

ವಿಕ್ರಮ ನಾಡಿಗೇರ ಧಾರವಾಡ
ಅನ್ನದಾತರ ಅನುಕೂಲಕ್ಕೆ ನಗರದ ಹಳೇ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಿಸಿದ್ದ ರೈತ ಭವನ ಇನ್ನು ನೆನಪು ಮಾತ್ರ. ಹೊಸ ಎಪಿಎಂಸಿಯಲ್ಲೂ ರೈತ ಭವನ ಇರುವ ಕಾರಣಕ್ಕೆ ಹಳೇ ಭವನ ನೆಲಸಮಗೊಳಿಸಿ ವಾಣಿಜ್ಯ ಮಳಿಗೆ ಸಂಕಿರಣ ನಿರ್ಮಿಸಲು ಮಾರುಕಟ್ಟೆ ಸಮಿತಿ ತೀರ್ಮಾನಿಸಿದೆ.
ಹಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ನವೀಕರಣ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಕೆಲ ವರ್ಷಗಳ ಹಿಂದೆ ಹೊಸ ಕಟ್ಟಡ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದರೂ, ಮುಂದಿನ ಹಂತದ ಪ್ರಕ್ರಿಯೆ ನಡೆದಿರಲಿಲ್ಲ. ಕೆಲ ತಿಂಗಳ ಹಿಂದಷ್ಟೇ ಸಮಿತಿ ಸಭೆಯಲ್ಲಿ ಸಮಗ್ರ ಚರ್ಚಿಸಿ ಕ್ರಿಯಾ ಯೋಜನೆಗೆ ಮೇ 31ರಂದು ಒಪ್ಪಿಗೆ ಪಡೆಯಲಾಗಿದೆ. ಇದರ ಜತೆಗೆ ಮಾರುಕಟ್ಟೆ ನಿರ್ದೇಶಕರ ಕಚೇರಿಯಿಂದಲೂ ಒಪ್ಪಿಗೆ ಸಿಕ್ಕಿದೆ.
ವಿವಿಧ ಕಡೆಗಳಲ್ಲಿನ ರೈತರು ಎಪಿಎಂಸಿಗೆ ದವಸ ಧಾನ್ಯ ಮಾರಾಟ, ಖರೀದಿ ಹಾಗೂ ಇತರ ಕಾರ್ಯಗಳಿಗೆ ಆಗಮಿಸಿದಾಗ ಉಳಿದುಕೊಳ್ಳಲು ಅನುಕೂಲವಾಗುವಂತೆ ಸುಮಾರು 4 ಗುಂಟೆ ಜಾಗದಲ್ಲಿ ರೈತ ಭವನ ನಿರ್ಮಿಸಲಾಗಿತ್ತು. ಆದರೆ ರೈತರ ವಾಸದ ಮನೆ ಆಗಬೇಕಿದ್ದ ಭವನ ನಿರ್ವಹಣೆ ಕೊರತೆಯಿಂದ ಅನ್ನದಾತರಿಂದ ದೂರವಾಗಿತ್ತು. ಭವನ ತೆರವು ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಎಪಿಎಂಸಿ ಆಡಳಿತ ಮಂಡಳಿ ಸರ್ಕಾರಕ್ಕೆ ಪ್ರಸ್ತಾವ ಸಹ ಸಲ್ಲಿಸಿತ್ತು.
ಆಡಳಿತ ಮಂಡಳಿ ಪ್ರಸ್ತಾವಕ್ಕೆ ಅನುಮೋದನೆ ನೀಡಲು ವರ್ಷಾನುಗಟ್ಟಲೆ ಮೀನಮೇಷ ಎಣಿಸಿದ ಸರ್ಕಾರ, ಕಳೆದ ವರ್ಷ ತೆರವಿಗೆ ಆದೇಶಿಸಿತ್ತು. ಆದೇಶ ಬರುತ್ತಿದ್ದಂತೆ ಆಡಳಿತ ಮಂಡಳಿ ಸಭೆ ನಡೆಸಿ ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ಸಹ ನಡೆಸಿತ್ತು. ಆದರೆ ಯಾವ ರೀತಿ ಕಾಮಗಾರಿ ನಡೆಸಬೇಕು ಎಂಬ ತೀರ್ಮಾನ ಮಾಡಿರಲಿಲ್ಲ. ಇದೀಗ ಮತ್ತೊಮ್ಮೆ ಸಭೆ ನಡೆಸಿ ವಾಣಿಜ್ಯ ಸಂಕಿರಣ ನಿರ್ಮಾಣಕ್ಕೆ ತೀರ್ಮಾನಿಸಿದೆ.
ಸಮಿತಿ ವತಿಯಿಂದ ಒಟ್ಟು 3.68 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಒಪ್ಪಿಗೆ ಸಿಕ್ಕಿದೆ. ಈ ಪೈಕಿ 2.5 ಕೋಟಿ ರೂ. ಮೊತ್ತದಲ್ಲಿ ವಾಣಿಜ್ಯ ಮಳಿಗೆಗಳ ಸಂಕಿರಣ ನಿರ್ಮಿಸಲು ಚಿಂತಿಸಿದ್ದು, ಉಳಿದ ಮೊತ್ತದಲ್ಲಿ ಹೊಸ ಎಪಿಎಂಸಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಯೋಚಿಸಿದೆ. ಕ್ರಿಯಾ ಯೋಜನೆಗೆ ಒಪ್ಪಿಗೆ ಸಿಕ್ಕಿದ್ದರೂ, ಕಾಮಗಾರಿ ಅಂದಾಜು ಪತ್ರಿಕೆ ಸಿದ್ಧವಾಗಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ವರ್ಷಗಳೇ ಬೇಕಿದೆ.
ಕೊನೆಗೂ ಶಿಥಿಲಾವಸ್ಥೆ ಕಟ್ಟಡಕ್ಕೆ ಮುಕ್ತಿ ಕೊಡುವ ಕಾಲ ಕೂಡಿ ಬಂದಂತಾಗಿದೆ. ಕಟ್ಟಡ ಇನ್ನಷ್ಟು ಹಾಳಾಗುವ ಮುನ್ನ ಎಪಿಎಂಸಿ ಆಡಳಿತ ಮಂಡಳಿ ಸೂಕ್ತ ಯೋಜನೆ ರೂಪಿಸಿ ತ್ವರಿತವಾಗಿ ಕಾಮಗಾರಿ ಆರಂಭಿಸಿ ಜಾಗದ ಸದ್ಭಳಕೆ ಮಾಡಿಕೊಳ್ಳಲಿ ಎಂಬುದು ಎಲ್ಲರ ಆಶಯ.
ಹೊಸ ಎಪಿಎಂಸಿಯಲ್ಲೂ ರೈತ ಭವನ ಇರುವ ಕಾರಣಕ್ಕೆ ಹಳೇ ಭವನ ನೆಲಸಮಗೊಳಿಸಿ ವಾಣಿಜ್ಯ ಮಳಿಗೆ ಸಂಕಿರಣ ನಿರ್ಮಾಣಕ್ಕೆ ಸಮಿತಿ ತೀರ್ಮಾನಿಸಿದೆ. ಕ್ರಿಯಾ ಯೋಜನೆಗೆ ಸಮಿತಿ ಹಾಗೂ ನಿರ್ದೇಶಕರ ಕಚೇರಿಯಿಂದ ಒಪ್ಪಿಗೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಅಂದಾಜು ಪತ್ರ ಸಿದ್ಧಪಡಿಸಿ ಒಪ್ಪಿಗೆ ಪಡೆದು ಟೆಂಡರ್ ಕರೆದು ಕಾಮಗಾರಿ ನಡೆಸಲಾಗುವುದು.ವಿ.ಜಿ. ಹಿರೇಮಠ, ಎಪಿಎಂಸಿ ಕಾರ್ಯದರ್ಶಿ