ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನ ಡಿ. 29ಕ್ಕೆ

Pressmeet
Published on

ಚಿತ್ರದುರ್ಗ: ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಕಾಲೇಜು ಮೈದಾನದಲ್ಲಿ ಡಿ. 29, 30ರಂದು ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನ, ರಾಷ್ಟ್ರಕವಿ ಕುವೆಂಪು ಜನ್ಮದಿನ, ವೈಚಾರಿಕ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ಸಂಗಂ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 29ರಂದು ಬೆಳಗ್ಗೆ 10ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸುವರು. ಸಚಿವ ಸತೀಶ್ ಜಾರಕಿಹೊಳಿ ಸರ್ವಾಧ್ಯಕ್ಷತೆ ವಹಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನ್ಯಾಯಮೂರ್ತಿ ನಾಗಮೋಹನ್‌ದಾಸ್ ನಮ್ಮ ಸಂವಿಧಾನ ನಮ್ಮ ಹಕ್ಕು ವಿಷಯ ಕುರಿತು ಮಾತನಾಡಲಿದ್ದಾರೆ ಎಂದರು.

ಸಚಿವರಾದ ಪ್ರಿಯಾಂಕ್ ಖರ್ಗೆ ವಿಜ್ಞಾನ ಗ್ರಾಮಕ್ಕೆ ಚಾಲನೆ ನೀಡುವರು, ಡಾ.ಶರಣ ಪ್ರಕಾಶ್ ಪಾಟೀಲ್ ಕಲ್ಯಾಣ ಸಿರಿ ಸ್ಮರಣ ಸಂಚಿಕೆ, ಎನ್.ಎಸ್.ಬೋಸರಾಜು ವಿಜ್ಞಾನ ಸಿರಿ ಮಾಸ ಪತ್ರಿಕೆ, ಶಿವರಾಜ್ ಎಸ್ ತಂಗಡಗಿ ಕ್ಯಾಲೆಂಡರ್, ಸಂಸದ ರಾಜಾ ಅಮರೇಶ್ವರ ನಾಯಕ 2024ರ ದಿನಚರಿ, ಲಿಂಗಸುಗೂರು ಶಾಸಕ ಮಾನಪ್ಪ ಡಿ.ವಜ್ಜಲ್ ಕೃಷಿ ಸುದ್ದಿ ಮಾಸ ಪತ್ರಿಕೆ, ವಿಜ್ಞಾನಿ ಡಾ.ಎ.ಎಸ್.ಕಿರಣ್‌ಕುಮಾರ್ ವಿಜ್ಞಾನ ಗ್ರಾಮದ ಮುನ್ನೋಟ ಬಿಡುಗಡೆಗೊಳಿಸುವರು. ಎಎಲ್ಸಿ ಶರಣ ಗೌಡ ಪಾಟೀಲ್ ಬಯ್ಯಪುರ ವಿಜ್ಞಾನ ವಸ್ತು ಪ್ರದರ್ಶನ, ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಮಳಿಗೆ ಉದ್ಘಾಟಿಸುವರು ಎಂದು ತಿಳಿಸಿದರು.

ಇದೇ ವೇಳೆ ಜೀವಮಾನ ಸಾಧನ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಬಾರಿ ರಾಜ್ಯಮಟ್ಟದ ಎಚ್.ಎನ್. ಪ್ರಶಸ್ತಿಗೆ ಜಿಲ್ಲೆಯ ಸಾಮಾಜಿಕ ಹೋರಾಟಗಾರ ಗಣೇಶ್ ಅವರನ್ನು ಆಯ್ಕೆ ಮಾಡಲಾಗಿದೆ. 30ರಂದು ನಡೆಯುವ ಮಹಾ ಅಧಿವೇಶನದಲ್ಲಿ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಅಧ್ಯಕ್ಷತೆ ವಹಿಸುವರು. ಅಂದಾಜು 5 ಸಾವಿರ ಮಂದಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಉಪನ್ಯಾಸಕ ಡಾ.ಗುರುನಾಥ್ ಮಾತನಾಡಿ, ಮೂಢನಂಬಿಕೆಯಿಂದ ಮುಂದೊಂದು ದಿನ ದೇಶ ಅದೋಗತಿಗೆ ತಲುಪಲಿದೆ. ಹೀಗಾಗಿ ಎಲ್ಲರಲ್ಲೂ ವೈಜ್ಞಾನಿಕ ಚಿಂತನೆ ಬಿತ್ತುವ ಕೆಲಸವಾಗಬೇಕು. ಮೌಢ್ಯ ತಾಂಡವವಾಡುವ ಸ್ಥಳಗಳಲ್ಲೂ ಜಾಗೃತಿ ಅತ್ಯಗತ್ಯವಿದೆ ಎಂದು ತಿಳಿಸಿದರು.

ನಿವೃತ್ತ ಪ್ರಾಚಾರ್ಯ ಜ್ಞಾನಮೂರ್ತಿ, ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಲೋಕೇಶ್, ಖಜಾಂಚಿ ಪಿ.ಎ.ಬಸವರಾಜ್, ಪದಾಧಿಕಾರಿಗಳಾದ ಎಂ.ರಂಗಪ್ಪ, ದಯಾನಂದ್ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net