ಪಶು ಇಲಾಖೆಯ ಡಿ.ಗ್ರೂಪ್ ನೌಕರರಿಗೆ ೩ ತಿಂಗಳಿAದ ವೇತನವಿಲ್ಲ / ಕಷ್ಟಕ್ಕೆ ತಕ್ಕಹಾಗೆ ಗುತ್ತಿಗೆದಾರರಿಂದ ಹಣ ದೊರೆಯುತ್ತಿಲ್ಲ / ಸರ್ಕಾರವೇ ದಿನಗೂಲಿ ನೌಕರನಿಗೆ ಸಂಬಳ ನೀಡುವಂತಾಗಲಿ ಎಂಬುದು ದಿನಗೂಲಿ ನೌಕರರ ಆಗ್ರಹ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಪಶು ವೈದ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಡಿ ಗ್ರೂಪ್ ನೌಕರರಿಗೆ ಕಳೆದ ೩ ತಿಂಗಳಿAದ ವೇತನವಿಲ್ಲದೆ ಪರದಾಡುವಂತಾಗಿದೆ, ಅದನ್ನೇ ನಂಬಿ ಬದುಕುತ್ತಿರುವ ನೌಕರರಿಗೆ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಪ್ರತಿ ನಿತ್ಯ ೮ ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದರೂ ತಿಂಗಳಿಗೆ ಸರಿಯಾಗಿ ವೇತನ ಸಿಗದೆ ಪರದಾಡುವಂತಾಗಿದೆ.

ಯಾವುದೇ ಕಛೇರಿಗಳಲ್ಲಿ ಸರ್ಕಾರಿ ನೌಕರರಿಗಿಂತ ಡಿ.ಗ್ರೂಪ್ ನೌಕರರಿಗೆ ಕೆಲಸ ಹೆಚ್ಚಾಗಿರುತ್ತದೆ. ಅವರಿಗೆ ಆಯಾ ತಿಂಗಳಲ್ಲಿ ಸಂಬಳ ನೀಡಿದರೆ ಅವರ ಸಂಸಾರ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಸರ್ಕಾರ ಹೊರಗುತ್ತಿಗೆದಾರನಿಗೆ ಕನಿಷ್ಟ ವೇತನಗಿಂತ ಹೆಚ್ಚಾಗಿ ನೀಡುತ್ತಿದ್ದರು, ಗುತ್ತಿಗೆದಾರ ಅದರಲ್ಲೂ ಕಮೀಷನ್ ಪಡೆದು ನೌಕರನ ಕೈಗೆ ಸೇರುವುದು ಕಡಿಮೆ. ಈ ಬಗ್ಗೆ ದಿನಗೂಲಿ ನೌಕರ ಮೇಲಧಿಕಾರಿಗಳಿಗೆ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೆ ಮುಂದಿನ ವರ್ಷ ಆ ನೌಕರರನ್ನು ಮರು ನೇಮಕ ಮಾಡಿಕೊಳ್ಳದೆ ಕೈಬಿಡುತ್ತಿರುವುದರಿಂದ ಕೊಟ್ಟಷ್ಟೇ ಪಡೆದುಕೊಳ್ಳುವಂತಹ ಪರಿಸ್ಥಿತಿ ದಿನಗೂಲಿ ನೌಕರನದ್ದಾಗಿದೆ.

ಜಿಲ್ಲೆಯಲ್ಲಿ ೧೧೪ ಪಶು ಆಸ್ಪತ್ರೆಗಳಿದ್ದು, ಸರ್ಕಾರದ ಆದೇಶದ ಅನುಸಾರ ೧೯೦ ಡಿ.ಗ್ರೂಪ್ ಹುದ್ದೆಗಳಿವೆ. ಇದರಲ್ಲಿ ೨೦ ಜನ ಖಾಯಂ ನೌಕರರಿದ್ದು, ೫೫ ಜನ ಹೊರಗುತ್ತಿಗೆ ನೌಕರರಿದ್ದಾರೆ. ೧೫ ಹೊರಗುತ್ತಿಗೆ ನೌಕರರ ನೇಮಕಕ್ಕೆ ಸರ್ಕಾರ ಆದೇಶ ಮಾಡಿದೆ. ಆದರೆ ನೇಮಕಾತಿ ಆಗಬೇಕಾಗಿದೆ. ಆದರೂ ೧೨೦ ಹುದ್ದೆಗಳು ಖಾಲಿಯಿವೆ.

************************************************

ಡಿ.ಗ್ರೂಪ್ ನೌಕರರ ಕೆಲಸ :

ಪ್ರತಿ ನಿತ್ಯ ಬೆಳಿಗ್ಗೆ ೯ ಗಂಟೆಗೆ ಆಸ್ಪತ್ರೆಯ ಬಾಗಿಲು ತೆಗೆದು ಆಸ್ಪತ್ರೆಯಲ್ಲಿ ಕಸಗುಡಿಸಿ ಶುಭ್ರಗೊಳಿಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಜಾನುವಾರುಗಳಿಗೆ ವೈದ್ಯರು ಚಿಕಿತ್ಸೆ ನೀಡುವಾಗ ಅವರಿಗೆ ಸಹಾಯಕರಾಗಿ ಕೆಲಸ ಮಾಡುವುದು ಹಾಗು ಜಾನುವಾರುಗಳಿಗೆ ಲಸಿಕೆಗಳು ಹಾಕುವಾಗ ಗ್ರಾಮಗಳಲ್ಲಿ ವೈದ್ಯರೊಂದಿಗೆ ಸುತ್ತಾಡಿ ಹಸುಗಳಿಗೆ ಲಸಿಕೆ ಹಾಕಬೇಕಾಗುತ್ತದೆ. ಕಡಿಮೆ ವೇತನ ನೀಡಿದರೂ ದಿನಪೂರ್ತಿ ಬಿಡುವಿಲ್ಲದೆ ಕೆಲಸ ಮಾಡಬೇಕಾಗುತ್ತದೆ. ಇಷ್ಟಾದರೂ ತಿಂಗಳಿಗೆ ಸರಿಯಾಗಿ ವೇತನ ನೀಡದ ಕಾರಣ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂಬುದು ಗುತ್ತಿಗೆ ನೌಕರರ ಅಳಲಾಗಿದೆ.

*************************************************

ಕಳೆದ ೮ ವರ್ಷಗಳಿಂದ ಹೊರಗುತ್ತಿಗೆ ನೌಕರರಾಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಮಾಸಿಕ ೧೩,೧೭೧ ರೂ.ಗಳ ವೇತನ ಬರುತ್ತಿದ್ದು, ದಿನಪೂರ್ತಿ ಆಸ್ಪತ್ರೆಯಲ್ಲಿಯೇ ಕೆಲಸ ಮಾಡಬೇಕಾಗುತ್ತದೆ ಆದರೂ ತಿಂಗಳಿಗೆ ಸರಿಯಾಗಿ ವೇತನ ನೀಡದೆ ೩ ರಿಂದ ೪ ತಿಂಗಳಿಗೊಮ್ಮೆ ವೇತನ ಬಿಡುಗಡೆಯಾಗುತ್ತಿದ್ದು, ಇದರಿಂದ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಪ್ರತಿ ವರ್ಷ ಗುತ್ತಿಗೆ ಏಜೆನ್ಸಿಗಳು ಬದಲಾಗುತ್ತಿದ್ದು, ಗುತ್ತಿಗೆ ಏಜೆನ್ಸಿ ಬದಲಾಗಿ ನವೀಕರಣ ಮಾಡಲು ಏಜೆನ್ಸಿಗಳಿಗೆ ೧೦ ರಿಂದ ೧೫ ಸಾವಿರ ಲಂಚ ಕೊಡಬೇಕಾಗುತ್ತದೆ. ಅದನ್ನು ಪ್ರಶ್ನಿಸಿದರೆ ಕೆಲಸದಿಂದ ತೆಗೆದು ಹಾಕುವ ಬೆದರಿಕೆ ಹಾಕುತ್ತಾರೆ. ಆದ್ದರಿಂದ ಪ್ರತಿ ವರ್ಷ ಅವರು ಕೇಳಿದಷ್ಟು ಹಣ ಲಂಚವಾಗಿ ನೀಡಬೇಕಾಗಿದೆ. ಸರ್ಕಾರ ಹೇಗೂ ಖಾಯಂ ಮಾಡುವುದಿಲ್ಲ. ಕನಿಷ್ಟ ಗುತ್ತಿಗೆ ನೌಕರಿಯಿಂದ ವಿಮುಕ್ತಿಗೊಳಿಸಿ ದಿನಗೂಲಿ ನೌಕರರನ್ನಾಗಿ ಆದರೂ ನೇಮಿಸಿಕೊಂಡು ಪ್ರತಿ ತಿಂಗಳೂ ಸರಿಯಾಗಿ ವೇತನ ನೀಡಲಿ.

-ಹೆಸರು ಹೇಳಲು ಇಚ್ಛಿಸದ ಗುತ್ತಿಗೆ ನೌಕರ ಅಳಲು

****************************************************

ಕಳೆದ ಮಾರ್ಚ್ ತಿಂಗಳವರೆವಿಗೂ ಡಿ.ಗ್ರೂಪ್ ನೌಕರರಿಗೆ ವೇತನ ಬಿಡುಗಡೆಯಾಗಿದ್ದು, ಏಪ್ರಿಲ್ ತಿಂಗಳಿAದ ಸಂಬಳ ನೀಡಬೇಕಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಕಾರಣ ಗುತ್ತಿಗೆ ನೌಕರರಿಗೆ ವೇತನ ನೀಡಲಾಗುತ್ತಿಲ್ಲ. ಸರ್ಕಾರದಿಂದ ಪ್ರತಿ ನೌಕರರಿಗೆ ೨೧ ಸಾವಿರ ರೂ.ಗಳಂತೆ ವೇತನ ಬಿಡುಗಡೆಯಾಗುತ್ತಿದೆ. ಅದರಲ್ಲಿ ಇ.ಎಸ್.ಎಸ್.ಐ ಮತ್ತು ಪಿ.ಎಫ್ ಸೇರಿದಂತೆ ಸರ್ಕಾರದ ಮಾನದಂಡಗಳAತೆ ಕಡಿತಗೊಳಿಸಿ ೧೫ ಸಾವಿರದಿಂದ ೧೬ ಸಾವಿರ ವೇತನವನ್ನು ಗುತ್ತಿಗೆಗೆದಾರರಿಗೆ ನೀಡಲಾಗುವುದು. ಅವರು ನೌಕರರ ಖಾತೆಗೆ ಜಮಾ ಮಾಡುತ್ತಾರೆ.

ಡಾ.ರಮೇಶ್, ಉಪ ನಿರ್ದೇಶಕರು, ಪಶು ಇಲಾಖೆ ಕೋಲಾರ

ಚಿತ್ರ ೧೪ ಕೆ.ಎಲ್.ಆರ್. ೦೧ : ಪಶು ಆಸ್ಪತ್ರೆ ಚಿತ್ರ

ಚಿತ್ರ ೧೪ ಕೆ.ಎಲ್.ಆರ್. ೦೧ಎ: ಡಾ.ರಮೇಶ್, ಉಪ ನಿರ್ದೇಶಕರು, ಪಶು ಇಲಾಖೆ ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net