ಕಾಯಕಯೋಗಿ ತತ್ವ ಅಳವಡಿಸಿಕೊಳ್ಳಿ

Published on

ಬಳ್ಳಾರಿ : 12ನೇ ಶತಮಾನದ ವಚನ ಸಾಹಿತ್ಯದ ವಚನಕಾರರಲ್ಲಿ ಒಬ್ಬರಾದ ಶಿವಯೋಗಿ ಶರಣ ಸಿದ್ದರಾಮೇಶ್ವರರ ಕಾಯಕಯೋಗಿ ತತ್ವಗಳನ್ನು ಅಳವಡಿಸಿಕೊಳ್ಳೋಣ ಎಂದು ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.

ಇಲ್ಲಿನ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ 853ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತತ್ವದ ಮನುಕುಲದ ಸೇವೆ, ಶಿವಯೋಗದ ಮಾರ್ಗವಾಗಿತ್ತು. ವಚನ ಸಾಹಿತ್ಯವನ್ನು ವಿನಾಶದಿಂದ ಪಾರು ಮಾಡುವಲ್ಲಿ ಸಿದ್ದರಾಮೇಶ್ವರರು ಕೂಡ ಒಬ್ಬರಾಗಿದ್ದರು ಎಂದರು.

ಎಡಿಸಿ ಮಹಮ್ಮದ್ ಎನ್.ಜುಬೇರ್ ಮಾತನಾಡಿ, ಸಿದ್ದರಾಮೇಶ್ವರರು ಜಾತಿ ಮತ್ತು ಲಿಂಗ ತಾರತಮ್ಯದ ಕುರುಡು ಸಂಪ್ರದಾಯಗಳನ್ನು ತಿರಸ್ಕರಿಸಿದ್ದರು. ವೈಯಕ್ತಿಕ ಅನುಭವದ ಮೂಲಕ ಸಾಕ್ಷರತೆಗೆ ಒತ್ತು ನೀಡಿದ್ದರು. ಸಮ ಸಮಾಜ ಕಟ್ಟುವಲ್ಲಿ ಕನಸು ಕಂಡಿದ್ದವರು ಎಂದು ಹೇಳಿದರು.

ಸಹಾಯಕ ಪ್ರಾಧ್ಯಾಪಕರಾದ ಗಾದೆಪ್ಪ ಮಾತನಾಡಿ, ತನ್ನ ಸ್ವಂತ ಕಾಯಕದ ಮೂಲಕ ಅಪ್ರತಿಮ ಶರಣನಾಗಿ ರೂಪಗೊಂಡವರು. ವಚನಗಳನ್ನು ರಚಿಸಿರುವುದು ಮಾತ್ರವಲ್ಲದೆ, ವಚನ ಸಂರಕ್ಷಣೆಯೂ ಮಾಡಿದ್ದಾರೆ. ಕೆರೆ, ಕಟ್ಟೆ ಕಟ್ಟಿಸಿ ಜನೋಪಯೋಗಿ ಕಾರ್ಯ ಕೈಗೊಂಡು ಶರಣತತ್ವದ ಪರಿಪಾಲಕರಾಗಿದ್ದರು ಎಂದರು.

ಮೆರವಣಿಗೆ: ಜಯಂತಿ ಅಂಗವಾಗಿ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ಡೊಳ್ಳು, ವಾದ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಇಲ್ಲಿನ ಮುನ್ಸಿಪಾಲ್ ಕಾಲೇಜು ಮೈದಾನದಿಂದ ಆರಂಭಗೊಂಡು ವೇದಿಕೆ ಕಾರ್ಯಕ್ರಮದವರೆಗೆ ತಲುಪಿ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net