ಬಾಲ್ಯವಿವಾಹಗಳಿಗೆ ಕಡಿವಾಣ ಹಾಕಲು ಸಚಿವೆ ಶಶಿಕಲಾ ಜೊಲ್ಲೆ ತಾಕೀತು

26CBP4minister
Published on

ಚಿಕ್ಕಬಳ್ಳಾಪುರ : ಲಾಕ್‌ಡೌನ್ ನಡುವೆ ರಾಜ್ಯದಲ್ಲಿ 235 ಬಾಲ್ಯವಿವಾಹಗಳು ನಡೆದಿರುವುದು ಆತಂಕದ ವಿಚಾರ, ಬಾಲ್ಯವಿವಾಹಗಳಿಗೆ ಕಡಿವಾಣ ಹಾಕುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಅ.ಜೊಲ್ಲೆ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವ್ಯಾಪಕ ಜಾಗೃತಿ ನಡುವೆಯೂ ಬಾಲ್ಯವಿವಾಹಗಳಿಗೆ ಸಂಪೂರ್ಣವಾಗಿ ಕಡಿವಾಣ ಬಿದ್ದಿಲ್ಲ. ಲಾಕ್‌ಡೌನ್ ವೇಳೆ ಜಿಲ್ಲೆಯಲ್ಲಿ 4 ಬಾಲ್ಯವಿವಾಹಗಳು ನಡೆದಿವೆ, ಇದರ ನಡುವೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗುವಿಕೆ ಹೆಚ್ಚಾಗಿದ್ದು, ರಾಜ್ಯದಲ್ಲಿ ಕಳೆದ ಸಾಲಿನಲ್ಲಿ 114 ಪ್ರಕರಣಗಳು ದಾಖಲಾಗಿವೆ ಎಂದು ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ, ಗುಣಮಟ್ಟದ ಸೇವೆ ಸಿಗುವ ವಾತಾವರಣ ನಿರ್ಮಿಸಬೇಕು. ಮಕ್ಕಳ ಹಾಜರಾತಿ ಸಂಖ್ಯೆ ಕಡಿಮೆಯಾಗದಂತೆ ವಿನೂತನ ಚಟುವಟಿಕೆಗಳ ಮೂಲಕ ಪಾಲಕರು ಮತ್ತು ಮಕ್ಕಳನ್ನು ಆಕರ್ಷಿಸಬೇಕು ಎಂದರು.

ಪ್ರಸ್ತುತ 1961 ಅಂಗನನಾಡಿ ಕಾರ್ಯಕರ್ತೆಯರು, 1848 ಅಂಗನವಾಡಿ ಸಹಾಯಕಿಯರಿದ್ದಾರೆ, ಖಾಲಿ ಇರುವ 22 ಕಾರ್ಯಕರ್ತೆ ಮತ್ತು 64 ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ, ಜಿಲ್ಲಾದ್ಯಂತ ತೀವ್ರ ಅಪೌಷ್ಟಿಕ ಸಮಸ್ಯೆಯುಳ್ಳ 145 ಮಕ್ಕಳನ್ನು ಗುರುತಿಸಲಾಗಿದೆ. ಕಾಲ ಕಾಲಕ್ಕೆ ವಿಟಮಿನ್ ಮಾತ್ರೆ ಮತ್ತು ಪೌಷ್ಟಿಕ ಆಹಾರ ವಿತರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಾರಾಯಣಸ್ವಾಮಿ ವಿವರಿಸಿದರು.ಜಿಲ್ಲಾಧಿಕಾರಿ ಆರ್ ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net