ಮುಡಾ ಹಗರಣ: ಲೋಕಾಯುಕ್ತರಿಗೆ ಮತ್ತೆರಡು ದೂರು

muda case
Published on

ಮೈಸೂರು: ಮುಡಾ ಅಕ್ರಮ ನಿವೇಶನ ಹಂಚಿಕೆ ಕುರಿತು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತರಿಗೆ ಮತ್ತೆ ಎರಡು ದೂರು ನೀಡಿದ್ದು, 50:50 ಅನುಪಾತದಡಿಯಲ್ಲಿ 928 ನಿವೇಶನಗಳು ಅಕ್ರಮವಾಗಿ ಹಂಚಿಕೆಯಾಗಿವೆ ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 14 ನಿವೇಶನಗಳನ್ನು ಉದಾಹರಣೆಗೆ ಇಟ್ಟುಕೊಂಡು ಉಳಿದ ಎಲ್ಲ ಕೇಸ್‌ಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು.

928 ನಿವೇಶನಗಳ ಹಂಚಿಕೆಯಲ್ಲಿ ಅತಿ ಹೆಚ್ಚು ಅಕ್ರಮ ನಡೆದಿರುವುದು ಹಿಂದೆ ಮುಡಾದ ಆಯುಕ್ತರಾಗಿದ್ದ ಡಿ.ಬಿ.ನಟೇಶ್ ಮತ್ತು ಜಿ.ಟಿ.ದಿನೇಶ್‌ಕುಮಾರ್ ಅವರ ಅಧಿಕಾರ ಅವಧಿಯಲ್ಲಿ ಆಗಿದೆ. ಅಕ್ರಮವಾಗಿ ನಿವೇಶನ ಪಡೆದವರ ಜತೆಗೆ ಈ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು. ಅದಕ್ಕಾಗಿ ಉಭಯ ಅಧಿಕಾರಿಗಳನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಕೆಸರೆಯ ಸರ್ವೇ ನಂ.462ರಲ್ಲಿನ 0.37 ಗುಂಟೆ ಮತ್ತು ಸರ್ವೇ ನಂ.464 ರಲ್ಲಿನ 3.16 ಎಕರೆಯ ಜಮೀನನನ್ನು ಭೂ ಸ್ವಾಧೀನದಿಂದ ಕೈ ಬಿಡಲಾಗಿದೆ ಎಂದು ಹೇಳುವ ದಾಖಲೆಗಳ ನೈಜತೆಯ ಬಗ್ಗೆ ವೈಜ್ಞಾನಿಕ ವರದಿಗಳನ್ನು ಪಡೆದುಕೊಂಡು ತನಿಖೆಯನ್ನು ನಡೆಸಬೇಕು. ಈ ಮೂಲಕ ಸತ್ಯಾಸತ್ಯತೆಯನ್ನು ತಿಳಿದುಕೊಂಡು ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ವಂಚಿಸಿರುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.

ವಿಡಿಯೋ ಸಹಿತ ಇಡಿಗೆ ದೂರು

ಮುಡಾ 50:50 ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಜಾರಿ ನಿರ್ದೇಶನಾಲಯಕ್ಕೂ(ಇಡಿ) ದೂರು ನೀಡಿದ್ದಾರೆ.

ನಿವೇಶನ ಹಂಚಿಕೆ ವಿಚಾರದಲ್ಲಿ ತಮಗೆ ಸಿಕ್ಕ ವಿಡಿಯೋದ ಪ್ರತಿಯೊಂದಿಗೆ ದೂರ ಪ್ರತಿಯನ್ನು ಇಡಿ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.

ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿನ ಮನೆಯ ಆವರಣದಲ್ಲಿ ಕಾರಿನಲ್ಲಿ ಕುಳಿತು ಬಿಲ್ಡರ್ ಮಂಜುನಾಥ್ ಅವರ ಆಪ್ತ ಮತ್ತು ಶಿವಣ್ಣ ಅವರೊಂದಿಗೆ ಮುಡಾ ನಿವೇಶನದ ಸೆಟಲ್‌ಮೆಂಟ್ ಡೀಡ್ ವಿಚಾರದಲ್ಲಿ ನಡೆದ ಹಣ ವಿನಿಮಯ ಮಾಡಿಕೊಳ್ಳುತ್ತಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಕೋರಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net