ರಾಜ್ಯದಲ್ಲಿ ನವೆಂಬರ್ ಕ್ರಾಂತಿಯಾಗುತ್ತದೆ ಎಂದು ಬಿಜೆಪಿಯವರು ಜಪ ಮಾಡುತ್ತಿದ್ದಾರೆ

parameshwar
Published on

ರಾಜ್ಯದಲ್ಲಿ ನವೆಂಬರ್ ಕ್ರಾಂತಿಯಾಗುತ್ತದೆ ಎಂದು ಬಿಜೆಪಿಯವರು ಜಪ ಮಾಡುತ್ತಿದ್ದಾರೆ. ಅವರ ಜಪ ಅವರು ಮಾಡಿಕೊಳ್ಳಲಿ ಆದರೆ, ನಮ್ಮಲ್ಲಿ ಅಂತಹ ಯಾವ ಬೆಳವಣಿಗೆಗಳೂ ನಡೆದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರನ್ನು ಜಪ ಮಾಡಬೇಡಿ ಎಂದು ನಾವು ಹೇಳುವುದಿಲ್ಲ. ಆದರೆ, ನಮ್ಮ ಪಕ್ಷದಲ್ಲಿ ಯಾವುದೇ ಬೆಳವಣಿಗೆ ನಡೆಯುತ್ತಿಲ್ಲ. ಮುಂದೆ ನಿಮಗೇ ಗೊತ್ತಾಗಲಿದೆ ಎಂದರು.

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪದ ಕುರಿತು ಪ್ರತಿಕ್ರಿಯಿಸಿ, ಶಾಸಕರಿಗೆ ಅನುದಾನ ನೀಡುತ್ತಿದ್ದೇವೆ. ಪ್ರತಿಪಕ್ಷಗಳ ಶಾಸಕರಿಗೂ 25 ಕೋಟಿ ಕೊಡಲಾಗಿದೆ. ಹಿಂದೆ ಬಿಜೆಪಿಯವರು ಏನು ಮಾಡಿದ್ದರು? ನಮಗೆ ಎಷ್ಟು ಕೊಟ್ಟಿದ್ದರು. ಆದರೆ, ನಾವು ತಾರತಮ್ಯ ಮಾಡುವುದಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡುತ್ತಿದ್ದೇವೆ ಎಂದರು.

ಬೆದರಿಕೆ ಹಾಕಿದವರ ವಿರುದ್ಧ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಯಾವ ಯಾವ ನಂಬರ್‌ಗಳಿಂದ ಬೆದರಿಕೆ ಬಂದಿದೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ. ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಬೆದರಿಕೆ ಹಾಕುವವರಿಗೆ ಅವರದೇ ಆದ ಕಾರಣ, ಮನಸ್ಥಿತಿ ಇರುತ್ತದೆ. ಅವರನ್ನು ಶಿಕ್ಷಿಸುವವರೆಗೆ ಈ ಮನಸ್ಥಿತಿ ಹೋಗುವುದಿಲ್ಲ.

ಆರ್‌ಎಸ್‌ಎಸ್ ಕುರಿತು ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದಿದ್ದಾರೆ. ಆ ಬಗ್ಗೆ ಮುಖ್ಯಮಂತ್ರಿಯವರು ಚರ್ಚಿಸಿ ಕ್ರಮ ಕೈಗೊಳ್ಳುತ್ತಾರೆ. ಪತ್ರವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನಾನು ಆ ಬಗ್ಗೆ ನಿರ್ಧಾರ ಹೇಳಲು ಸಾಧ್ಯವಿಲ್ಲ ಎಂದರು.

ರಸ್ತೆ ಗುಂಡಿ ಕಾರಣವಲ್ಲ: ಬೆಂಗಳೂರಿನ ರಸ್ತೆ ಗುಂಡಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಯಾರೋ ಒಬ್ಬರು ಇಬ್ಬರು ಏನೋ ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ಗುಂಡಿಮುಚ್ಚುವ ಕೆಲಸ ಮಾಡುತ್ತಿದ್ದೆ. ರಾಜ್ಯಕ್ಕೆ ಬರುವ ಕೈಗಾರಿಕೆಗಳನ್ನು ಆಹ್ವಾನ ಮಾಡಿ ಬಂಡವಾಳ ಹೂಡಲು ಸಹಾಯ ಮಾಡುತ್ತೇವೆ. ಈಗಾಗಲೇ ಕೋಲಾರ, ತುಮಕೂರಿಗೆ ಹಲವು ಕೈಗಾರಿಕೆಗಳು ಬಂದಿವೆ. ಗೂಗಲ್ ಆಂಧ್ರಪ್ರದೇಶಕ್ಕೆ ಹೋಗಿರುವುದಕ್ಕೆ ಅವರದೇ ಆದ ಕಾರಣವಿರಬಹುದು. ಇದಕ್ಕೆ ರಸ್ತೆ ಗುಂಡಿಯೇ ಕಾರಣವಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net