

ಚನ್ನಮ್ಮನ ಕಿತ್ತೂರು: ಬಾಲ್ಯ ವಿವಾಹ, ಮಕ್ಕಳ ಹತ್ಯೆ, ಅಪಹರಣ, ಭ್ರೂಣ ಹತ್ಯೆ, ಬಿಕ್ಷಾಟನೆ, ವೇಶ್ಯಾವಾಟಿಕೆ, ಅವ್ಯವಹಾರಗಳಿಗೆ ಕಾನೂನು ಚೌಕಟ್ಟು ಮೀರಿ ಮಕ್ಕಳನ್ನು ಶೋಷಣೆಗೆ ತಳ್ಳುತ್ತಿರುವುದು ಹೇಯ ಕೃತ್ಯ ಎಂದು ಮಕ್ಕಳ ಸಾಹಿತಿ, ಸಮ್ಮೇಳನದ ಸರ್ವಾಧ್ಯಕ್ಷ ಎಂ.ಎಂ. ಸಂಗಣ್ಣವರ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರರಾಗಿ ಮಾತನಾಡಿದ ಅವರು, ಮಕ್ಕಳ ಸಾಹಿತ್ಯ ಕೃತಿಗಳ ಪ್ರಕಟಣೆ ಮತ್ತು ಮಾರಾಟ ಸುಲಭದ್ದಲ್ಲ. ಮಕ್ಕಳ ಸಾಹಿತ್ಯದ ಪುಸ್ತಕಗಳನ್ನು ಖರೀದಿಸುವವರಿಲ್ಲದೆ, ಅಟ್ಟವೇರಿ ಕುಳಿತಿವೆ. ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಹೆಚ್ಚಿಸಬೇಕು ಎಂದು ಹೇಳಿದರು. ಮನಸ್ಸಿಗೆ ಸಂತೋಷ ಮತ್ತು ಸಂದೇಶ ನೀಡುವುದೇ ಸಾಹಿತ್ಯದ ಮೂಲ ಗುರಿಯಾಗಿದೆ. ಮಲ್ಲಸರ್ಜನ ಆಸ್ಥಾನದಲ್ಲಿ 33 ಜನ ಕವಿಗಳಿದ್ದು ಕಲೆ ಮತ್ತು ಸಾಹಿತ್ಯಕ ಸಾಧನೆಯಿಂದ ಪ್ರಸಿದ್ಧಿ ಗಳಿಸಿದ್ದರು. ಸಾಹಿತ್ಯ ರಚಿಸುವ ಮೊದಲು ಪೂರ್ವಸಿದ್ಧತೆ ಅಭ್ಯಾಸ ಮುಖ್ಯವಾಗಿದೆ ಎಂದರು.
ತಾಲೂಕಿನ ದ್ವಿತೀಯ ಸಾಹಿತ್ಯ ಸಮ್ಮೆಳನ ಉದ್ಘಾಟಿಸಿದ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ನಾಡು, ನುಡಿ ವಿಷಯ ಕುರಿತು ಪ್ರತಿಯೊಬ್ಬರಲ್ಲಿ ಸ್ವಾಭಿಮಾನವಿರಬೇಕು. ನಾಡು-ನುಡಿ ವಿಷಯ ಕೆಣಕಿದರೆ ಉಗ್ರವಾದ ವಿರೋಧ ತೋರುವಂತಿರಬೇಕು. ಚನ್ನಮ್ಮನ ನಾಡಿನಲ್ಲಿ ಸಾಹಿತ್ಯಕ್ಕೆ ವಿಶೇಷ ಸ್ಥಾನಮಾನವಿದೆ. ಕೇಂದ್ರ ಸರ್ಕಾರದ ಕೆಲ ಉದ್ಯೋಗ ಪರೀಕ್ಷೆಗಳು ಕೇವಲ ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ನಡೆಸುತ್ತಿರುವ ಕ್ರಮ ಸರಿಯಲ್ಲ, ಪರೀಕ್ಷೆಯಲ್ಲಿ ಆಯಾ ರಾಜ್ಯದ ಭಾಷೆಗೂ ಮಹತ್ವ ನೀಡಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಬೇಕು, ಕನ್ನಡ ಶಾಲೆಯಲ್ಲಿ ಕೊಠಡಿ, ಶಿಕ್ಷಕರು, ಆಟದ ಮೈದಾನ, ಆಟದ ಸಾಮಗ್ರಿಗಳ ಕೊರತೆ ನೀಗಿಸಬೇಕು. ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿತಗೊಂಡಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನವು ಚಿಂಚಲಿ ಶ್ರೀಗಳ ಮುಂದಾಳತ್ವದಲ್ಲಿ ಚಿಕ್ಕೋಡಿಯಲ್ಲಿ ಜರುಗಲಿದೆ ಎಂದು ಹೇಳಿದರು. ಕಸಾಪ ತಾಲೂಕಾಧ್ಯಕ್ಷ ಡಾ. ಎಸ್.ಬಿ. ದಳವಾಯಿ ಮಾತನಾಡಿದರು. ಸರ್ವಾಧ್ಯಕ್ಷ ಎಂ.ಎಂ.ಸಂಗಣ್ಣವರ ಹಾಗೂ ಜಿಲ್ಲಾಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಮಹಾದೇವ ತುರಮರಿ ಅವರನ್ನು ಸತ್ಕರಿಸಲಾಯಿತು. ಮಂಜುನಾಥ ಕಳಸಣ್ಣವರ ವಿರಚಿತ ಕಿತ್ತೂರು ಸಂಸ್ಥಾನದ ಮೌಖಿಕ ಕಥನಗಳು ಹಾಗೂ ಪ್ರಭಾವತಿ ಲದ್ದಿಮಠ ವಿರಚಿತ ಧ್ರುವತಾರೆ ಕವನ ಸಂಕಲನ ಮತ್ತು ಸ್ಮರಣ ಸಂಚಿಕೆಯನ್ನು ಡಾ.ಪ್ರಜ್ಞಾ ಮತ್ತಿಹಳ್ಳಿ ಬಿಡುಗಡೆಗೊಳಿಸಿದರು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು, ಕಿನಾವಿವ ಸಂಘದ ಚೇರ್ಮನ್ ಎಂ.ಬಿ. ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಸುನಂದಾ ಎಮ್ಮಿ ಧ್ವಜ ಹಸ್ತಾಂತರಿಸಿದರು. ಬಿಇಒ ಆರ್.ಟಿ. ಬಳಿಗಾರ, ಸಿಪಿಐ ಮಹಾಂತೇಶ ಹೊಸಪೇಟ, ಚನ್ನಬಸಪ್ಪ ಮೊಕಾಶಿ, ಅಧ್ಯಕ್ಷ ಬಸವರಾಜ ಪರವಣ್ಣವರ, ಉಳವಪ್ಪ ಉಳ್ಳೆಗಡ್ಡಿ, ಶಂಕರ ಹೊಳಿ, ಡಾ. ಶೇಖರ ಹಲಸಗಿ ಇತರರಿದ್ದರು.
ಸಾರೋಟದಲ್ಲಿ ಮೆರವಣಿಗೆ: ಚನ್ನಮ್ಮನ ಕಿತ್ತೂರು ತಾಲೂಕಿನ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಗೆ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿದರು.
ಸಮ್ಮೇಳನಾಧ್ಯಕ್ಷ ಎಂ.ಎಂ.ಸಂಗಣ್ಣವರ ಅವರನ್ನು ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ವರ್ತುಳದಿಂದ ವೀರಭದ್ರೇಶ್ವರ ಸಭಾ ಮಂಟಪದವರೆಗೂ ಗೌರವ ಪೂರ್ವಕವಾಗಿ ಸಾರೋಟದಲ್ಲಿ ಕರೆ ತರಲಾಯಿತು. ಮಾರ್ಗದುದ್ದಕ್ಕೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಮೆರವಣಿಗೆ ಗಮನ ಸೆಳೆಯಿತು. ಕುಂಭಮೇಳ ಹಾಗೂ ಸ್ತಬ್ಧ ಚಿತ್ರಗಳ ಮೆರವಣಿಗೆ ಸಾಗಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು ಕನ್ನಡಪರ ೋಷಣೆ ಕೂಗಿದರು. ಮೆರವಣಿಗೆಯಲ್ಲಿ ಕನ್ನಡಪರ ಸಂಘಟನೆಗಳು, ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ನಾಗರಿಕರು ಹಾಜರಿದ್ದರು. ಗಣ್ಯರು ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಹಾಗೂ ಅಮಟೂರ ಬಾಳಪ್ಪ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.