ಪೂರ್ವಭಾವಿ ಸಭೆಗೆ ಅಧಿಕಾರಿಗಳ ಗೈರು

31kdr2 sabhe
ಕಡೂರು ತಾಪಂ ಸಭಾಂಗಣದಲ್ಲಿ ಡಾ ಅಂಬೇಡ್ಕರ್ ಜಯಂತಿ ಆಚರಣೆಯ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಮಾತನಾಡಿದರು. ಸಿ.ಎಸ್.ಪ್ರವೀಣ್, ನಟರಾಜ್ ಇದ್ದರು.
Published on

ಕಡೂರು: ಪಟ್ಟಣದಲ್ಲಿ ಏ.14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ಜಯಂತಿ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಡಿಎಸ್‌ಎಸ್ ಸಂಘಟನೆಗಳ ಸಲಹೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಜಯಂತಿ ಆಚರಣೆ ನಡೆಸಲು ತೀರ್ಮಾನಿಸಲಾಗಿದೆ. ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಗುವುದು. ಸಮಾಜದ ಗಣ್ಯರನ್ನು ಗೌರವಿಸಲಾಗುತ್ತದೆ ಎಂದರು.

ಸಭೆ ಆರಂಭದಲ್ಲಿಯೇ ವಿವಿಧ ಇಲಾಖೆ ಅಧಿಕಾರಿಗಳು ಸಭೆಗೆ ಆಗಮಿಸದಿರುವ ಬಗ್ಗೆ ಡಿಎಸ್‌ಎಸ್ ಸಂಘಟನೆ ಮುಖಂಡರು ಅಸಮಾಧಾನ ವ್ಯಕ್ತಪಡಿಸಿ ಸರ್ಕಾರಿ ಕಾರ್ಯಕ್ರಮವನ್ನು ಸಂಘಟನೆ ಮೂಲಕವೇ ಆಚರಿಸಲಾಗುತ್ತದೆ. ಅಧಿಕಾರಿಗಳ ಅವಶ್ಯಕತೆ ಇಲ್ಲ. ಕೇವಲ ಕಾಟಾಚಾರದ ಕಾರ್ಯಕ್ರಮವಾಗಿ ಆಯೋಜಿಸಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಮುಖಂಡರು ಆಕ್ಷೇಪ ವ್ಯಕ್ತಪಡಿಸಿ, ಪೂರ್ವಭಾವಿ ಸಭೆಗೆ ಬಾರದಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ತಾಪಂ ಇಒ ಸಿ.ಆರ್.ಪ್ರವೀಣ್ ಮಾತನಾಡಿ, ಕ್ಷೇತ್ರದ ಶಾಸಕರ ಸೂಚನೆಯಂತೆ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ. ಎಲ್ಲ ಇಲಾಖೆ ಅಧಿಕಾರಿಗಳೂ ಕಡ್ಡಾಯವಾಗಿ ಹಾಜರಿದ್ದು ಸಮಾರಂಭದ ಜವಾಬ್ದಾರಿ ನಿರ್ವಹಿಸಬೇಕು ಎಂದರು.

ಸಭೆಗೆ ಬಾರದಿರುವ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಬರೆಯಲಾಗುವುದು. ಇಬ್ಬರೂ ಮಹಾನ್ ನಾಯಕರ ಜಯಂತಿಯನ್ನು ಒಟ್ಟಿಗೆ ಆಚರಿಸಲಾಗುವುದು ಎಂದು ತಹಸೀಲ್ದಾರ್ ಪೂರ್ಣಿಮಾ ತಿಳಿಸಿದರು.

ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಟರಾಜ್, ಡಿಎಸ್‌ಎಸ್ ಸಂಘಟನೆಯ ಮುಖಂಡರಾದ ಟಿ. ಮಂಜಪ್ಪ, ಕೃಷ್ಣಪ್ಪ, ಬಿ.ಟಿ.ಗಂಗಾಧರನಾಯ್ಕ, ಬಿ.ಟಿ.ಚಂದ್ರಶೇಖರ್, ಬೀರೂರು ಎನ್. ಗಿರೀಶ್, ಗೋಪಾಲ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net