

ಹಾಸನ: ಲಂಕಾಧಿಪತಿಯಾದ ರಾವಣೇಶ್ವರನು ತಪಸ್ಸಿನ ಮೂಲಕ ಪರಶಿವನನ್ನು ಒಲಿಸಿ ಅವನಿಂದ ಆತ್ಮಲಿಂಗ ಪಡೆದು ಲಂಕಾನಗರಿಗೆ ಕೊಂಡೊಯ್ಯುವ ಮಾರ್ಗಮಧ್ಯೆ ಶಿವನ ಪುತ್ರ ಗಣೇಶನು ರಾವಣನ ಗರ್ವವನ್ನು ಭಂಗಿಸಿ ಗೋಕರ್ಣ ಕ್ಷೇತ್ರದಲ್ಲಿ ಆತ್ಮಲಿಂಗ ನೆಲೆಸುವಂತೆ ಮಾಡಿದ ಮಹಾಮಹಿಮ ಎಂದು ಕರ್ನಾಟಕ ಗಮಕ ಕಲಾ ಪರಿಷತ್ತಿನ ಹಾಸನ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಗಮಕ ವಿದುಷಿ ರುಕ್ಮಿಣಿ ನಾಗೇಂದ್ರ ತಿಳಿಸಿದರು.
ನಗರದ ಕೃಷ್ಣರಾಜಪುರಂನ ಶೃಂಗೇರಿ ಶಂಕರ ಮಠದ ಹಾಸನ ಶಾಖೆಯಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ ಗಮಕ ಕಾರ್ಯಕ್ರಮದಲ್ಲಿ ಸರಳ ಕವಿ ಆಸೂರಿ ರಾಮಸ್ವಾಮಿ ಅಯ್ಯಂಗಾರ್ ವಿರಚಿತ ಶ್ರೀ ಗೋಕರ್ಣನಾಥೇಶ್ವರ ಮಹಿಮೆ ಎಂಬ ಕಾವ್ಯದಿಂದ ಆಯ್ದ ಭಾಗಕ್ಕೆ ವ್ಯಾಖ್ಯಾನ ನೀಡುತ್ತಾ ಹಿಂದುಗಳ ಪವಿತ್ರ ಕ್ಷೇತ್ರ ಗೋಕರ್ಣವನ್ನು ಭೂಕೈಲಾಸ ಎಂಬುದಾಗಿ ಕರೆಯುತ್ತಾರೆ ಎಂದು ನುಡಿದರು.
ಮೈಸೂರಿನ ಗಮಕ ವಿದುಷಿ ಸತ್ಯಲಕ್ಷ್ಮೀ ಪದ್ಮೇಶ್ ಅವರು ರಸಕ್ಕೆ ತಕ್ಕ ಸೂಕ್ತ ರಾಗಗಳನ್ನು ಅಳವಡಿಸಿ ತಮ್ಮ ಕಂಠಸಿರಿಯಿಂದ ಸುಶ್ರಾವ್ಯವಾಗಿ ಗಾಯನ ಮಾಡಿ ನೆರೆದಿದ್ದ ಶ್ರೋತೃಗಳ ಮನ ಗೆದ್ದರು. ಈ ಕಾರ್ಯಕ್ರಮಕ್ಕೂ ಮುಂಚೆ ಶಂಕರ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತಿನ ರಾಜ್ಯ ಘಟಕದ ಉಪಾಧ್ಯಕ್ಷ ಕಲಾಶ್ರೀ ಗಣೇಶ್ ಉಡುಪ, ಭಜನೆ ಕೇಶವಮೂರ್ತಿ, ಕೆಎಸ್ಎನ್ ಮೂರ್ತಿ, ಸಂಜೀವರಾವ್, ಕುಮಾರಸ್ವಾಮಿ, ರಾಜೇಂದ್ರ, ಪ್ರೇಮಲತಾ ರಾಜೇಂದ್ರ, ನಿವೃತ್ತ ಉಪನ್ಯಾಸಕ ವೇಣುಗೋಪಾಲ್, ಕಗ್ಗ ಖ್ಯಾತಿಯ ಬೆಂಗಳೂರಿನ ಅಶೋಕ್, ನಾಗೇಂದ್ರ, ನಾಗರಾಜರಾಯ, ಶಂಕರ ಮಠದ ವ್ಯವಸ್ಥಾಪಕ ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.