ರಸ್ತೆ ಅಭಿವೃದ್ಧಿಯಲ್ಲಿ ವಿಫಲ ಮತ್ತು ತಾರತಮ್ಯಕ್ಕೆ ಆಕ್ರೋಶ; ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಅರಿಗೇಪಲ್ಲಿ ಗ್ರಾಮಸ್ಥರು

13CBP7
Published on

ಬಾಗೇಪಲ್ಲಿ: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗ್ರಾಮದ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಎಂದು ಅಸಮಾಧಾನಗೊಂಡಿರುವ ಬಾಗೇಪಲ್ಲಿ ತಾಲೂಕಿನ ಕಾನಗಮಾಕಲಪಲ್ಲಿ ಗ್ರಾಪಂ ವ್ಯಾಪ್ತಿಯ ಅರಿಗೇಪಲ್ಲಿ ಗ್ರಾಮಸ್ಥರು, ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

ಗ್ರಾಮದ ಪ್ರವೇಶ ದ್ವಾರದಲ್ಲಿ ರಸ್ತೆ ಅಭಿವೃದ್ಧಿಯಲ್ಲಿ ವಿಫಲ ಮತ್ತು ತಾರತಮ್ಯ ಶೀರ್ಷಿಕೆಯಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅನ್ನು ಗ್ರಾಮಸ್ಥರು ಭಾನುವಾರ ಹಾಕಿದ್ದಾರೆ.

ಅರಿಗೇಪಲ್ಲಿಯ ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಹಲವು ಬಾರಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕುಡಿಯುವ ನೀರು, ಚರಂಡಿ ಸಮಸ್ಯೆ ಸೇರಿ ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ಗಮನ ಸೆಳೆಯಲಾಗಿದೆ. ಆದರೆ, ಸ್ಪಂದಿಸಲಿಲ್ಲ. ಕೇವಲ ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿ, ಮರೆಯುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆಕ್ರೋಶ.

ಈ ಭಾಗದ ಅಭಿವೃದ್ಧಿಯನ್ನು ಕಡೆಗಣಿಸಿರುವುದರಿಂದ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಲಾಗಿದೆ. ಜನಪ್ರತಿನಿಧಿಗಳು ಮತ್ತು ಪಕ್ಷದ ನಾಯಕರು ಊರಿಗೆ ಬಂದಾಗ ಬ್ಯಾನರ್ ನೋಡಿ, ಮುಜುಗರ ಅನುಭವಿಸಬೇಕು. ಹಾಗೆಯೇ ಇಲ್ಲಿನ ಸಮಸ್ಯೆ ಬಗೆಹರಿಯುವಂತಾಗಲು ಬ್ಯಾನರ್ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net