

ಬೀದರ್: ಮೂರು ದಿನದ ಶ್ರೀ ರಾಘವೇಂದ್ರ ಮಹಾಸ್ವಾಮಿಗಳ 352ನೇ ಆರಾಧನಾ ಮಹೋತ್ಸವಕ್ಕೆ ಗುರುವಾರ ಇಲ್ಲಿನ ರಾಯರ ಮಠದಲ್ಲಿ ಶ್ರದ್ಧೆ, ಭಕ್ತಿಯೊಂದಿಗೆ ಚಾಲನೆ ದೊರೆಯಿತು.
ಬೆಳಗ್ಗಿನ ಜಾವದಿಂದ ರಾತ್ರಿವರೆಗೆ ಮಂದಿರದಲ್ಲಿ ವಿಶೇಷ ಪೂಜೆ, ಅಭಿಷೇಕ, ಭಜನೆ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ರಾಯರ ವೃಂದಾವನದ ಅಲಂಕಾರ ಕಣ್ಮನ ಸೆಳೆಯಿತು. ನಗರದಲ್ಲಿ ಅದ್ದೂರಿ ಪಲ್ಲಕ್ಕಿ ಉತ್ಸವ ನಡೆಯಿತು. ಸಹಸ್ರಾರು ಭಕ್ತರು ಪಾಲ್ಗೊಂಡರು.
ಶುಕ್ರವಾರ ಮಧ್ಯಾರಾಧನೆ ನಿಮಿತ್ತ ಬೆಳಗ್ಗೆ 5ಕ್ಕೆ ಸುಪ್ರಭಾತ, 6ಕ್ಕೆ ಅಷ್ಟೋತ್ತರ, 7.30ಕ್ಕೆ ಪಂಚಾಮೃತ ಅಭಿಷೇಕ, 9.30ಕ್ಕೆ ವೃಂದಾವನ ಅಲಂಕಾರ, 10.30ಕ್ಕೆ ತುಳಸಿ ಮತ್ತು ಪುಷ್ಪಾರ್ಚನೆ, 11ಕ್ಕೆ ಮಹಾ ರಥೋತ್ಸವ, ಮಧ್ಯಾಹ್ನ 1ಕ್ಕೆ ನೈವೇದ್ಯ, ಹಸ್ತೋದಕ ಮಹಾ ಮಂಗಳಾರತಿ, 3ಕ್ಕೆ ಸಾರ್ವಜನಿಕ ಮಹಾಪ್ರಸಾದ, ಸಂಜೆ 5ಕ್ಕೆ ಗಾಯತ್ರಿ ಭಟ್ ಮುಂಡಗೊಂಡ ಅವರಿಂದ ಸಂಗೀತ ಕಾರ್ಯಕ್ರಮ, ರಾತ್ರಿ 8.30ಕ್ಕೆ ಮಹಾ ಮಂಗಳಾರತಿ ಜರುಗಲಿದೆ.
ಸೆ.2ರಂದು ಉತ್ತರಾರಾಧನೆ ಮೂಲಕ ಮಹೋತ್ಸವಕ್ಕೆ ತೆರೆ ಬೀಳಲಿದೆ. ಬೆಳಗ್ಗೆ 5ಕ್ಕೆ ಸುಪ್ರಭಾತ, 6ಕ್ಕೆ ಅಷ್ಟೋತ್ತರ, 7.30ಕ್ಕೆ ಪಂಚಾಮೃತ ಅಭಿಷೇಕ, 9ಕ್ಕೆ ವೃಂದಾವನ ಅಲಂಕಾರ, 10.30ಕ್ಕೆ ತುಳಸಿ ಮತ್ತು ಪುಷ್ಪಾರ್ಚನೆ, ಮಧ್ಯಾಹ್ನ 12ಕ್ಕೆ ನೈವೇದ್ಯ, ಹಸ್ತೋದಕ ಮಂಗಳಾರತಿ, 2.30ಕ್ಕೆ ಅನ್ನಸಂತರ್ಪಣೆ, ಸಂಜೆ 6ಕ್ಕೆ ಭಜನೆ, ರಾತ್ರಿ 8ಕ್ಕೆ ರಥೋತ್ಸವ, 10ಕ್ಕೆ ಶಾಸೀಯ ಸಂಗೀತ ದರ್ಬಾರ್ ನಡೆಯಲಿದೆ.