ಪೌರ ಕಾರ್ಮಿಕರ ಸೇವೆ ಅನನ್ಯ

23 YERRISWAMY 06
Published on

ಬಳ್ಳಾರಿ : ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು, ಸ್ವಚ್ಛತಾ ರೂವಾರಿಗಳು. ಸಂದಿಗ್ಧ ಸ್ಥಿತಿಯಲ್ಲಿಯೂ ಬಿಡುವಿಲ್ಲದ ನೈರ್ಮಲೀಕರಣ ಕಾರ್ಯ ಕೈಗೊಳ್ಳುತ್ತಿರುವ ಅವರ ಸೇವೆ ಅನನ್ಯವಾಗಿದೆ ಎಂದು ಪಾಲಿಕೆಯ ಮೇಯರ್‌ಮುಲ್ಲಂಗಿ ನಂದೀಶ್ ಶ್ಲಾಘಿಸಿದರು.
ಇಲ್ಲಿನ ಕಮ್ಮಭವನದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸೋಮವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಗರದ ಸ್ವಚ್ಚತೆ ಕಾಪಾಡುವ ಗುರುತರ ಜವಾಬ್ದಾರಿ ಪೌರಕಾರ್ಮಿಕರ ಮೇಲಿದೆ.
ಪಾಲಿಕೆ ವ್ಯಾಪ್ತಿಯಲ್ಲಿ 334 ಖಾಯಂ ಪೌರಕಾರ್ಮಿಕರು ಇದ್ದಾರೆ. ಅದೇ ರೀತಿಯಾಗಿ 190 ಪೌರ ಕಾರ್ಮಿಕರು ನೇರಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿದ್ದಾರೆ. 150 ಹೊರಗುತ್ತಿಗೆ ಮತ್ತು 90 ಪೌರ ಕಾರ್ಮಿಕರು ಒಳ ಚರಂಡಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರಿದ್ದಾರೆ ಎಂದು ತಿಳಿಸಿದರು.
ಎಡಿಸಿ ಮಹಮ್ಮದ್ ಎನ್. ಝುಬೇರ್ ಮಾತನಾಡಿ, ಯಾವುದೇ ಹುದ್ದೆಯು ಮೇಲು-ಕೀಳು ಎಂಬ ಭೇದ-ಭಾವವಿಲ್ಲ. ದೇಶ ಸೇವೆ-ಈಶ ಸೇವೆ ಎನ್ನುವ ರೀತಿಯಲ್ಲಿ ಪ್ರತಿಯೊಂದು ಹುದ್ದೆಯು ತನ್ನದೇ ಆದ ಮಹತ್ವ ಹೊಂದಿದೆ. ಪೌರ ಕಾರ್ಮಿಕರಂತಹ ವ್ಯಕ್ತಿಗಳನ್ನು ಪ್ರತಿವರ್ಷ ಗೌರವಿಸುವುದು ಜನಮೆಚ್ಚುವ ಕಾರ್ಯವಾಗಿದೆ ಎಂದು ಹೇಳಿದರು.
ಪಾಲಿಕೆ ವತಿಯಿಂದ ಕಾರ್ಮಿಕರಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕ್ರೀಡಾಕೂಟದ ಅಂಗವಾಗಿ ಕ್ರಿಕೆಟ್, ಥ್ರೋಬಾಲ್, ಮ್ಯೂಸಿಕಲ್ ಚೇರ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net