ರಾಜಕೀಯ ಒಳಸುಳಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ!

palike belagavi
Published on

ಮಂಜುನಾಥ ಕೋಳಿಗುಡ್ಡ ಬೆಳಗಾವಿ: ರಾಜ್ಯದ ಶ್ರೀಮಂತ ಹಾಗೂ ದಕ್ಷ ಪಾಲಿಕೆಗಳಲ್ಲಿ ಒಂದಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ ಈಗ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ನಗರದ ಅಭಿವೃದ್ಧಿಗಿಂತ ಸ್ಥಳೀಯ ರಾಜಕೀಯ ಮೇಲಾಟದಿಂದ ಸ್ಥಳೀಯ ಸಂಸ್ಥೆ ತತ್ತರಿಸಿದೆ. ನಗರವೊಂದರ ಸಮಗ್ರ ಅಭಿವೃದ್ಧಿಗೆ ಕಾರಣವಾಗಬೇಕಿದ್ದ ಮಹತ್ವದ ಅಧಿಕಾರ ಬಾಹುಳ್ಯವುಳ್ಳ ಪಾಲಿಕೆಗೇ ಈ ದುಸ್ಥಿತಿ ಬಂದಿರುವುದು ನಗರವಾಸಿಗಳನ್ನು ಚಿಂತೆಗೀಡುಮಾಡಿದೆ. ರಾಜಕೀಯ ತಿಕ್ಕಾಟದಿಂದ ಪಾಲಿಕೆ ಸೂಪರ್‌ಸೀಡ್ ವಿಷಯ ಮುನ್ನೆಲೆಗೆ ಬಂದಿರುವುದು ಅಭಿವೃದ್ಧಿಯ ತಾಳ-ತಂತಿಯೇ ತಪ್ಪಿಹೋಗುವ ಆತಂಕ ತಂದಿಟ್ಟಿದೆ.

ನಗರದಲ್ಲಿ ರಸ್ತೆ ಅಗಲೀಕರಣ ವಿಷಯದಲ್ಲಿ ಭೂ ಸ್ವಾಧೀನ, ಪರಿಹಾರ ವಿಷಯದಲ್ಲಿ ಅಧಿಕಾರಿಗಳ ಎಡವಟ್ಟಿನಿಂದಾಗಿ ಉಂಟಾಗಿರುವ ಸಮಸ್ಯೆ ಪಾಲಿಕೆಯಲ್ಲಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಇದೇ ವಿಷಯ ಮುಂದಿಟ್ಟುಕೊಂಡು ಕೆಲವರು ಪಾಲಿಕೆಯನ್ನು ಸೂಪರ್‌ಸೀಡ್ ಮಾಡಲು ಪ್ರಯತ್ನಿಸುತ್ತಿರುವುದು ಆಡಳಿತಾರೂಢ, ಪ್ರತಿಪಕ್ಷದ ಸದಸ್ಯರನ್ನು ಕೆರಳುವಂತೆ ಮಾಡಿದೆ. ಮತ್ತೊಂದೆಡೆ ಪಾಲಿಕೆಯಲ್ಲಿನ ಕೆಲ ಬಿಜೆಪಿ, ಕಾಂಗ್ರೆಸ್, ಪಕ್ಷೇತರ ಸದಸ್ಯರು ಸಚಿವರು, ಶಾಸಕರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.

ಮಹಾನಗರ ಪಾಲಿಕೆಗೆ ವಿವಿಧ ತೆರಿಗೆ ರೂಪದಲ್ಲಿ ವಾರ್ಷಿಕ 65 ರಿಂದ 70 ಕೋಟಿ ರೂ.ಆದಾಯ ಬರುತ್ತದೆ. ಹೆಸ್ಕಾಂನಿಂದ ಪಾಲಿಕೆಗೆ ಬರಬೇಕಾಗಿದ್ದ 17 ಕೋಟಿ ರೂ.ಇಲ್ಲಿಯವರೆಗೆ ಬಂದಿಲ್ಲ. ಸರ್ಕಾರವು ವೇತನಾನುದಾನ ಹಂಚಿಕೆಯಲ್ಲಿ ಶೇ.15 ಕಡಿತಗೊಳಿಸಿದ್ದರಿಂದ ಪಾಲಿಕೆಗೆ 43 ಕೋಟಿ ರೂ. ಅನುದಾನ ಕೊರತೆ ಉಂಟಾಗಿದೆ.

ರಾಜ್ಯ ಸರ್ಕಾರದ ಇಂದಿರಾ ಕ್ಯಾಂಟೀನ್‌ಗಳಿಗೆ ಶೇ.20 ಅನುದಾನ ಪಾಲಿಕೆಯ ತೆರಿಗೆ ಹಣದಿಂದಲೇ ಪಾವತಿಸಲಾಗುತ್ತಿದೆ. ಈ ನಡುವೆ ಭೂಸ್ವಾಧೀನ ಪರಿಹಾರ ವಿವಿಧ ಪ್ರಕರಣಗಳನ್ನು ಮುಂದಿಟ್ಟುಕೊಂಡು ಪಾಲಿಕೆ ಸೂಪರ್‌ಸೀಡ್ ಮಾಡಲು ಕೆಲವರು ಪ್ರಯತ್ನಿಸುತ್ತಿರುವುದು ಪ್ರಜ್ಞಾವಂತರು ಕೆರಳುವಂತೆ ಮಾಡಿದೆ.

ಈಗಾಗಲೇ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ 2024-25ನೇ ಸಾಲಿನ ಬಜೆಟ್‌ನಲ್ಲಿ ಮೀಸಲಿಟ್ಟಿರುವ 10 ಕೋಟಿ ರೂ. ಅನುದಾನದಲ್ಲಿ ಪ್ರತಿಪಕ್ಷಗಳ ಸದಸ್ಯರ ವಾರ್ಡ್‌ಗಳಿಗೆ 6 ಕೋಟಿ ರೂ, ಆಡಳಿತಾರೂಢ ಸದಸ್ಯರ ವಾರ್ಡ್‌ಗಳಿಗೆ 4 ಕೋಟಿ ರೂ. ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಈ ನಡುವೆ ಧಾರವಾಡ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 20 ಕೋಟಿ ರೂ. ಭೂ ಪರಿಹಾರವನ್ನು ಪಾಲಿಕೆ ತೆರಿಗೆ ಆದಾಯದಲ್ಲಿಯೇ ನೀಡಲಾಗಿದೆ.

ಪಾಲಿಕೆ ಬಳಿ ಕೋಟ್ಯಂತರ ರೂ. ಹಣ ಲಭ್ಯವಿದೆ. ಆದರೆ, ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದೂವರೆ ವರ್ಷದಿಂದ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ. ಚರಂಡಿ ದುರಸ್ತಿ, ಉದ್ಯಾನ ಅಭಿವೃದ್ಧಿ, ರಸ್ತೆ ದುರಸ್ತಿ ಮಾಡಲು ನಮ್ಮಿಂದ ಸಾಧ್ಯವಾಗಿಲ್ಲ. ಪಾಲಿಕೆಯ ಪ್ರತಿ ಸಾಮಾನ್ಯ ಸಭೆಯಲ್ಲಿ ವಾರ್ಡ್‌ಗಳ ಅಭಿವೃದ್ಧಿಗಿಂತ ರಾಜಕೀಯ ಪ್ರೇರಿತ ವಿಷಯಗಳೇ ಹೆಚ್ಚು ಚರ್ಚೆ ಆಗುತ್ತಿವೆ ಎಂದು ಕಾಂಗ್ರೆಸ್, ಬಿಜೆಪಿ ಸದಸ್ಯರು ದೂರಿದ್ದಾರೆ.

ಸ್ಮಾರ್ಟ್‌ಸಿಟಿ ಕಾಮಗಾರಿಗಳಿಂದ ಹೊರೆ ಹೆಚ್ಚಳ: ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಯೋಜನೆಯಡಿ ಪೂರ್ಣಗೊಂಡಿರುವ ನೂರಾರು ಕೋಟಿ ರೂ.ವೆಚ್ಚದ ರಸ್ತೆಗಳು, ಉದ್ಯಾನ, ಅಂಡರ್‌ಗ್ರೌಂಡ್ ವಿದ್ಯುತ್ ಕೇಬಲ್, ಬಸ್ ನಿಲ್ದಾಣ, ಕಣಬರ್ಗಿ ಕೆರೆ, ಸೈಕಲ್ ಟ್ರಾೃಕ್, ಶುದ್ಧ ಕುಡಿಯುವ ನೀರಿನ ಘಟಕಗಳು, ಹೈಟೆಕ್ ಬಸ್ ತಂಗುದಾನ ನಿರ್ಮಾಣ ಸೇರಿ ವಿವಿಧ ಕಾಮಗಾರಿಗಳ ನಿರ್ವಹಣೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ.

12.58 ಕೋಟಿ ರೂ. ವೆಚ್ಚದಲ್ಲಿ 182 ಕಿಮೀ ಉದ್ದಕ್ಕೆ ಅಂಡರ್‌ಗ್ರೌಂಡ್ ಎಲ್‌ಟಿ ವಿದ್ಯುತ್ ಕೇಬಲ್ ಕಾಮಗಾರಿ ಅರ್ಧಕ್ಕೆ ಮೊಟಕುಗೊಂಡಿವೆ. ಸ್ಮಾರ್ಟ್‌ಸಿಟಿ ಯೋಜನೆಗಳ ಕಾಮಗಾರಿಗಳಿಂದ ಪಾಲಿಕೆ ಉಂಟಾಗಿರುವ ನಷ್ಟದ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ ಎಂದು ಸದಸ್ಯರು ದೂರಿದ್ದಾರೆ.

ಮಹಾನಗರ ಪಾಲಿಕೆಗೆ ಸರ್ಕಾರದಿಂದ ವಿಶೇಷ ಅನುದಾನ ಇರುವುದಿಲ್ಲ. ಪಾಲಿಕೆಯು ತನ್ನ ತೆರಿಗೆ ಆದಾಯದಲ್ಲಿಯೇ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದರ ಜತೆಗೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕು. ಪಾಲಿಕೆ ಸದಸ್ಯರಿಗೆ ಅಭಿವೃದ್ಧಿಗಿಂತ ತಮ್ಮ ಸುರಕ್ಷತೆಯೇ ಮುಖ್ಯವಾಗಿರುವುದು ದುರಂತ.| ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net