ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಮೇಲೆ ಹಲ್ಲೆ

ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಮೇಲೆ ಹಲ್ಲೆ
Published on

ಅರಸೀಕೆರೆ: ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಮೇಲೆ ಹಲ್ಲೆ ನಡೆಸಲು ಮುಂದಾಗಿರುವವರ ಕಿಡಿಗೇಡಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುವಂತೆ ಒತ್ತಾಯಿಸಿ ಪಕ್ಷದ ಮುಖಂಡರು ಮಂಗಳವಾರ ಬಸವೇಶ್ವರ ವೃತ್ತದಿಂದ ಡಿವೈಎಸ್‌ಪಿ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದರು.

ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ರಾಘವೇಂದ್ರ ಮಾತನಾಡಿ,ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಹೋರಾಟ, ಪ್ರತಿ ಹೋರಾಟ ಸರ್ವೆಸಾಮಾನ್ಯ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯನೊಬ್ಬ ಶಾಸಕ ಕೆ.ಎಂ.ಶಿವಲಿಂಗೇಗೌಡರ ಚಿತಾವಣೆಯಿಂದ ಸೋಮವಾರ ತಡರಾತ್ರಿ ಹತ್ತಾರು ಯುವಕರ ಪಟಾಲಂ ಕಟ್ಟಿಕೊಂಡು ಬೆಲವತ್ತಳ್ಳಿ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎನ್.ಆರ್.ಸಂತೋಷ್ ಅವರಿಗೆ ನಿಂದಿಸಿದ್ದಲ್ಲದೇ, ಕಲ್ಲು ಹಿಡಿದು ಕಾರು ಜಖಂಗೊಳಿಸುವ ಹುನ್ನಾರ ನಡೆಸಿರುವುದು ಅಕ್ಷಮ್ಯ.ಶಾಸಕ ಸ್ಥಾನ ಕೈತಪ್ಪಿ ಹೋಗಲಿದೆ ಎನ್ನುವ ಭೀತಿಯಿಂದ ಕ್ಷೇತ್ರವನ್ನು ಬಿಹಾರ ಮಾಡಲು ಹೊರಟಿದ್ದಾರೆ.ಕಲ್ಲೂರು, ಕಸವನಹಳ್ಳಿ ಗ್ರಾಮದಲ್ಲಿಯೂ ಇಂತಹದ್ದೇ ಘಟನೆ ನಡೆದಿರುವು ತಡವಾಗಿ ಗೊತ್ತಾಗಿದೆ. ಬೆದರಿಕೆ ರಾಜಕಾರಣಕ್ಕೆ ಜಗ್ಗುವ, ಬಗ್ಗುವ ಜಾಯಮಾನ ನಮ್ಮ ನಾಯಕರದ್ದಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.ಇನ್ನೊಮ್ಮೆ ಇಂತಹ ದುಸ್ಸಾಹಸಕ್ಕೆ ಕ್ ಹಾಕಿದಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಗುಡುಗಿದರು.


ಮತ್ತೋರ್ವ ಮುಖಂಡ ವೈ.ಕೆ.ದೇವರಾಜ್ ಮಾತನಾಡಿ, ಅಮಾಯಕರನ್ನು ಎತ್ತಿಕಟ್ಟಿ ಗಲಭೆ ಸೃಷ್ಟಿಸುವ ಹುನ್ನಾರಕ್ಕೆ ಶಾಸಕರು ಮುಂದಾಗಿರುವುದು ಶೋಭೆ ತರುವುದಿಲ್ಲ.ಮತದಾರರ ಮನಗೆಲ್ಲುವುದು ಎಲ್ಲರ ಆದ್ಯತೆಯಾಗಿದೆ. ಆದ್ದರಿಂದಲೇ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿ ಪರಿಹರಿಸುವ ಪ್ರಾಮಾಣಿಕ ಪ್ರಯತ್ನಕ್ಕೆ ಸಂತೋಷ್ ಮುನ್ನುಡಿ ಬರೆದಿದ್ದಾರೆ. ಸೋಲಿನ ಭೀತಿ ಜತೆಗೆ ಹತಾಶೆಗೊಳಗಾಗಿರುವ ಶಿವಲಿಂಗೇಗೌಡರು ಕಾರ್ಯಕರ್ತರ ಮೂಲಕ ಸೇಡಿನ ರಾಜಕಾರಣಕ್ಕೆ ಬೀಜ ಬಿತ್ತಿದಂತಿದೆ ಎಂದು ಕಿಡಿಕಾರಿದರು.ತಾಪಂ ಮಾಜಿ ಸದಸ್ಯ ಭೋಜಾನಾಯ್ಕ, ಮುಖಂಡರಾದ ಶಿವನ್‌ರಾಜ್, ಲಾಳನಕೆರೆ ಯೋಗೀಶ್,ಉಮೇಶ್, ಕಿರಣ್, ಡಾಬಾ ರಘು, ಶಾನೆಗೆರೆ ಮಂಜು,ಕುಮಾರ್ ಸೇರಿ ಹಲವರು ಸಾಥ್ ನೀಡಿದರು. ಬಳಿಕ ಡಿವೈಎಸ್‌ಪಿ ಅಶೋಕ್ ಅವರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net