More

    ಬೆಳಗಾವಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಸ್ಮಶಾನಭೂಮಿ ಲಭ್ಯ-ನಿತೇಶ್ ಪಾಟೀಲ

    Must Read

    ಬೆಳಗಾವಿ: ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಸಾರ್ವಜನಿಕ ಸ್ಮಶಾನಭೂಮಿಯನ್ನು ಒದಗಿಸಲಾಗಿದೆ. ಆದರೆ ಕೆಲವೆಡೆ ನಿರ್ದಿಷ್ಟ ಸಮುದಾಯಗಳು ತಮಗೆ ಪ್ರತ್ಯೇಕ ಸ್ಮಶಾನಭೂಮಿ ಒದಗಿಸುವಂತೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಸೆ.8) ನಡೆದ ಅನುಸೂಚಿತ ಜಾತಿ/ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲಿ ಸಾರ್ವಜನಿಕ ಸ್ಮಶಾನಭೂಮಿ ಇಲ್ಲವೋ ಅಂತಹ ಕಡೆಗಳಲ್ಲಿ ಖಾಸಗಿ ಭೂಮಿಯನ್ನು ಖರೀದಿಸಲಾಗುವುದು ಎಂದು ಭರವಸೆ ನೀಡಿದರು. ಸ್ಮಶಾನಭೂಮಿ ಅಭಿವೃದ್ಧಿಗಾಗಿ ಸಮಾಜಕಲ್ಯಾಣ ಇಲಾಖೆಯ ವತಿಯಿಂದ ಒಂದು ಕೋಟಿ ರೂಪಾಯಿ ಅನುದಾನ ಕೋರಿ ಪ್ರಸ್ತಾವನೆ ಕಳಿಸುವಂತೆ ಜಿಲ್ಲಾಧಿಕಾರಿಗಳು ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
    ಸ್ಮಶಾನಭೂಮಿ ಅಭಿವೃದ್ಧಿಯನ್ನು ನರೇಗಾ ಯೋಜನೆಯಡಿ ಪಂಚಾಯತ್ ಅನುದಾನದಲ್ಲಿ ಕೂಡ ಕೈಗೆತ್ತಿಕೊಳ್ಳಲಾಗುವುದು.

    ಫಲಾನುಭವಿಗಳಿಗೆ ಸಾಲ-ಸೌಲಭ್ಯ: ರಾಜ್ಯ ಮತ್ತು ಕೇಂದ್ರ ಸರಕಾರಗಳ ಸಾಲ-ಸೌಲಭ್ಯ ಯೋಜನೆಯಡಿ ಆಯ್ಕೆಗೊಂಡ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಮನ್ವಯತೆ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು. ಸಭೆಯಲ್ಲಿ ಮಾತನಾಡಿದ ಶಾಸಕ ಆಸೀಫ್(ರಾಜು) ಸೇಠ್ ಅವರು, ಅಲರವಾಡ, ಕಣಬರಗಿ ಸೇರಿದಂತೆ ಕೆಲವು ಕಡೆಗಳಲ್ಲಿ ಸ್ಮಶಾನಭೂಮಿ ಕೊರತೆ ಕಂಡುಬಂದಿದೆ. ಆದ್ದರಿಂದ ಕೂಡಲೇ ಭೂಮಿಯನ್ನು ಖರೀದಿಸಿ ಕೊಡಬೇಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಮಿತಿಯ ಸದಸ್ಯರಾದ ವಿಜಯ ತಳವಾರ, ಇನ್ನೂ ಕೆಲವೆಡೆ ಸ್ಮಶಾನಭೂಮಿ ಒದಗಿಸಿರುವುದಿಲ್ಲ ಎಂದು ಹೇಳಿದರು. ವಿವಿಧ ಸಾಲ ಸೌಲಭ್ಯ ಯೋಜನೆಯಡಿ ಅರ್ಜಿಗಳನ್ನು ಸಲ್ಲಿಸಿದವರಿಗೆ ಸಿಬಿಲ್ ಸ್ಕೋರ್ ಸೇರಿದಂತೆ ಕೆಲ ತಾಂತ್ರಿಕ ಕಾರಣಗಳಿಂದ ಸಾಲ ದೊರಕುತ್ತಿಲ್ಲ. ಆದ್ದರಿಂದ ಸರಕಾರಿ ಯೋಜನೆಗಳ ಪ್ರಯೋಜನ ದೊರಕುತ್ತಿಲ್ಲ. ಆದ್ದರಿಂದ ಸಾಲ-ಸೌಲಭ್ಯ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಆರ್.ಪಿ.ಡಿ. ವೃತ್ತಕ್ಕೆ ವೀರ ಮದಕರಿ ನಾಯಕರ ಹೆಸರು ಇಡುವುದಕ್ಕೆ ಸಂಬಂಧಿಸಿದಂತೆ ಅನೇಕ ಸಭೆಯಲ್ಲಿ ಚರ್ಚಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿಜಯ ತಳವಾರ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳಿಸಬೇಕು ಎಂದು ವಿಜಯ್ ತಳವಾರ ಅವರು ಒತ್ತಾಯಿಸಿದರು. ಈ ಕುರಿತು ಮಹಾನಗರ ಪಾಲಿಕೆಯ ಚುನಾಯಿತ ಜನಪ್ರತಿನಿಧಿಗಳ ಮಂಡಳಿಯು ಮುಂದಿನ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಪಾಲಿಕೆಗೆ ಪತ್ರವನ್ನು ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

    ಸಭೆಯಲ್ಲಿ ಮಾತನಾಡಿದ ನೂತನ ಸದಸ್ಯ ಕರೆಪ್ಪ ಗುಡೇನ್ನವರ, ನಟ ಉಪೇಂದ್ರ ಅವರ ಇತ್ತೀಚಿನ ಹೇಳಿಕೆಯು ಸಮುದಾಯಕ್ಕೆ ನೋವುಂಟು ಮಾಡಿದೆ. ಇಂತಹ ಘಟನೆಗಳನ್ನು ಮರುಕಳಿಸದಂತೆ ತಡೆಯಲು ಸಮುದಾಯಗಳಿಗೆ ನೋವುಂಟು ಮಾಡುವ ಕೆಲವು ಜನ ರೂಢಿಗತ ಶಬ್ದಗಳ ಬಳಕೆಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಕೆಲವು ಜನರೂಢಿಗತ ಮಾತುಗಳಿಂದ ಜಾತಿನಿಂದನೆ ಆಗುತ್ತಿರುವುದರಿಂದ ಇಂತಹ ಮಾತುಗಳ ನಿರ್ಬಂಧಿಸುವಂತೆ ಕೋರಿ ಸರಕಾರಕ್ಕೆ ವರದಿ ಕಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇದಲ್ಲದೇ ದೌರ್ಜನ್ಯ ತಡೆ ಸಮಿತಿಯ ಸದಸ್ಯರಿಗೆ ಗುರುಗಿನ ಚೀಟಿಯನ್ನು ಒದಗಿಸಬೇಕು ಎಂದು ನೂತನ ಸದಸ್ಯರು ಮನವಿ ಮಾಡಿಕೊಂಡರು. ಮುಂದಿನ ಸಭೆಯ ಒಳಗಾಗಿ ಗುರುತಿನ ಚೀಟಿ ಒದಗಿಸಬೇಕು ಎಂದು ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

    ನೂತನ ಸದಸ್ಯರಾದ ಜೀವನ ಮಾಂಜ್ರೇಕರ್,, ಕರೆಪ್ಪ ಗುಡೇನ್ನವರ, ಸಿದ್ದರಾಯ ಮೇತ್ರಿ, ಬಸಪ್ಪ ತಳವಾರ, ಬಸವರಾಜ ಆಯಟ್ಟಿ, ನಾಗಪ್ಪ ನರಗಟ್ಟಿ ಅವರನ್ನು ಜಿಲ್ಲಾಧಿಕಾರಿಗಳು ಅಭಿನಂದಿಸಿದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಲಕ್ಷ್ಮಣ ಬಬಲಿ ಅವರು ಸಭೆಯನ್ನು ನಿರ್ವಹಿಸಿದರು.ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್, ಬೆಳಗಾವಿ ಉಪ ಪೊಲೀಸ್ ಆಯುಕ್ತರಾದ ರೋಹನ್ ಜಗದೀಶ್, ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ, ಪ್ರೋಬೇಷನರಿ ಐ.ಎ.ಎಸ್. ಅಧಿಕಾರಿ ಶುಭಂ ಶುಕ್ಲಾ ಉಪಸ್ಥಿತರಿದ್ದರು.

    - Advertisement -spot_img
    - Advertisement -spot_img

    Latest News

    ಮರಿತಿಬ್ಬೇಗೌಡರ ಪರ ಮತಯಾಚನೆ

    ಚಾಮರಾಜನಗರ: ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಜೂ 3ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು ಎಂದು ಮುಖಂಡ ಶ್ರೀನಿವಾಸಗೌಡ...
    - Advertisement -spot_img

    More Articles Like This

    - Advertisement -spot_img