ಮಳೆ, ಬೆಳೆಗಾಗಿ ಕೋಟಿ ಜಪ ಯಜ್ಞ

koti japa
Published on

ಹುಬ್ಬಳ್ಳಿ: ನಗರದ ಪ್ರಸಿದ್ಧ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಮಳೆ, ಬೆಳೆ, ಸುಭಿಕ್ಷೆಗಾಗಿ ಪ್ರಾರ್ಥಿಸಿ ಆಗಸ್ಟ್ 16ರಿಂದ ಸೆಪ್ಟೆಂಬರ್ 15ರವರೆಗೆ ಕೋಟಿ ಜಪ ಯಜ್ಞ ಆಯೋಜಿಸಲಾಗಿದೆ ಎಂದು ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿಯ ಕೋಟಿ ಜಪ ಯಜ್ಞ ಕಾರ್ಯಕ್ರಮದ ಚೇರ್ಮನ್ ಶಾಮಾನಂದ ಪೂಜೇರಿ ತಿಳಿಸಿದರು.

ಮಠದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 16ರಂದು ಬೆಳಗ್ಗೆ 9 ಗಂಟೆಗೆ ಮಠದ ಮುಖ್ಯ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ಉದ್ಘಾಟಿಸುವರು. ನಿತ್ಯ ಬೆಳಗ್ಗೆ 9ರಿಂದ 11ರವರೆಗೆ ಕೋಟಿ ಜಪ ಯಜ್ಞ ಕಾರ್ಯಕ್ರಮ ನಡೆಯಲಿದೆ. ನಿತ್ಯ ಕನಿಷ್ಠ 100 ದಂಪತಿಗಳು ‘ಓಂ ನಮಃ ಶಿವಾಯ’ ಮಹಾಮಂತ್ರ ಜಪಿಸುವಂತೆ ವ್ಯವಸ್ಥೆ ಮಾಡಿಕೊಂಡಿದ್ದೇವೆ. ರಾತ್ರಿ ಬೇರೆ ಊರುಗಳಿಂದ ಬಂದು ಮಾರನೇ ದಿನ ಜಪದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಈ ಹಿಂದೆ ಶ್ರೀ ಮಠದ ವತಿಯಿಂದ 2015ರಲ್ಲಿ ವಿಶ್ವಶಾಂತಿಗಾಗಿ ಕೋಟಿ ಜಪ ಯಜ್ಞ ಆಯೋಜಿಸಲಾಗಿತ್ತು. ಈ ಬಾರಿ ಮಳೆಯ ಕೊರತೆಯ ಹಿನ್ನೆಲೆಯಲ್ಲಿ ವರುಣ ಕೃಪೆ ತೋರಲಿ ಎಂದು ಆಯೋಜಿಸಿದ್ದೇವೆ. ಪ್ರತಿ ದಂಪತಿಯು 701 ರೂ. ಸಂದಾಯ ಮಾಡಿ ಹೆಸರು ನೋಂದಾಯಿಸಬೇಕು. ಜಪ ಯಜ್ಞದಲ್ಲಿ ಭಾಗವಹಿಸಿದವರಿಗೆ ಉಭಯ ಶ್ರೀಗಳ ಭಾವಚಿತ್ರವಿರುವ ಶಾಲು, ಶ್ರೀಗಳ ಮೂರ್ತಿ, ಸೀರೆ, ಲುಂಗಿ, ಆಶೀರ್ವಾದ ಕಾಯಿ, ರುದ್ರಾಕ್ಷಿ ಮಾಲಾ ನೀಡಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net