

ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ
ಮೊದ ಮೊದಲು ಅಮಾಯಕರನ್ನು ಯಾಮಾರಿಸಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಸೈಬರ್ ಖದೀಮರು ಇದೀಗ ಪೊಲೀಸರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ವಂಚಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಹೆಸ್ಕಾಂ ಜಾಗೃತ ದಳದ ಇನ್ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ಹೆಸರಲ್ಲಿ ಇತ್ತೀಚೆಗೆ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿದ್ದ ಸೈಬರ್ ಕಳ್ಳರು ನಂತರ ವಿದ್ಯಾನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆನಂದ ಒನಕುದ್ರೆ, ಧಾರವಾಡ ಪೊಲೀಸ್ ತರಬೇತಿ ಶಾಲೆ ಇನ್ಸ್ಪೆಕ್ಟರ್ ಗಿರೀಶ ಬೋಜಣ್ಣವರ ಹೆಸರಲ್ಲೂ ನಕಲಿ ಫೇಸ್ಬುಕ್ ಖಾತೆ ತೆರೆದು ಅವರ ಹೆಸರಲ್ಲಿ ವಂಚನೆಗೆ ಮುಂದಾಗಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳೇ ಈ ಬಗ್ಗೆ ಸೈಬರ್ ಕ್ರೖೆಂಗೆ ದೂರಿದ್ದಾರೆ.
ಇನ್ಸ್ಪೆಕ್ಟರ್ಗಳ ಅಸಲಿ ಫೇಸ್ಬುಕ್ ಖಾತೆಯಿಂದ ಖಾಕಿ ಸಮವಸ್ತ್ರದಲ್ಲಿರುವ ಫೋಟೊಗಳನ್ನು ಕದಿಯುತ್ತಾರೆ. ಅವರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಅವರ ಸ್ನೇಹಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ನಂತರ ಮೆಸೆಂಜರ್ ಮೂಲಕ ಚಾಟಿಂಗ್ ಮಾಡುತ್ತಾರೆ. ಅದರಲ್ಲಿ ‘ಅರ್ಜೆಂಟಾಗಿ 20 ಸಾವಿರ ರೂ. ಬೇಕಾಗಿದೆ. ನಾಳೆ ವಾಪಸ್ ಕೊಡುತ್ತೇನೆ ಈ ಖಾತೆಗೆ ಹಣ ಕಳುಹಿಸಿ’ ಎಂದು ಅಧಿಕಾರಿಗಳ ಸೋಗಿನಲ್ಲಿ ಅವರ ಸ್ನೇಹಿತರಿಗೆ ಬಲೆ ಹಾಕುತ್ತಾರೆ.
ಪಶ್ಚಿಮ ಬಂಗಾಳ, ಬಿಹಾರ, ದೆಹಲಿ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳು ಹಾಗೂ ಕಿನ್ಯಾ, ದಕ್ಷಿಣ ಆಫ್ರಿಕಾ ಮೊದಲಾದ ರಾಷ್ಟ್ರಗಳಿಂದ ಕಾರ್ಯನಿರ್ವಹಿಸಿ ಸೈಬರ್ ವಂಚಕರು ಮೋಸ ಮಾಡುತ್ತಿದ್ದಾರೆ. ಸಾಫ್ಟವೇರ್ ಇಂಜಿನಿಯರ್, ಬಿಟೆಕ್, ಎಂಟೆಕ್ ಮತ್ತಿತರ ಉನ್ನತ ವ್ಯಾಸಂಗ ಮಾಡಿರುವ ಹ್ಯಾಕರ್ಗಳು ಈ ತಂಡದಲ್ಲಿ ಇದ್ದಾರೆ ಎನ್ನಲಾಗಿದೆ. ತಂತ್ರಜ್ಞಾನ ಕುರಿತು ಹೆಚ್ಚಿನ ತಿಳಿವಳಿಕೆ ಇರುವ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಸೈಬರ್ ಕ್ರೖೆಂ ವಿಭಾಗಕ್ಕೆ ನೇಮಿಸಬೇಕು ಇಲ್ಲವೇ ಈಗಿರುವ ಸಿಬ್ಬಂದಿಗೆ ಹೆಚ್ಚಿನ ತರಬೇತಿ ನೀಡಿ ಇಂಥವರ ಪತ್ತೆಗಾಗಿ ಕ್ರಮ ಕೈಗೊಳ್ಳಬೇಕು ಎಂಬ ಮಾತುಗಳು ಪೊಲೀಸ್ ಇಲಾಖೆಯಲ್ಲೇ ಕೇಳಿಬರುತ್ತಿವೆ.
ಸಾಮಾಜಿಕ ಜಾಲತಾಣಗಳ ಮೂಲಕ ಯಾರಾದರೂ ಹಣ ಕೇಳಿದರೆ ತಕ್ಷಣ ಹಣ ರವಾನಿಸದೇ ಕೂಲಂಕಷವಾಗಿ ವಿಚಾರಿಸಬೇಕು. ನೇರವಾಗಿ ಸಂಬಂಧಪಟ್ಟವರಿಗೆ ಕರೆ ಮಾಡಿ ಖಚಿತಪಡಿಸಿಕೊಳ್ಳಬೇಕು. ಸೈಬರ್ ವಂಚಕರ ಬಗ್ಗೆ ಎಚ್ಚರದಿಂದ ಇರಬೇಕು. ಅನುಮಾನ ಬಂದಲ್ಲಿಠಾಣೆಯಲ್ಲಿ ದೂರು ನೀಡಬೇಕು.| ಎಸ್.ಬಿ. ಮಾಳಗೊಂಡ ಇನ್ಸ್ಪೆಕ್ಟರ್, ಸೈಬರ್ ಕ್ರೖೆಂ ಪೊಲೀಸ್ ಠಾಣೆ
ಎಸಿಪಿ ಅನುಷಾ ಹೆಸರಲ್ಲಿ ನಕಲಿ ಐಡಿ !
ಇನ್ಸ್ಪೆಕ್ಟರ್ಗಳ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿದ ವಂಚಕರು ಒಂದು ಹೆಜ್ಜೆ ಮುಂದೆ ಹೋಗಿ ಎಸಿಪಿ ಹೆಸರಲ್ಲಿ ನಕಲಿ ಗುರುತಿನ ಚೀಟಿ ಸೃಷ್ಟಿಸಿ ವಂಚನೆಗೆ ಯತ್ನಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಧಾರವಾಡದ ಎಸಿಪಿ ಅನುಷಾ ಜಿ. ಅವರು ಸಮವಸ್ತ್ರದಲ್ಲಿರುವ ಭಾವಚಿತ್ರ ಬಳಸಿ, ಕಸ್ಟಮ್್ಸ ಅಧಿಕಾರಿ ಹೆಸರಲ್ಲಿ ನಕಲಿ ಐಡಿ ಕಾರ್ಡ್ ಸೃಷ್ಟಿಸಿ ವಂಚನೆಗೆ ಯತ್ನಿಸಿದ್ದರು. ವಿಷಯ ತಿಳಿದ ಕೂಡಲೆ ಎಚ್ಚೆತ್ತ ಅನುಷಾ ಅವರು ಬೆಂಗಳೂರು ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರುವಂತೆ ಅವರು ಮನವಿ ಮಾಡಿದ್ದಾರೆ.