

ಬೀರೂರು: ಪುರಸಭೆ ವ್ಯಾಪ್ತಿಯ ವಿವಿಧ ಯೋಜನೆಗಳಡಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಆಧಾರದಲ್ಲಿ 12 ವರ್ಷಗಳ ಅವಧಿಗೆ ಬಹಿರಂಗ ಹರಾಜು ಶುಕ್ರವಾರ ನಡೆಸಬೇಕಿದ್ದ ಪ್ರಕ್ರಿಯೆ ಸ್ಥಗಿತಗೊಂಡಿತು.
ಪುರಸಭೆ ಮುಂಭಾಗದ 10, ಮೇಲಂತಸ್ತಿನ ಮಳಿಗೆ, ಖಾಸಗಿ ಬಸ್ ನಿಲ್ದಾಣದ ಮಳಿಗೆಗಳು, ಸಂತೆ ಮೈದಾನದ ಶಿಶುವಿಹಾರದ ಹತ್ತಿರದ ಮಳಿಗೆಗಳು, ಪಂಪ್‌ಹೌಸ್ ಹತ್ತಿರ ಇರುವ ಮಳಿಗೆಗಳು, ರಾಜಾಜಿ ನಗರದ ಮಳಿಗೆಗಳು ಸೇರಿದಂತೆ ಸಂತೆ ಮೈದಾನದ ವಾಣಿಜ್ಯ ಮಳಿಗೆಗಳನ್ನು ಬಹಿರಂಗ ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗಿತ್ತು. ಆದರೆ ಪುರಸಭೆ ಮುಂಭಾಗದಲ್ಲಿರುವ 7 ಮಳಿಗೆಯ ಬಾಡಿಗೆದಾರರು ಮಳಿಗೆಯಲ್ಲಿ ಮುಂದುವರಿಯುವ ಸಲುವಾಗಿ ನ್ಯಾಯಾಲಯದ ಮೊರೆ ಹೋಗಿ ಹರಾಜು ಪ್ರಕ್ರಿಯೆಯಲ್ಲಿ ಅವರ ಮಳಿಗೆಗಳು ಒಳಪಡದಂತೆ ತಡೆಯಾಜ್ಞೆ ತಂದಿದ್ದರು. ಅಂಥ ಮಳಿಗೆಗಳನ್ನು ಬಿಟ್ಟು ಉಳಿದ ಮಳಿಗೆಗಳನ್ನು ಹರಾಜು ಮಾಡುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಕಾಶ್ ತಿಳಿಸಿದಾಗ ಬಿಡ್‌ದಾರರು ಆಕ್ಷೇಪ ವ್ಯಕ್ತಪಡಿಸಿದರು.
ಮಳಿಗೆಗಳಲ್ಲಿ ಇರುವ ಬಾಡಿಗೆದಾರರು ಬಹಳ ವರ್ಷಗಳಿಂದ ವಹಿವಾಟು ನಡೆಸುತ್ತಿದ್ದಾರೆ. ಮಳಿಗೆಗಳಿಗೆ ಹಳೇ ದರದಲ್ಲಿಯೇ ಬಾಡಿಗೆ ಪಾವತಿಸುತ್ತಿದ್ದಾರೆ. ಈ ಮಳಿಗೆಗಳು ಸೇರಿ ಹರಾಜಾದಲ್ಲಿ ಪುರಸಭೆಗೆ ಆದಾಯ ವೃದ್ಧಿಸುತ್ತದೆ. ಹರಾಜಿಗೆ ಒಳಪಟ್ಟು ಬಹಳ ವರ್ಷಗಳು ಕಳೆದಿವೆ. ಸ್ಥಳೀಯರಾದ ನಮಗೂ ಬಿಡ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಇದೆ ಎಂದು ಪುರಸಭೆ ವಿರುದ್ಧ ತಿರುಗಿಬಿದ್ದರು. ಪುರಸಭೆ ಮುಂಭಾಗ ಬಿಗುವಿನ ವಾತಾರವಣ ಸೃಷ್ಟಿಯಾಗಿತ್ತು. ಪುರಸಭೆ ಮುಖ್ಯಾಧಿಕಾರಿ ನಿರ್ಲಕ್ಷ್ಯದಿಂದ ಈ ಪ್ರಕ್ರಿಯೆ ಸ್ಥಗಿತವಾಗಿದೆ ಎಂದು ಕೆಲ ಬಿಡ್‌ದಾರರು ಅಸಮಾಧಾನ ಹೊರಹಾಕಿದರು.
ಇದನ್ನು ಗಮನಿಸಿದ ಪುರಸಭೆ ಮುಖ್ಯಾಧಿಕಾರಿ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗುತ್ತದೆ ಎಂದು ಘೋಷಿಸಿ ಬಿಡ್‌ದಾರರು ನೀಡಿದ್ದ ಇಎಂಡಿ 20 ಸಾವಿರ ಹಣವನ್ನು ಹಿಂದಿರುಗಿಸಿದರು.
ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಮಾಡಿದ ಮಳಿಗೆಗಳ ಮುಂದೆ ಪುರಸಭೆ ಕಸದ ವಾಹನದಲ್ಲಿದ್ದ ಕಸವನ್ನು ತಂದು ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಸದಸ್ಯರಾದ ಶಶಿಧರ್, ಲೋಕೇಶಪ್ಪ, ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.