ಮಾ.2 ರಂದು ಕುಂಟೋಜಿಯಲ್ಲಿ ಸಾವಯವ ಕೃಷಿ ಚಿಂತನ

Kanheri, Invocation to the Invisible Kadasiddheshwar Sri, Siddhagiri Math, Channaveera Deva Leadership, Niyoga, Kuntoji, Organic Farming Thought, Muddebihala,
ಕೊಲ್ಹಾಪುರ ಹತ್ತಿರದ ಕನ್ಹೇರಿಯ ಸಿದ್ಧಗಿರಿ ಮಹಾಸಂಸ್ಥಾನ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಚನ್ನವೀರ ದೇವರು, ಪ್ರಭುಗೌಡ ದೇಸಾಯಿ, ಪ್ರಭುರಾಜ ಕಲಬುರ್ಗಿ, ಶರಣು ಸಜ್ಜನ, ಮಹಾಂತೇಶ ಬೂದಿಹಾಳಮಠ, ಗುರುಲಿಂಗಪ್ಪ ಸುಳ್ಳೊಳ್ಳಿ, ಸಂಗನಗೌಡ ಪಾಟೀಲ ಇತರರಿದ್ದರು.
Published on

ಮುದ್ದೇಬಿಹಾಳ: ಸುಕ್ಷೇತ್ರ ಕುಂಟೋಜಿಯಲ್ಲಿ ಮಾ.2 ರಂದು ಬೆಳಗ್ಗೆ 11 ಗಂಟೆಗೆ ಕುಂಟೋಜಿಯ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಚನ್ನವೀರ ದೇವರ ಗುರುಪಟ್ಟಾಧಿಕಾರಿ ಮಹೋತ್ಸವ ಅಂಗವಾಗಿ ನಡೆಯಲಿರುವ ಸಾವಯವ ಕೃಷಿ ಚಿಂತನ- ರೈತರ ಜತೆ ಸಂವಾದ ಕಾರ್ಯಕ್ರಮದಲ್ಲಿ ಸಂವಾದ ನಡೆಸಿಕೊಡಲು ಮಹಾರಾಷ್ಟ್ರದ ಕೊಲ್ಹಾಪುರ ಹತ್ತಿರದ ಕನ್ಹೇರಿಯ ಸಿದ್ಧಗಿರಿ ಮಹಾಸಂಸ್ಥಾನ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಒಪ್ಪಿಗೆ ನೀಡಿದ್ದಾರೆ.

ಕನ್ಹೇರಿ ಮಠದಲ್ಲಿ ಬುಧವಾರ ಅವರನ್ನು ಭೇಟಿಯಾದ ಚನ್ನವೀರ ದೇವರ ನೇತೃತ್ವದ ಗುರುಪಟ್ಟಾಧಿಕಾರ ಮಹೋತ್ಸವ ಸಮಿತಿ ಪದಾಧಿಕಾರಿಗಳು, ಕುಂಟೋಜಿ ಗ್ರಾಮಸ್ಥರ ಪ್ರತಿನಿಧಿಗಳ ನಿಯೋಗಕ್ಕೆ ಕಾರ್ಯಕ್ರಮಕ್ಕೆ ಆಗಮಿಸುವ ಅಭಯ ನೀಡಿದ ಸ್ವಾಮೀಜಿ ಅವರು, ಅದೇ ದಿನ ಸಂಜೆ 5 ಗಂಟೆಗೆ ಹುಬ್ಬಳ್ಳಿಯಲ್ಲಿ ನಡೆಯಬೇಕಿರುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ತಮ್ಮ ಅನಿವಾರ್ಯತೆ ತೆರೆದಿಟ್ಟು, ಅಂದು ಸರಿಯಾಗಿ ಬೆಳಗ್ಗೆ 11ಕ್ಕೆ ಕುಂಟೋಜಿಗೆ ಬರಲಿದ್ದು ಮಧ್ಯಾಹ್ನ 1 ಗಂಟೆಯವರೆಗೆ ಕೇವಲ 2 ತಾಸು ಮಾತ್ರ ರೈತರೊಂದಿಗೆ ಸಂವಹನ ನಡೆಸಿ ಮಧ್ಯಾಹ್ನ 1 ಗಂಟೆಗೆ ತಾವು ಹುಬ್ಬಳ್ಳಿಯತ್ತ ನಿರ್ಗಮಿಸಲು ಅನುವು ಮಾಡಿಕೊಡುವ ಅಭಿಲಾಷೆ ವ್ಯಕ್ತಪಡಿಸಿ ಎಲ್ಲರಿಂದ ಒಪ್ಪಿಗೆ ಪಡೆದರು.

ಯಾವುದೇ ದೊಡ್ಡ ಪ್ರಮಾಣದ ಪೆಂಡಾಲ್ ಹಾಕದೆ ಒಂದು ದೊಡ್ಡ ಮರದ ನೆರಳಿನಲ್ಲಿ ರೈತರನ್ನು ಸೇರಿಸಿ ಸಂವಾದಕ್ಕೆ ಆಸ್ಪದ ಮಾಡಿಕೊಟ್ಟರೆ ಸಾಕು ಎಂದು ಸರಳತೆ ಮೆರೆದ ಸ್ವಾಮೀಜಿ ಅವರು ನಿಯೋಗದೊಂದಿಗೆ ಕೆಲಹೊತ್ತು ಮಾತನಾಡಿದರು.

ಚನ್ನವೀರ ದೇವರು ಮಾತನಾಡಿ, ಸಾವಯವ ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿರುವ ಸ್ವಾಮೀಜಿಗಳ ಮಾತುಗಳನ್ನು ಆಲಿಸಲು ತಾಲೂಕಿನ ಕೃಷಿಕರು ಮಾತ್ರವಲ್ಲದೆ ವಿವಿಧೆಡೆಯಿಂದ ಬರುವ ಕೃಷಿಕರು ಹೆಚ್ಚು ಆಸಕ್ತರಾಗಿರುವುದನ್ನು ಗಮನಕ್ಕೆ ತಂದು ಈ ಭಾಗದಲ್ಲಿ ತಮ್ಮ ಪದಾರ್ಪಣೆ, ಸಕಾಲಿಕ ಸಂದೇಶಗಳು ನಮ್ಮ ರೈತರಿಗೆ ತಲುಪಬೇಕಾದ ಅವಶ್ಯಕತೆ ಇದೆ. ತಾವು ಸಮಯ ನೀಡಿದ್ದು ನಮ್ಮೆಲ್ಲ ರೈತರ ಸುದೈವವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಗುರುಪಟ್ಟಾಧಿಕಾರ ಮಹೋತ್ಸವ ಸಮಿತಿ ನಿಯೋಗದ ಪರವಾಗಿ ಚನ್ನವೀರ ದೇವರ ನೇತೃತ್ವದಲ್ಲಿ ಸಮಿತಿ ಕಾರ್ಯಾಧ್ಯಕ್ಷ- ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಸಮಿತಿ ಖಜಾಂಚಿ- ಉದ್ಯಮಿ ಶರಣು ಸಜ್ಜನ, ಕುಂಟೋಜಿಯ ಮಾಜಿ ಪ್ರಧಾನ ಸಂಗನಗೌಡ ಪಾಟೀಲ, ಯುವ ಮುಖಂಡರಾದ ಗುರುಲಿಂಗಪ್ಪ ಸುಳ್ಳೊಳ್ಳಿ, ಪ್ರಚಾರ ಸಮಿತಿ ಅಧ್ಯಕ್ಷ ಮಹಾಂತೇಶ ಬೂದಿಹಾಳಮಠ ಇತರರು ಸ್ವಾಮೀಜಿ ಅವರನ್ನು ಲಪುಷ್ಪದೊಂದಿಗೆ ಸತ್ಕರಿಸಿ, ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡುವ ಮೂಲಕ ಅಧಿಕೃತ ಆಹ್ವಾನ ನೀಡಿದರು.
ಸ್ವಾಮೀಜಿ ಅವರು ಕೂಡ ಚನ್ನವೀರ ದೇವರನ್ನು ಸನ್ಮಾನಿಸಿ ತೆಂಗಿನಕಾಯಿ ನೀಡಿ ಸಮ್ಮತಿ ಸೂಚಿಸಿ ಶರಣ ಸಂಪ್ರದಾಯ ಪಾಲಿಸಿದರು. ನಿಯೋಗದೊಂದಿಗೆ ತೆರಳಿದ್ದ ಮಾಧ್ಯಮದವರ ಪರವಾಗಿಯೂ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. 40ಕ್ಕೂ ಹೆಚ್ಚು ಜನ ನಿಯೋಗದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net