ಪ್ರವಾಸೋದ್ಯಮಕ್ಕೆ ಎಳ್ಳುನೀರು! : ಪಡುಮಲೆ ಅಭಿವೃದ್ಧಿ ನನೆಗುದಿಗೆ : 10 ವರ್ಷಗಳಿಂದ ನಿರ್ಲಕ್ಷ್ಯ

New Project
Published on

ಶಶಿ ಕುತ್ಯಾಳ, ಈಶ್ವರಮಂಗಲ

ಅವಳಿ ಕಾರಣಿಕ ಪುರುಷರಾದ ಕೋಟಿ - ಚೆನ್ನಯರ ಜನ್ಮಸ್ಥಳ ಪಡುಮಲೆಯನ್ನು ಪ್ರವಾಸೋದ್ಯಮ ತಾಣವಾಗಿಸುವ ನಿಟ್ಟಿನಲ್ಲಿ 10 ವರ್ಷಗಳ ಹಿಂದಿನ 5 ಕೋಟಿ ರೂ. ವೆಚ್ಚದ ಯೋಜನೆ ನನೆಗುದಿಗೆ ಬಿದ್ದಿದೆ. ಯೋಜನೆ ಅನುಷ್ಠಾನಕ್ಕಾಗಿ ಆರಂಭಿಕವಾಗಿ ಬಿಡುಗಡೆಗೊಂಡಿದ್ದ 1.50 ಕೋಟಿ ರೂ. ಅನುದಾನ ಖರ್ಚಾಗದೆ ಬಾಕಿಯಾಗಿದ್ದು, ಈ ಯೋಜನೆಗೆ ಎಳ್ಳುನೀರು ಬಿಡಲು ಅಧಿಕಾರಿಗಳು ಮತ್ತು ಜನಪ್ರತಿನಿಧಿ ಮುಂದಾಗಿದ್ದಾರೆ.

ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದ ವೇಳೆ 25 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದರು. ಬಳಿಕ ಸಿದ್ದರಾಮಯ್ಯ ಸರ್ಕಾರದಿಂದ 5 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಮೊದಲ ಹಂತದ ಕಾಮಗಾರಿಗಳಿಗಾಗಿ 1 ಕೋಟಿ ರೂ. ಅನುದಾನ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು.

ಪಡುಮಲೆ ಐತಿಹಾಸಿಕ ಕುರುಹುಗಳಿರುವ ಸ್ಥಳಗಳ ಪೈಕಿ 2.75 ಎಕರೆ ಸರ್ಕಾರಿ ಸ್ಥಳವಾದ ಶಂಖಪಾಲ ಬೆಟ್ಟದಲ್ಲಿ ಮೊದಲ ಹಂತದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗಿತ್ತು. ಶಂಖಪಾಲ ಬೆಟ್ಟದ ತುದಿಯಲ್ಲಿ ಸಭಾಭವನ, ಪ್ರಾಚ್ಯವಸ್ತು ಸಂಗ್ರಹಾಲಯ, ಗ್ರಂಥಾಲಯ, ಶೌಚಗೃಹ, ಮೆಟ್ಟಿಲು, ಹಸಿರು ಪಾರ್ಕ್, ನೆಲಸಮತಟ್ಟು, ನೀರಿನ ವ್ಯವಸ್ಥೆ, ಮಾಹಿತಿ ಫಲಕಗಳ ಅಳವಡಿಕೆ ಮೊದಲಾದ ವ್ಯವಸ್ಥೆಗಳನ್ನು ನಡೆಸಲು ಅಂದಾಜು 2.75 ಕೋಟಿ ರೂ. ಯೋಜನೆ ರೂಪಿಸಲಾಗಿತ್ತು. ಎರಡನೇ ಹಂತದಲ್ಲಿ ಕೋಟಿ- ಚೆನ್ನಯ ಹಾಗೂ ದೇಯಿ ಬೈದ್ಯೆತಿಯ ಬೃಹತ್ ಪ್ರತಿಮೆ ಸ್ಥಾಪನೆ ಮಾಡುವ ಯೋಜನೆ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿತ್ತು.

ಈ ಹಿಂದೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ರಮಾನಾಥ ರೈ ಶಂಖಪಾಲ ಬೆಟ್ಟದಲ್ಲಿ 2015ರ ಜನವರಿ 27ರಂದು ಪ್ರಥಮ ಹಂತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. 2016ರಲ್ಲಿ ಒಟ್ಟು 1.50 ಕೋಟಿ ರೂ. ಅನುದಾನ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಖಾತೆಗೆ ಬಿಡುಗಡೆಗೊಂಡಿತ್ತು. ಆದರೆ ಶಂಖಪಾಲ ಬೆಟ್ಟದಲ್ಲಿ ಬೆಟ್ಟಕ್ಕೇರಲು ತಾತ್ಕಾಲಿಕ ದಾರಿ ರಚನೆ, ಕೊಳವೆ ಬಾವಿ ನಿರ್ಮಾಣ, ನೀರಿನ ಟ್ಯಾಂಕೊಂದರ ನಿರ್ಮಾಣದಂತಹ ಸಣ್ಣಪುಟ್ಟ ಕೆಲಸಗಳನ್ನು ಬಿಟ್ಟರೆ, ಶಂಖಪಾಲ ಬೆಟ್ಟದಲ್ಲಿ ಮೊದಲ ಹಂತದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದ ಬೇರಾವುದೇ ಅಭಿವೃದ್ಧಿ ಕೆಲಸಗಳು ಈ ತನಕ ನಡೆದಿಲ್ಲ ಎಂಬುವುದು ವಾಸ್ತವಿಕ ಸತ್ಯ.

ಅನುದಾನ ವಾಪಸಾಗಿದೆಯೇ?

ಕೆಲವು ಸಮಯದ ಹಿಂದೆ ಶಾಸಕ ಅಶೋಕ್ ಕುಮಾರ್ ರೈ, ಪಡುಮಲೆ ಅಭಿವೃದ್ಧಿಗೆಂದು ಈ ಹಿಂದೆ ಬಿಡುಗಡೆಗೊಂಡ ಅನುದಾನ ರಿಟರ್ನ್ ಹೋಗಿದೆ ಎಂದು ಪಡುಮಲೆ ಪ್ರವಾಸೋದ್ಯಮ ಯೋಜನೆ ಕುರಿತಾಗಿ ಕೇಳಿದ್ದ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದರು. ಆದರೆ ರಿಟರ್ನ್ ಹೋಗಿಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಈಗಲೂ ಹೇಳುತ್ತಿದ್ದಾರೆ.

ಆಸಕ್ತಿಯನ್ನು ಚಿವುಟುವ ಕೆಲಸ!

ಸಹಾಯಕ ಕಮೀಷನರ್ ಆಗಿ ಬಂದಿದ್ದ ಯತೀಶ್ ಉಳ್ಳಾಲ್ ಕೋಟಿ- ಚೆನ್ನಯರ ಇತಿಹಾಸಕ್ಕೆ ಸಂಬಂಧಿಸಿ ಕುರುಹುಗಳಿರುವ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ಪಡುಮಲೆ ಪ್ರವಾಸೋದ್ಯಮ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದರೂ ಅವರ ಆಸಕ್ತಿಯನ್ನು ಚಿವುಟುವ ಕೆಲಸ ನಡೆದಿತ್ತು. ಸಂಬಂಧಪಟ್ಟ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಪಡುಮಲೆ ಪ್ರವಾಸೋದ್ಯಮ ಯೋಜನೆ ಕನಸಾಗಿ ಉಳಿಯುವಂತಾಗಿದೆ.

ಪಡುಮಲೆ ಪ್ರವಾಸೋದ್ಯಮ ಯೋಜನೆಗಾಗಿ 2016ರಲ್ಲಿ 1.50 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಪುತ್ತೂರಿನ ಸಹಾಯಕ ಕಮೀಷನರ್ ಖಾತೆಗೆ ಈ ಅನುದಾನ ಜಮೆಯಾಗಿದೆ. ಅಲ್ಲಿ ಕೆಲವೊಂದು ಅಭಿವೃದ್ಧಿ ಕೆಲಸಗಳು ನಡೆದಿದ್ದು, ಅನುದಾನ ವಾಪಸ್ ಹೋಗಿಲ್ಲ. ದಿಲೀಪ್ ಕುಮಾರ್ ಪ್ರವಾಸೋದ್ಯಮ ಇಲಾಖೆ ಜಿಲ್ಲಾ ಪ್ರಭಾರ ಅಧಿಕಾರಿ ಪಡುಮಲೆ ಚರಿತ್ರೆಯಲ್ಲಿ ಬ್ರಾಹ್ಮಣರಿಂದ ಹಿಡಿದು ಕಟ್ಟಕಡೆಯ ಸಮಾಜದ ಪಾತ್ರವೂ ಇದೆ. ಬಿಲ್ಲವ ಸಮಾಜದವರೇ ಸೇರಿಕೊಂಡು ಗೆಜ್ಜೆಗಿರಿಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅದರ ಬದಲು ಬಿಲ್ಲವರೇ ನೇತೃತ್ವ ವಹಿಸಿ ಎಲ್ಲರನ್ನೂ ಸೇರಿಸಿಕೊಂಡು ಮತ್ತು ಸಾಮೂಹಿಕ ಅಭಿಪ್ರಾಯಗಳನ್ನು ಪಡೆದು ಪಡುಮಲೆ ಅಭಿವೃದ್ಧಿಗೆ ವ್ಯವಸ್ಥೆ ಮಾಡುತ್ತಿದ್ದರೆ ಹೆಚ್ಚಿನ ಅರ್ಥ ಬರುತ್ತಿತ್ತು. ಕೆ.ಪಿ.ಸಂಜೀವ ರೈ ಕೆಳಗಿನ ಪೇರಾಲು ‘ಪರ್ಮಲೆ ನಾಡಿನ ವಿಶೇಷತೆಗಳು’ ಕೃತಿಕಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net