ವಚನಗಳಿಂದ ಸಮಾಜದ ಕೊಳೆ ತೊಳೆದ ಮಾಚಿದೇವರು

IMG-20250201-WA0029
Published on

*ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯ

*ಶ್ರೀಮಡಿವಾಳ ಮಾಚಿದೇವರ ದಿನಾಚರಣೆ

ಚಾಮರಾಜನಗರದ: ಬಸವಣ್ಣನವರ ಶರಣ ಚಳುವಳಿಯ ಮಡಿವಾಳ ಮಾಚಯ್ಯ ತಮ್ಮ ವಚನಗಳಿಂದ ಸಮಾಜದ ಕೊಳೆ ತೊಳೆಯುವ ಕೆಲಸ ಮಾಡಿದ್ದಾರೆ ಎಂದು ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜಿಲ್ಲಾಡಳಿತ ಭವನದ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಕುಲಗುರು ಶ್ರೀಮಡಿವಾಳ ಮಾಚಿದೇವರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬಸವಣ್ಣನವರ ನೇತೃತ್ವದ 12ನೇ ಶತಮಾನದ ಶರಣ ಚಳುವಳಿಯಲ್ಲಿ ನುಡಿದಂತೆ ನಡೆದ ಮಡಿವಾಳ ಮಾಚಿದೇವಯ್ಯ ಶ್ರೇಷ್ಠ ಶಿವಶರಣರಾಗಿದ್ದಾರೆ. ನಾಡಿನಲ್ಲಿ ಅಸ್ಪೃಶ್ಯತೆ, ಅನಕ್ಷರತೆ ತಾಂಡವವಾಡುತ್ತಿದ್ದ ಕಾಲಘಟ್ಟದಲ್ಲಿ, ಶಿವಶರಣ ಮಾಚಿದೇವರು ತಮ್ಮ ವಚನಗಳ ಮೂಲಕ ಜಗತ್ತಿಗೆ ಸಮಾನತೆಯನ್ನು ಸಾರಿದರು. ಶ್ರೀಮಂಟೇಸ್ವಾಮಿ ಪರಂಪರೆಯಲ್ಲೂ ಶಿವಶರಣ ಮಡಿವಾಳ ಮಾಚಿದೇವರು ಸ್ವಾಮಿ ನಿಷ್ಠೆಯಿಂದ ನಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಸಮುದಾಯದ ಮುಖಂಡ ದುಂಡುಮಾದೇವ್ ಮಾತನಾಡಿ, ಮಡಿವಾಳ ಸಮುದಾಯವರು ಬಟ್ಟೆ ಹೊಗೆಯುವ ಕೆಲಸದಿಂದ ದೂರವಾಗುತ್ತಿದ್ದಾರೆ. ನಗರದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು 1 ಎಕರೆ ಜಾಗವನ್ನು ಕೊಡಿ ಎಂದು ಕೇಳುತ್ತಾ ಬಂದಿದ್ದೇವೆ. ಆದರೇ ಜನಪ್ರತಿನಿಧಿಗಳು ಯಾವುದೇ ಕ್ರಮವಹಿಸಿಲ್ಲ. ಕೇವಲ 20 ಗುಂಟೆ ಜಾಗವನ್ನಾದರೂ ಸಮುದಾಯಕ್ಕೆ ನೀಡಬೇಕು ಎಂದು ಶಾಸಕರದಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನಾ), ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉದಯ್ ಕುಮಾರ್ ಹಾಗೂ ಸಮುದಾಯದ ಮುಖಂಡರು ಹಾಜರಿದ್ದರು.

ಅಧಿಕಾರಿಗಳ ವಿರುದ್ಧ ಕಿಡಿ:

ಶ್ರೀಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದ ಬಳಿಕ ಅಧಿಕಾರಿಗಳ ವಿರುದ್ಧ ಸಮುದಾಯದ ಮುಖಂಡರು ಕಿಡಿ ಕಾರಿದರು. ಜಯಂತಿ ಕಾರ್ಯಕ್ರಮಕ್ಕೆ ಶಾಸಕರು ಬರುತ್ತಾರೆ ಎಂಬ ಮಾಹಿತಿಯನ್ನು ನೀಡಿಲ್ಲ. ಸಮುದಾಯದವರು ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ಅವಕಾಶ ಮಾಡಿಕೊಡಲಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉದಯ್‌ಕುಮಾರ್ ಹಾಗೂ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಅವರ ವಿರುದ್ಧ ಮುಖಂಡ ದುಂಡುಮಾದೇವ್ ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರವಾಗಿ ಸಮುದಾಯದ ಮುಖಂಡರು ಹಾಗೂ ಅಧಿಕಾರಿಗಳ ವಿರುದ್ಧ ಕೆಲಕಾಲ ಮಾತಿನ ಚಕಾಮಕಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net