

ಲಿಂಗದಹಳ್ಳಿ: ಲಿಂಗದಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿಯ ವಸತಿಗೃಹ ಉದ್ಘಾಟನೆಯಾಗಿ ಒಂದು ತಿಂಗಳಾಗಿದೆ. ಆದರೆ ವಸತಿಗೃಹಕ್ಕೆ ನೀರಿನ ಸೌಕರ್ಯವೇ ಇಲ್ಲದ ಕಾರಣ ಯಾವ ಸಿಬ್ಬಂದಿಯೂ ಆಗಮಿಸಿಲ್ಲ. ಹೀಗಾಗಿ ಕಟ್ಟಡಕ್ಕೆ ಬೀಗ ಹಾಕಲಾಗಿದೆ.
ಪೊಲೀಸ್ ಸಿಬ್ಬಂದಿ ಬೀರೂರು, ತರೀಕೆರೆ, ಚಿಕ್ಕಮಗಳೂರು ಮುಂತಾದ ಕಡೆಗಳಲ್ಲಿ ಬಾಡಿಗೆ ಮನೆಯಲ್ಲಿದ್ದು ಅಲ್ಲಿಂದ ಲಿಂಗದಹಳ್ಳಿ ಠಾಣೆಗೆ ಬಂದು ಕಾರ್ಯನಿರ್ವಹಿಸುತ್ತಿದ್ದರು. ಇದನ್ನು ತಪ್ಪಿಸಲು ಠಾಣೆ ಪಕ್ಕದಲ್ಲಿದ್ದ ನಿವೇಶನದಲ್ಲಿ 12 ಸಿಬ್ಬಂದಿಗೆ ವಸತಿಗೃಹ ನಿರ್ಮಾಣ ಮಾಡಲಾಗಿದೆ. ಆದರೆ ವಸತಿಗೃಹಗಳಿಗೆ ನೀರಿನ ಸಂಪರ್ಕವನ್ನೇ ಕಲ್ಪಿಸಿಲ್ಲ.
ವರ್ಷದ ಹಿಂದೆ ವಸತಿಗೃಹ ನಿರ್ಮಾಣ ಕಾರ್ಯ ಆರಂಭವಾದಾಗಿನಿಂದಲೂ ಗುತ್ತಿಗೆದಾರರು ಸಮೀಪದ ತೀರ್ಥಹಳ್ಳದಿಂದ ಟ್ರ್ಯಾಕ್ಟರ್, ಟ್ಯಾಂಕರ್ ಮೂಲಕ ನೀರು ತರಿಸುತ್ತಿದ್ದರು. ನೀರು ಕೊರತೆಯಿಂದ ಗೋಡೆಗಳಿಗೆ ಸರಿಯಾಗಿ ಕ್ಯೂರಿಂಗ್ ಆಗಿಲ್ಲ. ಹೇಗೋ ಕಟ್ಟಡ ಕಾಮಗಾರಿ ಪೂರೈಸಿ ಒಂದು ತಿಂಗಳ ಹಿಂದೆ ವಸತಿ ಕಟ್ಟಡ ಉದ್ಘಾಟನೆ ನೆರವೇರಿಸಲಾಯಿತು. ಕಟ್ಟಡ ನಿರ್ಮಾಣ ಮಾಡುವಾಗ ನೀರಿನ ವ್ಯವಸ್ಥೆ ಕಲ್ಪಿಸುವುದೂ ಗುತ್ತಿಗೆದಾರನ ಜವಾಬ್ದಾರಿ. ವಸತಿಗೃಹ ಹತ್ತಿರದ ರಸ್ತೆಯಲ್ಲಿ ನೀರಿನ ಪೈಪ್ಲೈನ್ ಇದೆ. ಆದರೆ ಗುತ್ತಿಗೆದಾರ ನೀರಿನ ಸಂಪರ್ಕ ಕಲ್ಪಿಸಿಲ್ಲ. ಆದರೂ ಕಟ್ಟಡವನ್ನು ಉದ್ಘಾಟಿಸಲಾಗಿದೆ.