

ಲಕ್ಷೆ್ಮೕಶ್ವರ: ಪೊಲೀಸರು ಊಟ ಮಾಡುವಾಗ ಮಂಗವೊಂದು ಬಂದು ಅವರೊಂದಿಗೆ ಕುಳಿತು ಯಾವುದೇ ಅಂಜಿಕೆಯಿಲ್ಲದೆ ತಟ್ಟೆಯಲ್ಲಿ ಕೈ ಹಾಕಿ ಊಟ ಮಾಡಿದ ಅಪರೂಪದ ಘಟನೆ ಶಿರಹಟ್ಟಿ ತಾಲೂಕಿನ ಕಪ್ಪತಗುಡ್ಡದ ಕಪ್ಪತಮಲ್ಲೇಶ್ವರ ದೇವಸ್ಥಾನದ ಬಳಿ ಗುರುವಾರ ನಡೆದಿದೆ.
ಶ್ರಾವಣ ಮಾಸದಲ್ಲಿ ಕಪ್ಪತಗುಡ್ಡದ ಕಪ್ಪತಮಲ್ಲೇಶ್ವರ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಜಾತ್ರೆಗೆ ನಾಡಿನಾದ್ಯಂತ ಸಾವಿರಾರು ಭಕ್ತರು ಆಗಮಿಸುತ್ತಾರೆ. ಗುರುವಾರ ನಡೆದ ಜಾತ್ರೆಗೆ ಶಿರಹಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿ ಬಂದೋಬಸ್ತ್ಗೆ ತೆರಳಿದ್ದರು.
ದೇವಸ್ಥಾನದ ಬಳಿಯಿರುವ ದೈವಿ ಉದ್ಯಾನದ ಬಳಿ ಅಂದು ಮಧ್ಯಾಹ್ನ ನಾಲ್ವರು ಪೊಲೀಸ್ ಸಿಬ್ಬಂದಿ ಬುತ್ತಿಯನ್ನು ಬಿಚ್ಚಿ ಊಟಕ್ಕೆ ಅಣಿಯಾದರು. ಆಗ ಅಲ್ಲಿಯೇ ಸುತ್ತಾಡುತ್ತಿದ್ದ ಮಂಗವೊಂದು ಪೊಲೀಸ್ ಕಾನ್ಸ್ಟೆಬಲ್ ಶ್ರೀಕಾಂತ ಜಂಗಣ್ಣವರ್ ಅವರ ಊಟದ ತಟ್ಟೆಗೇ ಕೈ ಹಾಕಿ ಉಣ್ಣಲು ಶುರು ಮಾಡಿತು. ಆದರೆ, ಈ ಬಗ್ಗೆ ಕಿಂಚಿತ್ತೂ ಬೇಸರ ಮತ್ತು ಭಯಪಡದೇ ಶ್ರೀಕಾಂತ ಸೇರಿ ನಾಲ್ವರು ಸಿಬ್ಬಂದಿ ಅದರೊಂದಿಗೆ ಪ್ರೀತಿಯಿಂದ ಊಟ ಮಾಡಿದ್ದಾರೆ.
ಈ ಅಪರೂಪದ ವಿಡಿಯೋ ಶಿರಹಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೊಬೈಲ್ ಫೋನ್ಗಳ ವಾಟ್ಸ್ ಆಪ್ಗಳಲ್ಲಿ ಹರಿದಾಡುತ್ತಿದೆ. ಪೊಲೀಸ್ ಸಿಬ್ಬಂದಿಯ ಮಾನವೀಯತೆ ಮೆಚ್ಚಿದ ಸಿಪಿಐ ವಿಕಾಸ ಲಮಾಣಿ ಸೇರಿ ಬಹುತೇಕ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಮಾಜಿಕ ತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಕಪ್ಪತಮಲ್ಲೇಶ್ವರ ಜಾತ್ರಾ ಮಹೋತ್ಸವದ ಬಂದೋಬಸ್ತ್ಗೆ ತೆರಳಿದ್ದ ನಾವು ಗುರುವಾರ ಮಧ್ಯಾಹ್ನ ಊಟಕ್ಕೆ ಊಟ ಮಾಡಲು ಕುಳಿತೇವು. ಆಗ ಮಂಗವೊಂದು ಹತ್ತಿರ ಬಂದು ಕುಳಿತುಕೊಂಡಿತು. ನಾನು ದಕ್ಕೆ ಸ್ವಲ್ಪ ಸಿಹಿ ತಿನ್ನಿಸಿದೆ. ಬಳಿಕ ಅದು ತಾನೇ ತಟ್ಟೆಗೆ ಕೈಹಾಕಿ ಊಟ ಮಾಡತೊಡಗಿತು. ನಾನೂ ಅದೇ ತಟ್ಟೆಯಲ್ಲಿ ಅದರೊಂದಿಗೆ ಊಟ ಮಾಡಿದೆ. ನಾನು ಆಂಜನೇಯಸ್ವಾಮಿಯ ಭಕ್ತ. ಪ್ರತಿ ಶನಿವಾರ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗುತ್ತೇನೆ. ಜತೆಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಅವೂ ನಮ್ಮಂತೆಯೇ ಭಾವ ಜೀವಿಗಳು. ಮಂಗ ಬಂದು ನಮ್ಮೊಂದಿಗೆ ಊಟ ಮಾಡಿದ್ದು ಖುಷಿ ಎನಿಸಿತು. ನನ್ನೊಟ್ಟಿಗಿದ್ದ ಸಿಬ್ಬಂದಿ ಆರ್.ಎಚ್. ಮುಲ್ಲಾ, ರಾಮಗಿರಿ, ರಾಜೇಶ ಕೂಡ ಅಷ್ಟೇ ಪ್ರೀತಿಯಿಂದ ತಮ್ಮ ಊಟ ಹಂಚಿಕೊಂಡರು. ಶ್ರೀಕಾಂತ ಜಂಗಣ್ಣವರ್ ಕಾನ್ಸ್ಟೆಬಲ್