ಭದ್ರತೆ ಸಿಗದ್ದಕ್ಕೆ ಪ್ರತಿಪಕ್ಷ ನಾಯಕರಿಗೆ ಮನವಿ, ಶಾಸಕ ರಾಮಲಿಂಗಾ ರೆಡ್ಡಿ ಅಭಿಪ್ರಾಯ

27ank news and photos 02
Published on

ಆನೇಕಲ್: ಎಸ್‌ಐಟಿ ಹಾಗೂ ಪೊಲೀಸರಿಂದ ಯಾವುದೇ ಸಹಕಾರ ಹಾಗೂ ಭದ್ರತೆ ಸಿಗದ ಹಿನ್ನೆಲೆಯಲ್ಲಿ ಸಿಡಿ ಸಂತ್ರಸ್ತೆ ಪ್ರತಿಪಕ್ಷಗಳ ನಾಯಕರ ಬಳಿ ಭದ್ರತೆಗಾಗಿ ಮನವಿ ಮಾಡಿಕೊಂಡಿರಬಹುದು ಎಂದು ಮಾಜಿ ಸಚಿವ, ಶಾಸಕ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕರಾದ ಜಮೀರ್ ಅಹಮದ್, ಬಿ.ಶಿವಣ್ಣ ಅವರು ಶನಿವಾರ ಥಳಿ ಮತ್ತು ಹೊಸೂರಿನಲ್ಲಿ ರೋಡ್‌ಶೋಗೆ ತೆರಳುವ ಮಾರ್ಗಮಧ್ಯೆ ಸೂರ್ಯನಗರ ಹಾಗೂ ಬ್ಯಾಗಡದೇನಹಳ್ಳಿ, ಆನೇಕಲ್ ಪಟ್ಟಣದಲ್ಲಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಸುದ್ದಿಗಾರರ ಜತೆ ಮಾತನಾಡಿದರು.

ಸಂತ್ರಸ್ತೆ ಭದ್ರತೆಗಾಗಿ ಪ್ರತಿಪಕ್ಷದ ನಾಯಕರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸಿ ಭದ್ರತೆ ಕೇಳಿದ್ದಾಳೆ. ಪ್ರಕರಣದಲ್ಲಿ ಈಗಾಗಲೇ ರಮೇಶ್ ಜಾರಕಿಹೋಳಿ ರಾಜೀನಾಮೆ ನೀಡಿದ್ದು, ಎಫ್‌ಐಆರ್ ಕೂಡ ದಾಖಲಾಗಿದೆ. ತನಿಖೆಯೂ ಪ್ರಗತಿಯಲ್ಲಿದೆ. ತನಿಖೆ ಮುಗಿದ ಬಳಿಕವಷ್ಟೇ ನಿಜ ಏನೆಂಬುದು ಗೊತ್ತಾಗುತ್ತದೆ ಎಂದರು.

ಸಿಡಿ ಬಿಡುಗಡೆಯಾಗುತ್ತಿದ್ದಂತೆ 6 ಸಚಿವರೂ ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದಾರೆ. ಅದು ಏಕೆ? ಎಂಬುದು ಅವರಿಗೆ ತಿಳಿದಿರಬೇಕು. ಬಿಜೆಪಿಯವರು ಡಿ.ಕೆ.ಶಿವಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಹಾಗೆ ಕೇಳಲು ಡಿ.ಕೆ.ಶಿವಕುಮಾರ್ ಅವರೇನು ಕೋರ್ಟಿಗೆ ಹೋಗಿ ಬಿಜೆಪಿ ಮಂತ್ರಿಗಳ ರೀತಿ ತಡೆಯಾಜ್ಞೆ ತಂದಿಲ್ಲ. ಟ್ವೀಟ್ ಮಾಡಿದ ತಕ್ಷಣ ರಾಜೀನಾಮೆ ನೀಡಬೇಕಾ ಎಂದು ಪ್ರಶ್ನಿಸಿದರು.

ಸಂತ್ರಸ್ತೆಯನ್ನು ಬೇಗ ಪತ್ತೆ ಮಾಡಿ: ಬಿಜೆಪಿ ಸರ್ಕಾರ ಸಂತ್ರಸ್ತೆ ವಿಚಾರದಲ್ಲಿ ಎಫ್‌ಐಆರ್ ದಾಖಲಿಸಲು, ತನಿಖೆ ನಡೆಸಲು ಬೇಕೆಂದೇ ವಿಳಂಬ ಮಾಡುತ್ತಿದೆ. ಪೊಲೀಸರು ಹಾಗೂ ಎಸ್‌ಐಟಿ ತಂಡಕ್ಕೆ ಸಂತ್ರಸ್ತೆಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಪ್ರಕರಣ ಇನ್ನೂ ತನಿಖೆ ಹಂತದಲ್ಲಿದ್ದು, ಸಂತ್ರಸ್ತೆಯನ್ನು ಬೇಗನೆ ಪತ್ತೆ ಮಾಡಿ, ಆಕೆಗೆ ಭದ್ರತೆ ಒದಗಿಸಬೇಕಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಚಂದಾಪುರದ ಸೂರ್ಯನಗರಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಶಾಸಕ ಬಿ.ಶಿವಣ್ಣ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಆರ್.ಕೆ.ರಮೇಶ್ ಸ್ವಾಗತಿಸಿದರು.

ಮುಖಂಡರಾದ ಎಚ್.ಎಂ.ರೇವಣ್ಣ, ಅಚ್ಯುತ್ ರಾಜು, ಗಟ್ಟಳ್ಳಿ ಸೀನಪ್ಪ, ರಾಮಚಂದ್ರಪ್ಪ, ಸಿ.ಕೆ. ಚಿನ್ನಪ್ಪ, ಸಿ. ನಾಗರಾಜು, ಪಾರ್ಥಪ್ಪ, ಹರೀಶ್ ಗೌಡ, ಬೊಮ್ಮಸಂದ್ರ ಲಿಂಗಣ್ಣ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net