

ಹಾಸನ: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಪತ್ನಿ ರೇವತಿ ಪುತ್ರ ಅವ್ಯಾನ್ ಜತೆ ಸೋಮವಾರ ಹಾಸನ ಜಿಲ್ಲೆಯಲ್ಲಿ ಟೆಂಪಲ್ ರನ್ ಮಾಡಿದರು. ಚನ್ನರಾಯಪಟ್ಟಣ ತಾಲೂಕಿನ, ಯಲಿಯೂರು ಗ್ರಾಮದ ದೇವಿರಮ್ಮ ದೇವಿ ಹಾಗೂ ಹೊಳೆನರಸೀಪುರ ತಾಲೂಕಿನ, ಹರದನಹಳ್ಳಿಯ ದೇವೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಸೋಮವಾರ ಬೆಳಗ್ಗೆ ಮೊದಲು ಯಲಿಯೂರು ಗ್ರಾಮದ ದೇವಿರಮ್ಮ ದೇವಾಲಯಕ್ಕೆ ಭೇಟಿ ನೀಡಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಎಚ್.ಡಿ. ದೇವೇಗೌಡರ ಹುಟ್ಟೂರಾದ ಹರದನಹಳ್ಳಿಗೆ ಆಗಮಿಸಿ ದೇವೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ಫಲಿತಾಂಶದ ಮೇಲೆ ಯಾರೂ ಬೆಟ್ಟಿಂಗ್ ಕಟ್ಟಬೇಡಿ. ಫೋನ್ ಸ್ವಿಚ್ಡ್ ಆಫ್ ಮಾಡಿ ಮನೆಯಲ್ಲಿ ಹಾಯಾಗಿ ಮಲಗಿ. ಬೆಟ್ಟಿಂಗ್ ಕಟ್ಟಿ ಆರ್ಥಿಕ ನಷ್ಟ ಅನುಭವಿಸಬೇಡಿ. ಬೆಟ್ಟಿಂಗ್‌ನಿಂದಾಗಿ ಯುವಕರು ಆತ್ಮಹತ್ಯೆಗೆ ಶರಣನಾಗುತ್ತಿದ್ದಾರೆ. ಆ ಭಗವಂತ ಇದ್ದಾನೆ. ಜನರು, ದೇವರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸವಿದೆ. ಹೀಗಾಗಿ ಯಾರೂ ಕೂಡ ಬೆಟ್ಟಿಂಗ್ ಕಟ್ಟಬೇಡಿ ಎಂದು ಮಾಧ್ಯಮದ ಮೂಲಕ ಮನವಿ ಮಾಡುತ್ತೇನೆ ಎಂದು ಹೇಳಿದರು.
ಜೆಡಿಎಸ್ ಪಕ್ಷದ ಇತಿಹಾಸದಲ್ಲಿ ಇಂತಹ ಚುನಾವಣೆ ನಡೆದಿರಲಿಲ್ಲ. ಇದು ಇತಿಹಾಸದ ಪುಟಗಳಲ್ಲಿ ಉಳಿಯುವ ಚುನಾವಣೆ. ಕ್ಷೇತ್ರದ ಜನತೆ, ತಾಯಿಂದಿರು ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದಾರೆ. ಯುವಕರು, ಹಿರಿಯರು ಉತ್ಸಾಹದಿಂದ ನನ್ನ ಜೊತೆ ಹೆಜ್ಜೆ ಹಾಕಿದ್ದಾರೆ. ನಮ್ಮ ಮನೆ ದೇವರ ಸಮ್ಮುಖದಲ್ಲಿ ಹೇಳುತ್ತಿದ್ದೇನೆ. ನನ್ನ ಹೃದಯದಲ್ಲಿ ಸಂಪೂರ್ಣ ಗೆಲುವಿನ ವಿಶ್ವಾಸವಿದೆ. ದೇವೇಗೌಡರು, ಕುಮಾರಣ್ಣ 1200 ಕೋಟಿ ರೂ. ಅನುದಾನ ತಂದು ಚನ್ನಪಟ್ಟಣ ಅಭಿವೃದ್ಧಿ ಮಾಡಿದ್ದಾರೆ. ಜನರು ಆಶೀರ್ವಾದ ಮಾಡಿದರೆ ಮುಂದಿನ ದಿನಗಳಲ್ಲಿ ಯುವ ಸಮುದಾಯಕ್ಕೆ ಆದ್ಯತೆ ಕೊಡುತ್ತೇನೆ. ಉದ್ಯೋಗ ಸೃಷ್ಟಿ ಮಾಡಲು ದೃಢ ಸಂಕಲ್ಪ ಮಾಡಿದ್ದೇನೆ ಎಂದು ಭರವಸೆ ನೀಡಿದರು.
ಹಳೇ ಮೈಸೂರು, ಉತ್ತರ ಕರ್ನಾಟಕ ಭಾಗದಿಂದ ಮುಖಂಡರು ನನ್ನ ಪರವಾಗಿ ಬಂದು ಚುನಾವಣೆಯಲ್ಲಿ ಗೆಲುವು ಆಗಲೇಬೇಕು ಎಂದು ಶ್ರಮಿಸಿದ್ದಾರೆ. ಪಕ್ಷದ ಅಸ್ತಿತ್ವದ ಪ್ರಶ್ನೆ ಎಂದು ಎಲ್ಲರೂ ನನ್ನ ಗೆಲುವಿಗಾಗಿ ಶ್ರಮಿಸಿದ್ದಾರೆ. ಇದನ್ನು ನಾನು ನನ್ನ ಜೀವನದ ಮುಂದಿನ ದೀರ್ಘ ಕಾಲ ರಾಜಕಾರಣದ ಉದ್ದಗಲಕ್ಕೂ ನೆನಪಿಸಿಕೊಳ್ಳುತ್ತೇನೆ. ಚನ್ನಪಟ್ಟಣದಿಂದ ರಾಜ್ಯ ಸರ್ಕಾರವನ್ನು ಎದುರಿಸುವ ನಾಯಕ ಬೇಕು ಎಂದು ಬಿ.ಎಸ್.ಯಡಿಯೂರಪ್ಪ ಅವರು ಟಿಕೆಟ್ ಘೋಷಣೆ ಮಾಡಿದರು. ನನ್ನ ಚುನಾವಣೆಗಾಗಿ ಬಹಳ ಜನ ದುಡಿದಿದ್ದಾರೆ, ಮಾಜಿ ಸಚಿವರು, ಶಾಸಕರು ಪ್ರಚಾರ ಮಾಡಿದ್ದಾರೆ ಎಂದು ನೆನಪಿಸಿಕೊಂಡರು.
ಮತದಾನದ ಬಳಿಕ ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ದೇವಿರಮ್ಮ ದೇವಾಲಯಕ್ಕೆ ಹಾಗೂ ಶಿವನ ಗುಡಿಗೆ ಕಳೆದ ವರ್ಷ ಭೇಟಿ ನೀಡಿದ್ದೆ. ನನ್ನ ಧರ್ಮಪತ್ನಿ ದೇವಾಲಯಕ್ಕೆ ಹೋಗಬೇಕು ಅಂದುಕೊಂಡಿದ್ದರು. ಅದರಂತೆ ದೇವಾಲಯಕ್ಕೆ ಪತ್ನಿ, ಪುತ್ರನ ಜತೆ ಬಂದಿದ್ದೇನೆ. ಉಪಚುನಾವಣೆಯಲ್ಲಿ ನನ್ನ ಸ್ಪರ್ಧೆ ಅತ್ಯಂತ ಅನಿರೀಕ್ಷಿತ ಬೆಳವಣಿಗೆ. ಸ್ಪರ್ಧಿಸಲು ಅನೇಕ ಕಾರಣಗಳಿವೆ. ಅದು ತೆರೆದ ಪುಸ್ತಕ, ಎಲ್ಲವೂ ಜಗತ್‌ಜಾಹೀರಾತಾಗಿದೆ. ಪಕ್ಷದ ವರಿಷ್ಠರು ಆದೇಶ ಹೊರಡಿಸಿದಾಗ ತಲೆ ಬಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದರು.
ಈ ವೇಳೆ ಶಾಸಕ ಎಚ್.ಪಿ. ಸ್ವರೂಪ್ ಹಾಗೂ ಜೆಡಿಎಸ್ ಮುಖಂಡರು ಜತೆಗಿದ್ದರು.