಾಗುತ್ತಿದೆ ಎಂದರು.

ನಿರ್ವಹಣಾ ವೆಚ್ಚವೇ ಭಾರ:
ಕ್ಷೇತ್ರದ ವ್ಯಾಪ್ತಿಯಲ್ಲಿ 680 ಉದ್ಯಾನಗಳಿವೆ. ಅವುಗಳ ಅಭಿವೃದ್ಧಿ ಯಾವ ಸರ್ಕಾರಕ್ಕೂ ಸಮಸ್ಯೆ ಅಲ್ಲ. ಆದರೆ ಅದರ ನಿರ್ವಹಣಾ ವೆಚ್ಚ ಭರಿಸುವುದು ಕಷ್ಟಕರ. ಕಳೆದ ಸಾಲಿನಲ್ಲಿ ವಾರ್ಡ್ ವಿಂಗಡಣೆ ಸಂದರ್ಭದಲ್ಲಿ 34, 35, 36, 39ನೇ ವಾರ್ಡ್‌ಗಳು ಪಾಲಿಕೆ ವ್ಯಾಪ್ತಿಯಲ್ಲೇ ದೊಡ್ಡ ವಾರ್ಡ್‌ಗಳಾದವು. ಈ ವ್ಯಾಪ್ತಿಯಲ್ಲಿ ರೆವಿನ್ಯೂ, ಖಾಸಗಿ, ಮುಡಾ, ವಸತಿ ಇಲಾಖೆ, ಸ್ಲಂ ಬೋರ್ಡ್‌ನಿಂದ ನಿರ್ಮಿಸಿರುವ ಮನೆಗಳಿವೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಸಬೇಕಾದರೂ ಆ ಸಂಸ್ಥೆ ಮಾಡಲಿ ಎಂದು ಮತ್ತೊಂದು ಸಂಸ್ಥೆ ಕಾಯುವಂತಾಗಿದೆ. ಪಾಲಿಕೆ, ಮುಡಾ, ಸ್ಲಂ ಬೋರ್ಡ್‌ನಲ್ಲೇ ಅಭಿವೃದ್ಧಿ ಕಾರ್ಯದ ವಿಚಾರದಲ್ಲಿ ಸಹಮತವಿಲ್ಲ. ಇದರಿಂದ ಕೆಲವು ಭಾಗ ಕಾಮಗಾರಿಯಿಂದ ವಂಚಿತವಾಗಿವೆ ಎಂದು ಶಾಸಕ ತನ್ವೀರ್ ಸೇಠ್ ಕಿಡಿಕಾರಿದರು.

ಪಾಲಿಕೆ ಸದಸ್ಯ ಅಯೂಬ್ ಖಾನ್ ಮಾತನಾಡಿ, ನಮ್ಮ 13ನೇ ವಾರ್ಡ್‌ಗೆ ನೀಡಿದ್ದ ಎಲ್ಲ ಅನುದಾನವನ್ನು ಕ್ರೋಡೀಕರಿಸಿ 2.50 ಕೋಟಿ ರೂ. ವೆಚ್ಚದಲ್ಲಿ ಈ ವೃತ್ತ ಅಭಿವೃದ್ಧಿಪಡಿಸಲಾಗುತ್ತಿದೆ. ವೃತ್ತದ ಮಧ್ಯಭಾಗದಲ್ಲಿ ಎತ್ತರದ ಹೂಜಿ ಇರುತ್ತದೆ. ಇದಕ್ಕೆ ದೀಪಾಲಂಕಾರ ಮಾಡಲಾಗುತ್ತದೆ ಎಂದರು.
ಮೇಯರ್ ಸುನಂದಾ ಪಾಲನೇತ್ರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭ ಉತ್ತಮ ವೃತ್ತ ನಿರ್ಮಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಲ್ಲಿ 6 ವೃತ್ತಗಳ ಅಭಿವೃದ್ಧಿಗೆ 15 ಕೋಟಿ ರೂ. ಬೇಕಾಗಿದೆ. ಈ ಕುರಿತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಉಪ ಮಹಾಪೌರ ಅನ್ವರ್ ಬೇಗ್(ಆಫ್ತಾಬ್), ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ, ಮಾಜಿ ಮೇಯರ್‌ಗಳಾದ ಆರಿಫ್ ಹುಸೇನ್, ಪುಷ್ಪಲತಾ ಜಗನ್ನಾಥ್, ಪಾಲಿಕೆ ಸದಸ್ಯರಾದ ಅಸ್ರತ್ ಉಲ್ಲಾ, ಸತ್ಯರಾಜ್, ಬಷೀರ್, ಸವೂದ್ ಖಾನ್, ಸಮೀವುಲ್ಲಾ, ಶೌಕತ್ ಪಾಷ, ಮಾಜಿ ಸದಸ್ಯ ಫೈರೋಜ್ ಖಾನ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net