More

    ಜೈಲಿಗೆ ಹೋದವರಿಗೆ ಮಾದಪ್ಪನ ಪೂಜೆ ಭಾಗ್ಯವಿಲ್ಲ

    ಚಾಮರಾಜನಗರ: ಅಸಂಖ್ಯಾತ ಭಕ್ತರ ಆರಾಧ್ಯ ದೈವ, ಪವಾಡ ಪುರುಷ ಮಲೆ ಮಹದೇಶ್ವರ ಸ್ವಾಮಿಗೆ ಗರ್ಭಗುಡಿಯಲ್ಲಿ ಪೂಜೆ ಮಾಡೋ ಭಾಗ್ಯವಿರುವುದು ಬೇಡಗಂಪಣ ಸಮುದಾಯಕ್ಕೆ ಮಾತ್ರ. ಆದರೆ ಈಗ ಈ ಸಮುದಾಯದ ಕೆಲವರು ‘ಇಂಡಿಗನತ್ತ ಮತಗಟ್ಟೆ ಧ್ವಂಸ’ ಪ್ರಕರಣದಿಂದಾಗಿ ಮಾದಪ್ಪನಿಗೆ ಪೂಜೆ ಸಲ್ಲಿಸುವ ಭಾಗ್ಯವನ್ನೇ ಕಳೆದುಕೊಂಡಿದ್ದಾರೆ..!

    ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮದಲ್ಲಿ ಲೋಕಸಭೆ ಚುನಾವಣೆ ಮತದಾನದ ದಿನ ನಡೆದ ಮತಗಟ್ಟೆ ಧ್ವಂಸ ಪ್ರಕರಣದಿಂದ 46 ಜನರು(20 ಮಹಿಳೆಯರು, 26 ಪುರುಷರು) ಜೈಲಿಗೆ ಹೋಗಿದ್ದರು. ಇವರಲ್ಲಿ ಇದ್ದ ಮಾದಪ್ಪನ ತಮ್ಮಡಿಗಳಾಗಿರುವ ಪುರುಷರು ಸರತಿ ಅರ್ಚಕರಾಗಿ ಗರ್ಭಗುಡಿಯಲ್ಲಿ ಪೂಜೆ ಮಾಡುವ ಈಗ ಅವಕಾಶವನ್ನು ಕಳೆದುಕೊಂಡಿದ್ದಾರೆ. ಜೈಲಿಗೆ ಹೋಗಿ ಬಂದಿರುವರು ಮಹದೇಶ್ವರರ ಪೂಜೆ ಮಾಡಲು ಅರ್ಹರಲ್ಲ ಎನ್ನುವುದೇ ಇದಕ್ಕೆ ಕಾರಣ.

    ಸೆರೆವಾಸಿಗಳಿಗೆ ಏಕಿಲ್ಲ ಪೂಜೆ ಭಾಗ್ಯ?:
    ಪರಶಿವನಿಗೆ ಮಾಂಸವನ್ನು ನೈವೇದ್ಯಕ್ಕಿಟ್ಟು, ತನ್ನೆರಡು ಕಣ್ಣುಗಳನ್ನು ಕೊಟ್ಟ ಬೇಡರ ಕಣ್ಣಪ್ಪನ ಕುಲದವರೇ ಬೇಡಗಂಪಣರು. ರಾಜ್ಯದಲ್ಲಿರುವ ಪುರಾತನ ಬುಡಕಟ್ಟು ಸಮುದಾಯಗಳಲ್ಲಿ ಇವರೂ ಒಂದು ಗುಂಪು. ಪುರಾಣಗಳ ಪ್ರಕಾರ ಬೇಡಗಂಪಣರು ಶ್ರೀಶೈಲದಲ್ಲಿ ವಾಸ ಮಾಡುತ್ತಿದ್ದರು. ರಾಜರಿಗೆ ಶಸಾಸ ಸರಬರಾಜು ಮಾಡುತ್ತ, ಯುದ್ಧಗಳಲ್ಲಿ ಪಾಲ್ಗೊಳ್ಳುವ ವೀರರಾಗಿದ್ದರು. ನಂತರ ಕರ್ನಾಟಕ, ತಮಿಳುನಾಡಿನ ಗುಡ್ಡಗಾಡುಗಳತ್ತ ವಲಸೆ ಬಂದರು.
    ಕಾಡಿನಲ್ಲಿ ಸೋಲಿಗರೊಂದಿಗೆ ಬೇಟೆಯಾಡಿಕೊಂಡು ಇದ್ದ ಇವರನ್ನು ಶ್ರೀಮಲೆ ಮಹದೇಶ್ವರರು ಕಂಡರು. ಲಿಂಗಧಾರಣೆ ಮಾಡಿ ಶಿವದೀಕ್ಷೆ ಕೊಟ್ಟು ಪರಿವರ್ತನೆ ಮಾಡಿದರು. ಅಂದಿನಿಂದ ಪ್ರಾಣಿ ಬೇಟೆ, ಮಾಂಸಾಹಾರ ಸೇವನೆ ತ್ಯಜಿಸಿರು. ಈ ಮೂಲಕ ಪ್ರಪಂಚದ ಏಕೈಕ ಸಸ್ಯಹಾರಿ ಬುಡಕಟ್ಟು ಜನಾಂಗವಾಗಿ ಬದಲಾದರು. ನಡೆ-ನುಡಿಯಲ್ಲಿ ಮಡಿವಂತರಾದರು.
    ಬೆಟ್ಟದ ದೇಗುಲದಲ್ಲಿ ಮಾದೇಶ್ವರರ ಪೂಜೆ ಮಾಡುವಲ್ಲಿ ಇವರು ಪ್ರಧಾನರಾದರು. ಮಾದಪ್ಪನಿಂದ, ಮಾದಪ್ಪನಿಗಾಗಿ, ಮಾದಪ್ಪನಿಗೋಸ್ಕರವೇ ಬದುಕಲಾರಂಭಿಸಿದರು. ಸರತಿ ಸಾಲಿನಂತೆ ಒಂದೊಂದು ಕುಟುಂಬದ ತಮ್ಮಡಿಗಳು ನಿಗದಿತ ತಿಂಗಳಲ್ಲಿ ಗರ್ಭಗುಡಿಯಲ್ಲಿ ಪೂಜೆ ನೆರವೇರಿಸುವ ಪದ್ಧತಿ ಜಾರಿಗೆ ಬಂತು.
    ಇವರನ್ನು ಹೊರತುಪಡಿಸಿ ಮತ್ಯಾರಿಗೂ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸಲು ಅವಕಾಶವಿಲ್ಲ. ಹಾಗೆಂದು ಇವರಲ್ಲಿ ಯಾರು ಬೇಕಾದರೂ ಪೂಜೆ ಮಾಡಲೂ ಸಾಧ್ಯವೂ ಇಲ್ಲ. ಏಕೆಂದರೆ ಈ ಸಮುದಾಯದಲ್ಲಿ ತಮ್ಮದೇ ಆದ ಸಾಂಪ್ರದಾಯಿಕ ಕಟ್ಟುಪಾಡು, ನಿಯಮಾವಳಿಗಳಿವೆ. ಮಾದಪ್ಪನಿಗೆ ಪೂಜೆ ಮಾಡುವಾಗ ಬಾಯಿಗೆ ಬಟ್ಟೆ ಕಟ್ಟಿಕೊಳ್ಳಬೇಕು. ಅಲ್ಲದೆ, ಎಂಜಲು ಸಹ ತಾಗದಂತೆ ನೋಡಿಕೊಳ್ಳುವಷ್ಟು ಮಡಿವಂತಿಕೆ ಅನುಸರಿಸಬೇಕು. ಉಪವಾಸವಿದ್ದು ಪೂಜೆ ಮಾಡಬೇಕು. ಜೈಲಿಗೆ ಹೋಗಿ ಬಂದವರು, ಹಾವು ಕಚ್ಚಿಸಿಕೊಂಡವರು, ಎರಡನೇ ಮದುವೆಯಾಗಿರುವವರು, ಜಗಳದಲ್ಲಿ ಚಪ್ಪಲಿಯಿಂದ ಹೊಡೆಸಿಕೊಂಡವರು ಗರ್ಭಗುಡಿಯಲ್ಲಿ ದೇವರ ಮೂರ್ತಿ ಮುಟ್ಟುವಂತಿಲ್ಲ. ಸ್ವಚ್ಛತೆ, ಅಭಿಷೇಕ, ಮಂಗಳಾರತಿ, ಹೂ ಅಲಂಕಾರ ಮಾಡುವಂತಿಲ್ಲ.
    ಹೀಗಾಗಿ ಮೂಲಸೌಕರ್ಯಗಳಿಗಾಗಿ ನಡೆದ ಗಲಭೆಯಲ್ಲಿ ಜೈಲಿಗೆ ಹೋಗಿ ಬಂದಿರುವವರು 26 ಜನರಲ್ಲಿ ಮಾದಪ್ಪನ ತಮ್ಮಡಿಗಳು ಗರ್ಭಗುಡಿಯಲ್ಲಿ ಪೂಜೆ ಮಾಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಗೆ ಸರತಿ ಪ್ರಕಾರ ಮಹದೇಶ್ವರರ ಪೂಜೆ ಮಾಡುವ ಅವಕಾಶ ಸಿಕ್ಕರೆ ಕುಟುಂಬದ ಬೇರೆಯವರಿಂದ ಪೂಜೆ ಮಾಡಿಸಬೇಕು. ತಾವು ಮಾತ್ರ ಜತೆಗೆ ಇರಬಹುದಷ್ಟೆ.

    ಶಿಕ್ಷೆಗಿಂತ ಪಶ್ಚಾತಾಪ ಭಾರ:
    ಮಹದೇಶ್ವರರ ಮೇಲೆ ಬೇಡಗಂಪಣ ಸಮುದಾಯ ಇಟ್ಟುಕೊಂಡಿರುವ ಭಕ್ತಿಯ ಶಕ್ತಿ ಬಹು ದೊಡ್ಡದು. ಇದು ಅಪರಾಧ ಮಾಡುವುದಕ್ಕೂ ತಡೆಯೊಡ್ಡುತ್ತದೆ. ಒಂದು ವೇಳೆ ತಪ್ಪು ಮಾಡಿದರೂ ಪಶ್ಚಾತಾಪ ಪಡುವಂತೆ ಮಾಡುತ್ತದೆ. ಜೈಲಿಗೆ ಹೋಗಿ ಬಂದು ಮಹದೇಶ್ವರರ ಪೂಜೆ ಮಾಡುವ ಭಾಗ್ಯ ಕಳೆದುಕೊಂಡಿರುವ ತಮ್ಮಡಿಗಳಿಗೆ ಈ ಪಶ್ಚಾತಾಪ ಜೈಲು ಶಿಕ್ಷೆಗಿಂತಲೂ ಭಾರವಾಗಿದೆ. ತಮ್ಮ ಸರತಿ ಪೂಜೆಗಾಗಿ ಕಾದು, ಇದಕ್ಕಾಗಿ ಶ್ರದ್ಧೆ, ಭಕ್ತಿಯಿಂದ ಸಿದ್ಧತೆ ಕೈಗೊಂಡು ತಮ್ಮ ಪರಿವರ್ತನೆಗೆ ಕಾರಣರಾದ ಮಾದಪ್ಪನ ಪ್ರಧಾನ ಅರ್ಚಕರಾಗುತ್ತಿದ್ದವರು ಜೀವನ ಪೂರ್ತಿ ಪೂಜೆ ಭಾಗ್ಯ ಕಳೆದುಕೊಂಡಿರುವುದು ಬೇಸರ ತರಿಸಿದೆ. ಇವರನ್ನು ಪಶ್ಚಾತಾಪ ಬದುಕಿನುದ್ದಕ್ಕೂ ಕಾಡುವುದರಲ್ಲಿ ಅನುಮಾನವಿಲ್ಲ.
    ಬೇಡಗಂಪಣ ಸಮುದಾಯದಲ್ಲಿ ಜೈಲಿಗೆ ಹೋದವರಿಗೆ ಪೂಜೆ ಭಾಗ್ಯವಿಲ್ಲವೆಂಬ ನಿಯಾಮವಳಿ ಜನರನ್ನು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡುತ್ತದೆ. ಇವರಲ್ಲಿರುವ ಈ ಶಿಸ್ತನ್ನು ಗಮನಿಸಿದರೆ ತಪ್ಪುಮಾಡಿ ಮಾದಪ್ಪನ ಮುಂದೆ ಬಂದು ನಿಂತು ಕೈ ಮುಗಿಯುವ ಭಕ್ತರಿಗೆ ಭಯ, ಅಪರಾಧಿ ಭಾವ ಕಾಡದೆ ಇರಲಾದರು.

    ನಾವು ಮಲೆ ಮಹದೇಶ್ವರರನ್ನು ಪೂಜೆ ಮಾಡುವ ತಮ್ಮಡಿಗಳು. ಜೈಲಿಗೆ ಹೋಗಿಬಂದರೆ ಮಹದೇಶ್ವರರ ಪೂಜೆ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ದೇವರ ಆರಾಧನೆ ಅವಕಾಶವನ್ನು ಕಳೆದುಕೊಂಡು ತುಂಬಾ ಬೇಸರವಾಗಿದೆ.
    ಎಂ.ಪುಟ್ಟತಮ್ಮಡಿ
    ಇಂಡಿಗನತ್ತ, ಮಲೆ ಮಹದೇಶ್ವರ ಬೆಟ್ಟ, ಹನೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts