ಮೈಸೂರು: ದ್ವಿತೀಯ ಪಿಯು ಪರೀಕ್ಷೆ ನಿರಾತಂಕ; 1,171 ಮಕ್ಕಳು ಗೈರು

mysore
Published on

ಮೈಸೂರು: ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಮಹತ್ವದ ಘಟ್ಟವಾದ ದ್ವಿತೀಯ ಪಿಯು ಪರೀಕ್ಷೆ ಶನಿವಾರ ಆರಂಭವಾಯಿತು. ಜಿಲ್ಲೆಯಲ್ಲಿ ಸುಗಮವಾಗಿ ಪರೀಕ್ಷೆ ನಡೆಯಿತು.

2024-25ನೇ ಸಾಲಿನ ಪರೀಕ್ಷೆ ಮಾ.20ರ ವರೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದ್ದು, ಮೊದಲ ದಿನ ಕನ್ನಡ ಮತ್ತು ಅರಬಿಕ್ ಭಾಷಾ ಪರೀಕ್ಷೆ ಸುಸೂತ್ರವಾಗಿ ಜರುಗಿತು. ಮೈಸೂರು ನಗರದಲ್ಲಿ 27, ಗ್ರಾಮಾಂತರ ವ್ಯಾಪ್ತಿಯಲ್ಲಿ 23 ಸೇರಿದಂತೆ ಜಿಲ್ಲೆಯ 50 ಪರೀಕ್ಷಾ ಕೇಂದ್ರಗಳಲ್ಲಿ ಶೇ.97.35ರಷ್ಟು ಮಕ್ಕಳು ಪರೀಕ್ಷೆಗೆ ಹಾಜರಾಗಿ ಉತ್ತರ ಬರೆದರು.

1,171 ವಿದ್ಯಾರ್ಥಿಗಳು ಗೈರಾದರು. 29,138 ಪೈಕಿ 28,367 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದರು. ಅರೆಬಿಕ್ ಭಾಷಾ ಪರೀಕ್ಷೆ ತೆಗೆದುಕೊಂಡಿದ್ದ ಏಕೈಕ ವಿದ್ಯಾರ್ಥಿ ಹಾಜರಾಗಿದ್ದರು.

ಮೈಸೂರು ತಾಲೂಕಿನ 27, ನಂಜನಗೂಡು ತಾಲೂಕಿನ 5, ತಿ.ನರಸೀಪುರ ತಾಲೂಕಿನ 4, ಹುಣಸೂರು ತಾಲೂಕಿನ 4, ಕೆಆರ್ ನಗರ ತಾಲೂಕಿನ 2, ಸಾಲಿಗ್ರಾಮ ತಾಲೂಕಿನ 1, ಎಚ್.ಡಿ.ಕೋಟೆ ತಾಲೂಕಿನ 3 ಹಾಗೂ ಪಿರಿಯಾಪಟ್ಟಣ ತಾಲೂಕಿನ 4 ಪರೀಕ್ಷಾ ಕೇಂದ್ರಗಳಲ್ಲೂ ಪರೀಕ್ಷಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.

ಪರೀಕ್ಷಾ ಅಕ್ರಮದ ತಡೆಗೆ ನಿಗಾ ವಹಿಸಲಾಗಿತ್ತು. ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧಿಸಲಾಗಿತ್ತು. ಪರೀಕ್ಷೆ ಸಂಪೂರ್ಣ ವೆಬ್ ಕಾಸ್ಟಿಂಗ್ ಮಾಡಲಾಯಿತು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು ಇರಿಸಲಾಗಿತ್ತು. ರೂಟ್ ಆಫೀಸರ್‌ಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಖಜಾನೆಯಿಂದ ತೆಗೆದುಕೊಂಡು ಹೋಗುವ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಕ್ರಮ ವಹಿಸಲಾಗಿತ್ತು.

ಪರೀಕ್ಷಾ ವೇಳೆ ಎಲ್ಲಿಯೂ ಅಹಿತಕರ ಘಟನೆಗಳು ನಡೆದಿಲ್ಲ. ಪರೀಕ್ಷಾ ಅಕ್ರಮಗಳೂ ಜರುಗಿಲ್ಲ. ವಿದ್ಯಾರ್ಥಿಗಳಲ್ಲೂ ಯಾವುದೇ ಗೊಂದಲ ಆಗಲಿಲ್ಲ. ನಿರಾಂತಕರವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಮರಿಸ್ವಾಮಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net