ಪೌರಕಾರ್ಮಿಕರು ಜನರ ಆರೋಗ್ಯ ಕಾಪಾಡುವ ವೈದ್ಯರು

oplus_2
oplus_2
Published on

ವಿಜಯವಾಣಿ ಸುದ್ದಿಜಾಲ ವಿಜಯಪುರ
ಪೌರ ಕಾರ್ಮಿಕರು ಆರೋಗ್ಯವನ್ನು ಲೆಕ್ಕಿಸದೆ ಸಾರ್ವಜನಿಕರ ಆರೋಗ್ಯ ಕಾಪಾಡುವ ವ್ಯೆದ್ಯರಾಗಿದ್ದಾರೆ ಎಂದು ಪುರಸಭಾ ಮುಖ್ಯಾಧಿಕಾರಿ ಸಂತೋಷ್ ಬಣ್ಣಿಸಿದರು.
ಪುರಸಭೆ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಪೌರಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಪೌರ ಕಾರ್ಮಿಕರನ್ನು ಸಮಾಜ ಕೀಳಾಗಿ ಕಾಣಬಾರದು. ಪೌರ ಕಾರ್ಮಿಕರು ಶ್ರದ್ಧೆಯಿಂದ ಕಾಯಕ ಮಾಡಬೇಕು. ದೊಡ್ಡ ವ್ಯಕ್ತಿ ಮತ್ತು ಉನ್ನತ ಹುದ್ದೆಯಲ್ಲಿರುವವರನ್ನು ಸತ್ಕರಿಸುವುದು, ಗೌರವಿಸುವುದು ದೊಡ್ಡ ಕಾರ್ಯವಲ್ಲ, ಪೌರ ಕಾರ್ಮಿಕರಂತಹ ವ್ಯಕ್ತಿಗಳನ್ನು ಪ್ರತಿವರ್ಷ ಗೌರವಿಸುವುದೇ ಜನಮೆಚ್ಚುವ ಕಾರ್ಯ ಎಂದರು.
ಪುರಸಭೆ ಸದಸ್ಯ ನಂದಕುಮಾರ್ ಮಾತನಾಡಿ, ಸರ್ಕಾರ ಪೌರಕಾರ್ಮಿಕರ ಮೂಲ ಸೌಕರ್ಯದ ಕಡೆ ಗಮನಹರಿಸಬೇಕು, ಅವರಿಗೂ ವಸತಿ ಸೌಲಭ್ಯ ಕಲ್ಪಿಸಬೇಕು. ವಿಜಯಪುರ ಪುರಸಭೆ ಸರ್ಕಾರದಿಂದ ಎರಡು ಬಾರಿ ಸ್ವಚ್ಛತೆಗಾಗಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದೆ ಎಂದರು.

ಪುರಸಭೆ ಸದಸ್ಯ ಹನೀಪುಲ್ಲಾ ಮಾತನಾಡಿ, ಜನ್ಮಕೊಟ್ಟ ತಾಯಿ, ತಂದೆ ತಮ್ಮ ಮಕ್ಕಳಿಗಾಗಿ ಹೇಗೆ ದುಡಿಯುತ್ತಾರೋ, ಹಾಗೆಯೇ ಪೌರಕಾರ್ಮಿಕರು ನಮಗಾಗಿ ಕೆಲಸ ಮಾಡುತ್ತಿದ್ದಾರೆ. ದೇಶ ಕಾಯುವ ಸೈನಿಕ ರಾತ್ರಿ ಹಗಲು ಎನ್ನದೇ ನಮ್ಮ ದೇಶ ಕಾಯುತ್ತಾರೆ. ಸೈನಿಕರು ಹಾಗೂ ಕಾರ್ಮಿಕರು ಎಲ್ಲರನ್ನು ತಮ್ಮ ಕರ್ತವ್ಯದ ಮೂಲಕ ರಕ್ಷಣೆ ಮಾಡುತ್ತಿದ್ದಾರೆ. ಈಗಾಗಲೇ ಸರ್ಕಾರದಿಂದ ಪೌರ ಕಾರ್ಮಿಕರಿಗೆ ತಕ್ಷಣವೇ ನಿವೇಶನ ಒದಗಿಸಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಕಡೆ ಕಡತಗಳಿದ್ದು ಕೆಲವೇ ದಿನಗಳಲ್ಲಿ ಅವರಿಗೆ ನಿವೇಶನ ನೀಡುವ ಕುರಿತಂತೆ ಸರ್ಕಾರ ಸೂಕ್ತ ಕ್ರಮ ವಹಿಸಲಿದೆ ಎಂದರು.
ಪುರಸಭೆ ಸದಸ್ಯರಾದ, ಸಿ.ನಾರಾಯಣಸ್ವಾಮಿ, ರಾಜಣ್ಣ, ಬೈರೇಗೌಡ, ರಾಮು, ಮಂಜುಳಾ ಮುನಿರಾಜು,
ಶ್ರೀರಾಮಪ್ಪ, ಸಲ್ಮಾ ಖಾನಂ, ಕವಿತಾ ಆಂಜಿನಪ್ಪ, ಶಿಲ್ಪಾಅಜಿತ್, ಭವ್ಯಾಮಧು, ಆಯೆಷಾ ಸೈಪುಲ್ಲಾ, ಪುರಸಭಾ ಮೇಸ್ತ್ರಿ ಅಪ್ಪಿ, ಕಂದಾಯ ಅಧಿಕಾರಿ ಚಂದ್ರು, ಕಂದಾಯ ನಿರೀಕ್ಷಕ ತ್ಯಾಗರಾಜ್, ಆರೋಗ್ಯ ಅಧಿಕಾರಿ ಲಾವಣ್ಯ, ಸಹನಾ, ಸಿಬ್ಬಂದಿಗಳಾದ ಅನಿಲ್, ಪವನ್ ಜೋಶಿ, ಜನಾರ್ದನ, ಸುನೀಲ್, ಮಂಜುನಾಥ್, ಪೃಥ್ವಿ, ಶಿವ ನಾಗೇಗೌಡ, ಮೂರ್ತಿ, ವಿನೋದ್, ರವಿ, ಹೇಮಾವತಿ, ಲಿಂಗಣ್ಣ, ಕುಮಾರ್, ಮಂಜುನಾಥ್, ಹೇಮಂತ್ ಕುಮಾರ್, ಜನಾರ್ಧನ್ ಇತರರು ಇದ್ದರು.

ಉತ್ತಮ ಸೇವೆ ಸಲ್ಲಿಸಿದವರಿಗೆ ಹೊದಿಕೆ ವಿತರಣೆ: ಪೌರ ಕಾರ್ಮಿಕರಿಗೆ ಸಮಾಜ ಸೇವಕರಾದ ಅಂಬರೀಶ್, ಕೆನರಾ ಬ್ಯಾಂಕ್, ಕೋಟಕ್ ಮಹೇಂದ್ರ ಬ್ಯಾಂಕ್ ವತಿಯಿಂದ ಮಿಕ್ಸಿ, ಸಮವಸ್ತ್ರ ಹಾಗೂ ಹೊದಿಕೆಗಳನ್ನು ವಿತರಿಸಲಾಯಿತು. ಉತ್ತಮ ಸೇವೆ ಸಲ್ಲಿಸಿದ ಪೌರಕಾರ್ಮಿಕರಾದ ಈ.ಸೀನಾ, ಉತ್ತಮ ಸೇವೆ ಸಲ್ಲಿಸಿ ನಿಧನರಾದ ತಾಯಮ್ಮ ಅವರ ಪರವಾಗಿ ಅವರ ಪುತ್ರ ಶ್ರೀನಿವಾಸ್, ವಿಜಯಪುರ ಪುರಸಭೆಯ ಪೌರಕಾರ್ಮಿಕ ಮೇಸ್ತ್ರಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದ ನಾಗರಾಜ್ ಹಾಗೂ ಪೌರಕಾರ್ಮಿಕರುಗಳಿಗೆ ಹೊದಿಕೆಗಳನ್ನು ವಿತರಿಸಲು ಪ್ರಾಯೋಜಕತ್ವ ವಹಿಸಿದ್ದ ಸಂಧ್ಯಾಅಂಬರೀಶ್ ದಂಪತಿ ಮತ್ತು ಸಮವಸ್ತ್ರಗಳ ಕಾಣಿಕೆ ನೀಡಿದ ಕೆನರಾ ಬ್ಯಾಂಕ್‌ನ ಮ್ಯಾನೇಜರ್ ಎಲ್. ಶ್ರೀಧರ್ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net