

ಆಲಮಟ್ಟಿ: ಅಧಿಕ ಮಾಸ ಹಾಗೂ ಶ್ರಾವಣ ಮಾಸದಲ್ಲಿ ದೇವರ ಸ್ತುತಿ, ನಾಮಸ್ಮರಣೆ ಮಾಡಿದರೆ ಅಧಿಕ ಫಲ ದೊರೆಯುವುದಲ್ಲದೇ, ಭಗವಂತನ ಕೃಪೆಗೆ ಪಾತ್ರರಾಗಬಹುದು ಎಂದು ತಿರುಮಲ ತಿರುಪತಿ ದೇವಾಲಯದ ದಾಸ ಸಾಹಿತ್ಯ ಪ್ರೊಜೆಕ್ಟ್ನ ವಿಶೇಷ ಅಧಿಕಾರಿ ಪಂಡಿತ ಆನಂದತೀರ್ಥ ಆಚಾರ್ಯ ಪಗಡಾಲ ಹೇಳಿದರು.
ಸಮೀಪದ ಸುಕ್ಷೇತ್ರ ಯಲಗೂರದಲ್ಲಿ ತಿರುಮಲ ತಿರುಪತಿ ದೇವಾಲಯ, ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ಹಾಗೂ ಅವಳಿ ಜಿಲ್ಲೆಗಳ ನಾನಾ ಕಡೆ ಇರುವ ಶ್ರೀಗುರು ರಾಘವೇಂದ್ರ ಸೇವಾ ಸಮಿತಿಯ ಭಜನಾ ಮಂಡಳಿ ಸಹಯೋಗದಲ್ಲಿ, ತಿರುಪತಿಯಿಂದ ಆಗಮಿಸಿದ ಭೂಸಮೇತ ಶ್ರೀನಿವಾಸ ದೇವರಿಗೆ ಸೋಮವಾರ ಶಾಸ್ತ್ರೋಕ್ತವಾಗಿ ಪುಷ್ಪಾರ್ಚನೆ ಮಾಡಿದ ನಂತರ ಅವರು ಆಶೀರ್ವಚನ ನೀಡಿದರು.
ಪ್ರತಿಯೊಬ್ಬರೂ ತಿರುಪತಿಗೆ ಹೋಗಿ ಶ್ರೀನಿವಾಸನ ದರ್ಶನ ಅಸಾಧ್ಯ. ಈ ಉತ್ಸವ ಮೂರ್ತಿಗೆ ಆರಾಧಿಸಿದರೆ ಅದರಷ್ಟೇ ಫಲಗಳು ದೊರೆಯುತ್ತವೆ ಎಂದರು.
ತಿರುಪತಿಯಿಂದ ಬಂದ ವಿವಿಧ ಆಚಾರ್ಯರು ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಿದರು. ಸುಮಾರು ಎರಡು ಗಂಟೆಗಳ ಕಾಲ ಮಂತ್ರ ಘೋಷಣೆಯೊಂದಿಗೆ ನಾನಾ ವಿಧದ ಪುಷ್ಪ ಸಮರ್ಪಣೆ, ಬೆಳಗ್ಗೆ ಸುಪ್ರಭಾತ ಕಾರ್ಯಕ್ರಮ ಜರುಗಿತು. ನಂತರ ಇಲ್ಲಿಯ ಉತ್ತರಾದಿಮಠದ ಪ್ರಮೋದಾತ್ಮ ಗೋ ಸಂರಕ್ಷಣಾ ಕೇಂದ್ರಕ್ಕೆ ತೆರಳಿ ಅಲ್ಲಿ ಗೋ ಪೂಜೆ ನೆರವೇರಿಸಲಾಯಿತು. ಪ್ರಾಣದೇವರ ಅಭಿಷೇಕ, ಶ್ರೀನಿವಾಸ ದೇವರ ಪುಷ್ಪಾರ್ಚನೆಯ ನಂತರ ಫಲಮಂತ್ರಾಕ್ಷತೆ, ಅನ್ನಸಂತರ್ಪಣೆ ಜರುಗಿತು.
ರಾಘವೇಂದ್ರ ಸೇವಾ ಸಮಿತಿ ಸಂಚಾಲಕ ಪ್ರಕಾಶ ಅಕ್ಕಲಕೋಟೆ, ಟಿಟಿಡಿ ದಾಸ ಸಾಹಿತ್ಯ ಪ್ರೊಜೆಕ್ಟ್ ಸಂಚಾಲಕ ಪ್ರವೀಣ ಜೋಶಿ, ಅರವಿಂದ ಕುಲಕರ್ಣಿ, ವಿಜಯ ಜೋಶಿ, ಪಾಂಡುರಂಗಾಚಾರ್ಯ ಹೊಸೂರ, ಗೋಪಾಲ ಗದ್ದನಕೇರಿ, ಬದರಿನಾರಾಯಣ ಚಿಮ್ಮಲಗಿ, ಗೋಪಾಲಾಚಾರ್ಯ ಹಿಪ್ಪರಗಿ, ವಿಠ್ಠಲಾಚಾರ್ಯ ಗದ್ದನಕೇರಿ, ಮಧ್ವಾಚಾರ್ಯ ಆಲೂರ, ಬಿಂದಾಚಾರ್ಯ ಹಿಪ್ಪರಗಿ, ಪ್ರಹ್ಲಾದ ಜೋಶಿ, ಗೋವಿಂದ ದೇಶಪಾಂಡೆ, ವೆಂಕಟೇಶ ಖಾಸನೀಸ್, ವಿಕಾಸ ಪದಕಿ, ಶ್ರೀಹರಿ ಕುಲಕರ್ಣಿ, ರಾಕೇಶ ಕುಲಕರ್ಣಿ ಇತರರಿದ್ದರು.