ಬೈರ ಸೆರೆ ಕಾರ್ಯಾಚರಣೆ ಸ್ಥಗಿತ

5 mdg p1 web
Published on

ಮೂಡಿಗೆರೆ: ಊರುಬಗೆ ಗ್ರಾಪಂ ವ್ಯಾಪ್ತಿಯಲ್ಲಿ ದಾಂಧಲೆ ಮಾಡುತ್ತಿದ್ದ ಕಾಡಾನೆ ಬೈರನನ್ನು ಸೆರೆಹಿಡಿಯಲು ಆರು ದಿನದಿಂದ ನಡೆಸಿದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಕಾರ್ಯಾಚರಣೆಗೆಂದು ದುಬಾರೆ ಮತ್ತು ನಾಗರಹೊಳೆಯಿಂದ ಬಂದಿದ್ದ 6 ದಸರಾ ಆನೆಗಳು ಶನಿವಾರ ವಾಪಸಾಗಿವೆ.

ಅ.31ರಂದು ಅಭಿಮನ್ಯು, ಭೀಮ, ಗೋಪಾಲಸ್ವಾಮಿ, ಅಜ್ಜಯ್ಯ, ಮಹೇಂದ್ರ, ಪ್ರಶಾಂತ್ ಎಂಬ ದಸರಾ ಆನೆಗಳು, 100 ಅರಣ್ಯ ಸಿಬ್ಬಂದಿ ಮತ್ತು ತಜ್ಞರ ತಂಡ ಬೈರನ ಶೋಧದಲ್ಲಿ ತೊಡಗಿದ್ದವು. ಶುಕ್ರವಾರದಿಂದ ಅಭಿಮನ್ಯುವಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಜ್ವರ ಹಾಗೂ ಭೇದಿಯಿಂದ ನಿಶಕ್ತಿಗೊಂಡಿದೆ. ಅಜ್ಜಯ್ಯ ಮತ್ತು ಗೋಪಾಲಸ್ವಾಮಿಗೆ ಮದ ಬಂದಿರುವುದರಿಂದ ಮೂರೂ ಆನೆಗಳನ್ನು ಕಾರ್ಯಾಚರಣೆಗೆ ಬಳಸಲು ಸಾಧ್ಯವಿಲ್ಲ ಎಂದು ವೈದ್ಯರ ತಂಡ ದೃಢಪಡಿಸಿದೆ. ಜತೆಗೆ ಊರುಬಗೆ, ಬೈರಾಪುರ, ಸತ್ತಿಗನಹಳ್ಳಿ, ಹಳೇಕೆರೆ, ಕುಂಬರಡಿ, ಗೌಡಳ್ಳಿ, ಹೆಮ್ಮದಿ, ಅಡ್ಡಗುಡ್ಡ, ಹೊನ್ನೆಕೂಲ್, ಹೊಸಕೆರೆ, ಮೇಕನಗದ್ದೆ, ಗುತ್ತಿ, ಮೂಲರಹಳ್ಳಿ, ದೇವರಮನೆ, ಕೋಗಿಲೆ ಭಾಗದಲ್ಲಿ ಆಗಾಗ ಮಳೆಯಾಗುತ್ತಿದೆ.

ಕಾಡಾನೆ ಬೈರ 6 ದಿನಗಳಿಂದ ಯಾರ ಕಣ್ಣಿಗೂ ಬಿದ್ದಿಲ್ಲ. ಇನ್ನೊಂದು ಗುಂಪಿನಲ್ಲಿದ್ದ 3 ಕಾಡಾನೆ ಗುಂಪಿಗೆ ಇನ್ನೊಂದು ಕಾಡಾನೆ ಸೇರ್ಪಡೆಗೊಂಡು 4 ಆಗಿದೆ. ಅದರಲ್ಲಿ ಬೈರ ಸೇರಿಕೊಂಡಿದ್ದಾನೆಂದು ನಂಬಲಾಗಿತ್ತು. ಸ್ಥಳೀಯರ ಪ್ರಕಾರ ಆ ಗುಂಪಿನಲ್ಲಿ ಬೈರ ಸೇರಿಕೊಂಡಿಲ್ಲ. ಬೇರೊಂದು ಕಾಡಾನೆ ಅರಣ್ಯ ಪ್ರದೇಶದಿಂದ ಬಂದು ಸೇರಿಕೊಂಡಿರಬಹುದೆಂದು ಅಂದಾಜಿಸಲಾಗಿದೆ. ಬೈರ ಸಕಲೇಶಪುರ ಅಥವಾ ಮಂಗಳೂರು ಅರಣ್ಯ ಭಾಗಕ್ಕೆ ತೆರಳಿರುವ ಅನುಮಾನವಿದೆ. ಈ ಎಲ್ಲ ಕಾರಣದಿಂದ ಆಪರೇಷನ್ ಬೈರ ಸ್ಥಗಿತಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net