ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ: ಶಾಸಕ ಜಿ.ಡಿ.ಹರೀಶ್ ಗೌಡ

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ: ಶಾಸಕ ಜಿ.ಡಿ.ಹರೀಶ್ ಗೌಡ
Published on

ಮೈಸೂರು: ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ ಕಿಡಿಕಾರಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಆ ಪಕ್ಷದ ಶಾಸಕರು ಬೀದಿಯಲ್ಲಿ ನಿಂತು ಬೈಯ್ಯುವ ಪರಿಸ್ಥಿತಿ ಬಂದಿದೆ. ಐದಾರು ಬಾರಿ ಗೆದ್ದಿರುವ ಹಿರಿಯ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ರಾಜ್ಯ ಸರ್ಕಾರದ ಆಡಳಿತ ವೈಖರಿ ಹೇಗಿದೆ ಎಂಬುದನ್ನು ತೋರಿಸಿದೆ ಎಂದು ಹರಿಹಾಯ್ದರು.

ಆಶ್ರಯ ಮನೆಗಳ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರ ಕುರಿತು ಕಾಂಗ್ರೆಸ್‌ನ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ತನಿಖೆಯಾಗಲಿ, ಸತ್ಯಾಂಶ ಹೊರಬರಲಿ. ನಮ್ಮ ಕ್ಷೇತ್ರಕ್ಕೆ 500 ಆಶ್ರಯ ಮನೆಗಳ ಹಂಚಿಕೆಯಾಗಿದೆ. ಗ್ರಾಮ ಸಭೆ ನಡೆದ ಬಳಿಕ ಆಶ್ರಯ ಮನೆ ಹಂಚಿಕೆ ಮಾಡುತ್ತೇವೆ ಎಂದರು.

ಅಸಮಾಧಾನಿತ ಶಾಸಕರನ್ನು ಸಿಎಂ ಕರೆದು ಮಾತನಾಡಿದ್ದಾರೆ. ಕಾಂಗ್ರೆಸ್ ಶಾಸಕರ ಸಂಖ್ಯೆ ದೊಡ್ಡದಿದೆ. ಹೀಗಾಗಿ ಐದಾರು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರೆ ಯಾವುದೇ ರಾಜಕೀಯ ಬದಲಾವಣೆ ಆಗೋದಿಲ್ಲ. ಅಧಿಕಾರ ಹಂಚಿಕೆ ಕಾಂಗ್ರೆಸ್ ಆಂತರಿಕ ವಿಚಾರ ಎಂದು ಹೇಳಿದರು.

ಕಾಂಗ್ರೆಸ್‌ನ ಹಿರಿಯ ಶಾಸಕರ ಹೇಳಿಕೆ ಗಮನಿಸಿದರೆ ಸರ್ಕಾರ ಎಲ್ಲೋ ಒಂದುಕಡೆ ಎಡವಿದಂತಿದೆ. ಆಡಳಿತ ಪಕ್ಷದ ಶಾಸಕರಿಗೇ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಇನ್ನೂ ಪ್ರತಿಪಕ್ಷದ ಶಾಸಕರಿಗೆ ಸ್ಪಂದನೆ ಸಿಗುತ್ತಾ? ಎಂಬುದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಜನರು ದಡ್ಡರಲ್ಲ, ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಶಾಸಕರಿಗೆ ಹೆಚ್ಚು ಅನುದಾನ ಸಿಗುತ್ತಿದೆ. ಪ್ರತಿಪಕ್ಷದ ಶಾಸಕರಿಗೆ ಕಡಿಮೆ ಅನುದಾನ ನೀಡಲಾಗಿದ್ದು, ತಾರತಮ್ಯ ಆಗಿದೆ. ಎಲ್ಲ ಶಾಸಕರಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡಬೇಕು. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಗುಡುಗಿದರು

2028ಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಬರಲಿದೆ. ನಿಖಿಲ್ ಕುಮಾರಸ್ವಾಮಿ ಸಾಮಾನ್ಯ ಕಾರ್ಯಕರ್ತನಾಗಿ ಜೆಡಿಎಸ್ ಪಕ್ಷ ಸಂಘಟಿಸುತ್ತಿದ್ದಾರೆ. ರಾಜ್ಯ ಪ್ರವಾಸದ ವೇಳೆ ಅವರನ್ನು ಕಾರ್ಯಕರ್ತರು ಆತ್ಮೀಯವಾಗಿ, ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಿದ್ದಾರೆ. ಮುಂದೆ ನಾನೂ ಅವರ ಜತೆಗೆ ಹೋಗುತ್ತೇನೆ, ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ ಎಂದರು.

ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಬಳಿಕ ರಾಜ್ಯಕ್ಕೆ ಹೆಚ್ಚಾಗಿ ಬರಲು ಆಗುತ್ತಿಲ್ಲ. ಹೀಗಾಗಿ ನಿಖಿಲ್ ಜೆಡಿಎಸ್ ಪಕ್ಷ ಸಂಘಟನೆಯ ನೇತೃತ್ವ ವಹಿಸಿಕೊಳ್ಳುವಂತೆ ನಾವೆಲ್ಲರೂ ಒತ್ತಡ ಹಾಕ್ತಿದ್ದೇವೆ. 2028ಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ತರಲಿದ್ದೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net