ಪೂರ್ಣಯ್ಯ ನಾಲೆ ಉಳಿವಿಗೆ ಯುವಜನರ ನಡಿಗೆ

mysore
Published on

ಮೈಸೂರು: ನಗರದ ಜಲಮೂಲವಾಗಿರುವ ಕುಕ್ಕರಹಳ್ಳಿ ಕೆರೆ ಹಾಗೂ ಅದಕ್ಕೆ ನೀರು ಪೂರೈಕೆ ಮಾಡುವ ಪೂರ್ಣಯ್ಯ ನಾಲೆ ಉಳಿವಿಗೆ ಯುವಜನರು ಹಾಗೂ ಹಿರಿಯ ನಾಗರಿಕರು ನಾಲಾ ನಡಿಗೆ ಮೂಲಕ ಜಾಗೃತಿ ಮೂಡಿಸಿದರು.

ಕುಕ್ಕರಹಳ್ಳಿ ಕೆರೆಯ ಪ್ರವೇಶದ್ವಾರದ ಬಳಿ 20ಕ್ಕೂ ಹೆಚ್ಚು ಜನರು, ವಾಟರ್ ಫೋರಂ ಸದಸ್ಯರು ನಾಲಾ ನಡಿಗೆ ಕಾರ್ಯಕ್ರಮ ನಡೆಸಿದರು. ಇದರೊಂದಿಗೆ ಒತ್ತುವರಿಯಿಂದ ತತ್ತರಿಸಿರುವ ನಾಲೆಯನ್ನು ಉಳಿಸಿ ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಪರಿಸರ ತಜ್ಞ ಯು.ಎನ್.ರವಿಕುಮಾರ್ ಮಾತನಾಡಿ, ಕುಕ್ಕರಹಳ್ಳಿ ಕೆರೆಯ ಜೀವ ಪರಿಸರ ವ್ಯವಸ್ಥೆ ಉಳಿವಿಗೆ ಮಾಡಬಹುದಾದ ಕ್ರಮಗಳ ಬಗ್ಗೆಯೂ ಬೆಳಕು ಚೆಲ್ಲಿದರು. ಕಾವೇರಿ ಹಾಗೂ ಕಬಿನಿ ಬೇರ್ಪಡಿಸುವ ಇಲವಾಲ ಎತ್ತರ ಭೂಮಿ ದಕ್ಷಿಣ ತಗ್ಗನ್ನು ಅನುಸರಿಸಿ ನಿರ್ಮಿಸಲಾದ ಪೂರ್ಣಯ್ಯ ನಾಲೆ, ಕುಕ್ಕರಹಳ್ಳಿ ಕೆರೆಯ ಕೋಡಿ ವಿಶೇಷತೆಯನ್ನು ಯುವಜನರಿಗೆ ತಿಳಿಸಿಕೊಟ್ಟರು.

ಕ್ರಿ.ಶ.1878-79ರ ಸುಮಾರಿಗೆ ನಿರ್ಮಾಣಗೊಂಡಿರುವ ಪಾರಂಪರಿಕ ಪೂರ್ಣಯ್ಯ ನಾಲೆ 25 ಕಿ.ಮೀ. ಉದ್ದ ಚಾಚಿಕೊಂಡಿದೆ. ಕಳೆದ ಮೂರು ದಶಕದಿಂದ ನಾಲೆಯ ಒತ್ತುವರಿ ನಡೆದಿದೆ. ಬೋಗಾದಿ ರಸ್ತೆಯ ಹುಯಿಲಾಳು ಕೆರೆಯಿಂದ ಕುಕ್ಕರಹಳ್ಳಿ ಕೆರೆಗೆ ಸಂಪರ್ಕ ಕಲ್ಪಿಸುವ ನಾಲೆಯು ನಗರದ ಜೀವನಾಡಿ. ಕಾವೇರಿ ನದಿ ನೀರು ಅಭಾವವಾದರೂ ಪೂರ್ಣಯ್ಯ ನಾಲೆಯಿಂದಾಗುವ ಅಂತರ್ಜಲ ಮರುಪೂರಣದಿಂದ ಭವಿಷ್ಯದಲ್ಲಿ ನೀರಿನ ಅಭಾವ ತಪ್ಪಲಿದೆ ಎಂದು ರವಿಕುಮಾರ್ ತಿಳಿಸಿದರು.

ಇಲವಾಲ ಬೆಟ್ಟ ಶ್ರೇಣಿ ಹುಲ್ಲುಗಾವಲಿನ ಪ್ರದೇಶವಾಗಿತ್ತು. ಅಳಿವಿನಂಚಿನ ಗ್ರೇಟ್ ಇಂಡಿಯನ್ ಬಸ್ಟರ್ಡ್ ದಶಕಗಳ ಹಿಂದೆ ಕಾಣಿಸಿಕೊಂಡಿತ್ತು. ಹುಲ್ಲುಗಾವಲು, ಜಮೀನುಗಳು ಇದೀಗ ಬಡಾವಣೆಗಳಾಗಿ ರೂಪಾಂತರಗೊಂಡಿವೆ.

ಮಳೆಗಾಲದಲ್ಲಿ ಆಳೆತ್ತರದ ನೀರು ಹರಿಯುತ್ತಿತ್ತು. ಈಗ ನಾಲೆ ಅಲ್ಲಲ್ಲಿ ಒಡೆದಿದೆ. ಕಟ್ಟಡ ತ್ಯಾಜ್ಯದಿಂದ ತುಂಬಿಕೊಂಡಿದೆ. ಒತ್ತುವರಿಯಿಂದಾಗಿ ಬೋಗಾದಿ ಹಾಗೂ ಕುದುರೆಮಾಳ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಯಾಗುತ್ತಿದೆ ಎಂದು ತಿಳಿಸಿದರು.

ಕುಕ್ಕರಹಳ್ಳಿ ಕೆರೆಯ ಕೋಡಿ ನಾಲೆಯೇ ಸೇರುವ ಜಾಗ ಆಗಿತ್ತು. ಕೋಡಿ ಭಾಗವನ್ನು ಕಟ್ಟಡ ತ್ಯಾಜ್ಯದಿಂದ ತುಂಬಲಾಗಿದೆ. ಕೋಡಿ ನೀರು ಧೋಬಿಘಾಟ್‌ಗೆ ಹೋಗುತ್ತಿತ್ತು ಎಂದು ವಿದ್ಯಾರ್ಥಿಗಳಿಗೆ ತೋರಿಸಿದ ಅವರು, ಕುದುರೆಮಾಳದಲ್ಲಿನ ನಾಲೆ ಹಾಗೂ ಒತ್ತುವರಿಯನ್ನೂ ವಿವರಿಸಿದರು.

ಮೈಸೂರು ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನ ಚಂಪಾ, ವಾಟರ್ ಫೋರಂನ ಸೀಮಾ, ಶ್ರುತಿ, ರಾಜೇಶ್, ಓಂಕಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net