

ದಾವಣಗೆರೆ: ವರ್ತುಲ ರಸ್ತೆ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ಮಾಗಾನಹಳ್ಳಿ ರಸ್ತೆಯ ರಾಮಕೃಷ್ಣ ಹೆಗಡೆ ನಗರದಲ್ಲಿ ನಿರ್ಮಿಸಿಕೊಂಡಿದ್ದ ಮನೆಗಳ ತೆರವು ಕಾರ್ಯಾಚರಣೆ ಶನಿವಾರ ನಡೆಯಿತು.
ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಎಎಸ್ಪಿ ವಿಜಯಕುಮಾರ ಸಂತೋಷ, ಉಪವಿಭಾಗಾಧಿಕಾರಿ ದುರ್ಗಾಶ್ರೀ ನೇತೃತ್ವದಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದರು. ಇದರ ಭಾಗವಾಗಿ ಮುಂಜಾಗ್ರತೆ ಹಿನ್ನೆಲೆಯಲ್ಲಿ ಶನಿವಾರ ಸಂಜೆ 5ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಈ ಹಿಂದೆ ರಾಮಕೃಷ್ಣ ಹೆಗಡೆ ನಗರದಲ್ಲಿ ಮನೆ ನಿರ್ಮಿಸಿಕೊಂಡಿದ್ದ 243 ಜನರಿಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಹಕ್ಕುಪತ್ರ ನೀಡಲಾಗಿತ್ತು. ಇತರೆ 87 ನಿವಾಸಿಗಳಿಗೆ ಪಾಲಿಕೆಯಿಂದ ನಿವೇಶನ ಹಂಚಿಕೆ ಮಾಡಲಾಗಿತ್ತು.
ದಾಖಲಾತಿ ಸಲ್ಲಿಸಲಾಗದವರು, ತಾಂತ್ರಿಕ ಸಮಸ್ಯೆ ಕಾರಣಕ್ಕೆ ಹಕ್ಕುಪತ್ರ ವಂಚಿತರಾದವರು ಈ ಕಾರ್ಯಾಚರಣೆ ವಿರುದ್ಧ ಕಿಡಿ ಕಾರಿದರು. ಶನಿವಾರ ಬೆಳಗ್ಗೆ ಅಧಿಕಾರಿಗಳು ಜೆಸಿಬಿ ಬಳಸಿ ಮನೆಗಳ ತೆರವಿಗೆ ಮುಂದಾದಾಗ ಮನೆಗಳ ವಸ್ತುಗಳನ್ನು ಪಡೆಯಲೂ ಆಗದಂತೆ ಕೆಡವಿದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಆಯುಕ್ತೆ ಎನ್. ರೇಣುಕಾ ಅವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಅರ್ಹ ಫಲಾನುಭವಿಗಳ ಪಟ್ಟಿಗೆ ಸೇರ್ಪಡೆ ಮಾಡುವ ಸಂಬಂಧ ಕೆಲವರ ದಾಖಲೆ ಪತ್ರಗಳನ್ನು ಪಡೆಯಲಾಯಿತು. ಪ್ರತಿಭಟನೆ ವೇಳೆ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
*ಪ್ರತಿಭಟನಾಕಾರರ ಬಂಧನ, ಬಿಡುಗಡೆ
ಕೆಲವರಿಗೆ ಪರ್ಯಾಯ ಸೌಕರ್ಯ ಕಲ್ಪಿಸದೆಯೇ ಬಡವರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಅಖ್ತರ್‌ರಜ್ಹಾ ವೃತ್ತದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿದರು. ಇದಕ್ಕೆ ಬೆಂಬಲಿಸಿದ್ದ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ 11 ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಸಂಜೆಯವರೆಗೂ ಪೊಲೀಸ್ ಕವಾಯತು ಮೈದಾನದಲ್ಲಿ ಇರಿಸಿ ನಂತರ ಬಿಡುಗಡೆ ಮಾಡಿದರು.
ಕೆಲವರಿಗೆ ಮಾತ್ರವೇ ನಿವೇಶನ ನೀಡಲಾಗಿದೆ. ಉಳಿದವರು ಏನು ಮಾಡಬೇಕು? ಹಕ್ಕುಪತ್ರವಿಲ್ಲದೆ ಅನೇಕ ಕುಟುಂಬಗಳು ಪರದಾಡುತ್ತಿವೆ. ಅವರಿಗೆ ಯಾವ ವ್ಯವಸ್ಥೆಯೂ ಇಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
* ಗೊಂದಲ ಪರಿಹಾರ
ಮನೆಗಳ ಸ್ಥಳಾಂತರಕ್ಕೆ ಸ್ಥಳೀಯರು ಸಮ್ಮತಿಸಿದ್ದಾರೆ. ಹಕ್ಕುಪತ್ರ ಸಿಗದ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪಾಲಿಕೆ ಆಯುಕ್ತರು ದಾಖಲಾತಿ ವಿಚಾರದ ಗೊಂದಲ ಪರಿಹರಿಸುತ್ತಿದ್ದಾರೆ ಎಂದು ಎಸ್ಪಿ ಉಮಾ ಪ್ರಶಾಂತ್ ಪ್ರತಿಕ್ರಿಯಿಸಿದರು.
* ಶಾಶ್ವತ ಪರಿಹಾರಕ್ಕೆ ಆಗ್ರಹ
ಕಳೆದ 30-40 ವರ್ಷಗಳಿಂದ ಹೆಗಡೆ ನಗರದಲ್ಲಿ ಚಿಕ್ಕ ಮನೆಗಳಲ್ಲಿ ವಾಸವಾಗಿರುವ ಬಡ ನಾಗರಿಕರನ್ನು ಏಕಾಏಕಿ ಒಕ್ಕಲಿಬ್ಬಿಸುವುದು ಸರಿಯಲ್ಲ. ಮೂಲ ಸೌಲಭ್ಯಗಳಿಲ್ಲದ ಖಾಲಿ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ನಾಗರಿಕರನ್ನು ಸ್ಥಳಾಂತರಿಸುತ್ತಿರುವುದು ಸಮಂಜಸವಲ್ಲ. ಅವರಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಮುಖಂಡ ಮಂಜುನಾಥ್ ಕೈದಾಳೆ ಆಗ್ರಹಿಸಿದರು.
ಅಲ್ಲಿನ ಅನಕ್ಷರಸ್ಥ ಜನರಿಗೆ ನೋಟಿಸ್ ಬಗ್ಗೆ ಅರಿವಿಲ್ಲ. ಸೂಕ್ತ ಮೂಲ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ಸಂಘಟನೆಯಿಂದ ಪ್ರತಿಭಟನೆ ನಡೆಸಿದಾಗ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಲ್ಲಿನ ನಾಗರಿಕರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
* ಆಯುಕ್ತರ ಸ್ಪಷ್ಟನೆ
ಮನೆಗಳ ತೆರವು ಕಾರ್ಯಾಚರಣೆ ವೇಳೆ ಕೆಲವರ ವಿರೋಧ ಸಹಜ. ದಾಖಲಾತಿ ನೀಡದ ಹಾಗೂ ತಾಂತ್ರಿಕ ಸಮಸ್ಯೆಯಿಂದ ಕೈಬಿಟ್ಟು ಹೋಗಿದ್ದ ಸುಮಾರು 50 ಜನರ ದಾಖಲಾತಿ ಪಡೆದಿದ್ದು ಶಾಸಕರ ನೇತೃತ್ವದ ಆಶ್ರಯ ಸಮಿತಿಗೆ ವರದಿ ಸಲ್ಲಿಸಲಾಗುವುದು. ಉಳಿದಂತೆ 8 ಕುಟುಂಬಗಳಿಗೆ ಸೂರಿಲ್ಲದಿರುವ ಬಗ್ಗೆ ಹೇಳಿಕೊಂಡಿದ್ದು ಅವರಿಗೆ ಬೇರೆಡೆ ತಾತ್ಕಾಲಿಕವಾಗಿ ಮನೆ ನಿರ್ಮಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಆಯುಕ್ತೆ ಎನ್. ರೇಣುಕಾ ವಿಜಯವಾಣಿಗೆ ಪ್ರತಿಕ್ರಿಯಿಸಿದರು.
---