

ಸ.ದಾ. ಜೋಶಿ ಬೀದರ್
ಕರೊನಾ ಸೋಂಕಿನಿಂದಾಗಿ ಶಾಸಕ ಬಿ. ನಾರಾಯಣರಾವ್ ಮೃತಪಟ್ಟ ಹಿನ್ನೆಲೆಯಲ್ಲಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಶೀಘ್ರದಲ್ಲೇ ಮೊದಲ ಸಲ ಉಪ ಚುನಾವಣೆ ನಡೆಯಲಿದೆ. ಹೀಗಾಗಿ ನಾರಾಯಣರಾವ್ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಶುರುವಾಗಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿವೆ.
ಜನತಾ ಪರಿವಾರದ ಭದ್ರಕೋಟೆ ಎಂದೇ ಗುರುತಿಸಿಕೊಂಡ ಬಸವಕಲ್ಯಾಣ ಕ್ಷೇತ್ರದಲ್ಲಿ ನಾಲ್ಕು ದಶಕ ಬಳಿಕ ನಾರಾಯಣರಾವ್ ಕಾಂಗ್ರೆಸ್ಗೆ ಗೆಲುವು ತಂದುಕೊಟ್ಟಿದ್ದರು. ಹಿಂದುಳಿದ ವರ್ಗದ ನಾಯಕರೊಬ್ಬರು ಸಾಮಾನ್ಯ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು. ಬಲಹೀನಗೊಂಡಿದ್ದ ಕಾಂಗ್ರೆಸ್ಗೆ ನವಶಕ್ತಿ ತುಂಬಿದ್ದರು. ಅಭಿವೃದ್ಧಿ ಕೆಲಸಗಳ ಜತೆಗೆ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಮಜಬೂತ್ ಮಾಡುತ್ತಿರುವ ಹಂತದಲ್ಲೇ ಬಾರದ ಲೋಕಕ್ಕೆ ತೆರಳಿದ್ದಾರೆ. ಈ ಸ್ಥಿತಿಯಲ್ಲಿ ಕ್ಷೇತ್ರವನ್ನು ಮತ್ತೆ ತನ್ನ ಕೈಯಲ್ಲಿ ಇಟ್ಟುಕೊಳ್ಳುವುದು ಕಾಂಗ್ರೆಸ್ಗೆ ಸವಾಲಿನ ಸಂಗತಿ ಎನಿಸಿದೆ.
ಕಳೆದ ಚುನಾವಣೆಯಲ್ಲಿ ನಾರಾಯಣರಾವ್ ಅವರಿಗೆ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು) ವರ್ಗ ಭರಪೂರ ಸಾಥ್ ನೀಡಿತ್ತು. ಇದರೊಂದಿಗೆ ಬಿಜೆಪಿ, ಜೆಡಿ ಎಸ್ ನಲ್ಲಿ ಕೊನೆಯ ಹಂತದಲ್ಲಿ ನಡೆದ ವಿವಿಧ ಬೆಳವಣಿಗೆ, ಮತ ವಿಭಜನೆ ಮುಂತಾದ ಅಂಶಗಳು ವರವಾಗಿ ಪರಿಣಮಿಸಿದ್ದವು. ಹೀಗಾಗಿ 1978ರ ನಂತರ ಇಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತ್ತು. ಸುದೀರ್ಘ ಅವಧಿ ಬಳಿಕ ಕ್ಷೇತ್ರ ಕೈವಶ ಮಾಡಿಕೊಟ್ಟ ನಾರಾಯಣರಾವ್ ಅವರ ಅಕಾಲಿಕ ಸಾವು ಕೈ ಪಾಳಯಕ್ಕೆ ದೊಡ್ಡ ಪೆಟ್ಟು ಕೊಟ್ಟಿದೆ. ಉಪ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ನಾರಾಯಣರಾವ್ ಜಾಗ ತುಂಬುವಂಥ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ನಿಟ್ಟಿನಲ್ಲಿ ಪಕ್ಷದ ಮಟ್ಟದಲ್ಲಿ ಚರ್ಚೆ ಶುರುವಾಗಿದೆ.
ನಾರಾಯಣರಾವ್ ಪತ್ನಿ ಮಲ್ಲಮ್ಮ, ಪುತ್ರರಾದ ಗೌತಮ್ ಮತ್ತು ರಾಹುಲ್ ರಾಜಕೀಯದಿಂದ ದೂರವೇ ಇದ್ದಾರೆ. ತಂದೆ ಶಾಸಕರಾಗಿದ್ದರೂ ಪುತ್ರರು ಯಾವುದರಲ್ಲೂ ಹಸ್ತಕ್ಷೇಪ ಮಾಡಲಿಲ್ಲ. ಗೌತಮ್ ಕೆಲವೊಮ್ಮೆ ತಂದೆ ಜತೆಗೆ ಅತ್ತಿತ್ತ ತಿರುಗಾಡಿರುವುದು, ಕೆಲ ಮುಖಂಡರನ್ನು ಭೇಟಿ ಮಾಡಿದ್ದು ಬಿಟ್ಟರೆ ಕ್ಷೇತ್ರದಲ್ಲಿ ಹೆಚ್ಚು ಸಂಪರ್ಕ ಸಹ ಹೊಂದಿಲ್ಲ. ಆದರೂ ಪಕ್ಷದ ವರಿಷ್ಠರು ಅನುಕಂಪ ಮತ ಸೆಳೆಯುವ ನಿಟ್ಟಿನಲ್ಲಿ ಪರಿವಾರದವರನ್ನು ಕಣಕ್ಕಿಳಿಸಬಹುದಾ ಎಂಬ ಚರ್ಚೆ ನಡೆದಿದೆ. ನಾರಾಯಣರಾವ್ ಬಗ್ಗೆ ಕ್ಷೇತ್ರದ ಜನರಲ್ಲಿ ಅತ್ಯುತ್ತಮ ಒಲವಿತ್ತು. ವಿವಾದರಹಿತ, ಕಳಂಕರಹಿತ ವ್ಯಕ್ತಿತ್ವವನ್ನು ಸಹ ಅವರು ಹೊಂದಿದ್ದರು. ಈ ಸ್ಥಿತಿಯಲ್ಲಿ ಕಾಂಗ್ರೆಸ್ ವರಿಷ್ಠರು ಕುಟುಂಬದವರನ್ನೇ ಅವಕಾಶ ಕೊಡುವ ಸಾಧ್ಯತೆ ಹೆಚ್ಚು ಎಂಬ ವಿಶ್ಲೇಷಣೆಗಳು ನಡೆದಿವೆ. ಟಿಕೆಟ್ ಮೇಲೆ ಪಕ್ಷದಲ್ಲಿ ಹಲವರು ಕಣ್ಣಿಟ್ಟಿದ್ದಾರೆ. ಆದರೆ ಸದ್ಯಕ್ಕೆ ಯಾರೂ ಬಹಿರಂಗವಾಗಿ ಏನೂ ಮಾತಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ವರಿಷ್ಠರ ಆಯ್ಕೆ ಏನಿರಬಹುದು ಎಂಬುದು ಈಗಿನಿಂದಲೇ ಕುತೂಹಲ ಕೆರಳಿಸಿದೆ.
ಬಸವಕಲ್ಯಾಣ ಕ್ಷೇತ್ರ 1957ರಿಂದ ಈವರೆಗೆ 14 ಚುನಾವಣೆಗಳನ್ನು ಕಂಡಿದೆ. ನಾರಾಯಣರಾವ್ ಅಗಲಿಕೆ ಕ್ಷೇತ್ರದಲ್ಲಿ ಮೊದಲ ಉಪ ಚುನಾವಣೆಗೆ ಕಾರಣವಾಗಿದೆ. ರಾಜ್ಯದ ಬೆಳಗಾವಿ ಲೋಕಸಭೆ ಹಾಗೂ ಶಿರಾ ಮತ್ತು ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಒಂದೆರಡು ವಾರದಲ್ಲಿ ಮುಹೂರ್ತ ಫಿಕ್ಸ್ ಮಾಡುವ ಸಾಧ್ಯತೆಗಳಿವೆ. ಹೀಗಾದಲ್ಲಿ ನವೆಂಬರ್ ಒಳಗೆ ಕ್ಷೇತ್ರಕ್ಕೆ ಉಪ ಸಮರ ನಡೆಯಬಹುದಾಗಿದೆ. ಹೀಗಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿ ವಿವಿಧ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಳ್ಳುತ್ತಿವೆ.
ಸಿದ್ದರಾಮಯ್ಯ ಕಡೆಗೆ ಚಿತ್ತ
ನಾರಾಯಣರಾವ್ ಅಕಾಲಿಕ ನಿಧನದ ಆಘಾತದಿಂದ ಕುಟುಂಬದವರು ಇನ್ನೂ ಹೊರಬಂದಿಲ್ಲ. ರಾಜಕೀಯ ಮತ್ತು ಉಪ ಚುನಾವಣೆ ಬಗ್ಗೆ ಸದ್ಯಕ್ಕೆ ಏನನ್ನೂ ಹೇಳದಂತಹ ಸ್ಥಿತಿಯಲ್ಲಿದ್ದಾರೆ. ಆದರೆ ಪಕ್ಷ ಮತ್ತು ಸಾರ್ವಜನಿಕ ವಲಯದಲ್ಲಿ ಚುನಾವಣೆ ಚರ್ಚೆ ನಾರಾಯಣರಾವ್ ಅಂತ್ಯಕ್ರಿಯೆ ಬೆನ್ನಲ್ಲೇ ಜೋರಾಗಿದೆ. ನಾರಾಯಣರಾವ್ ಕುಟುಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನೇ ಹೆಚ್ಚು ನಂಬಿಕೊಂಡಿದೆ. ನಾರಾಯಣರಾವ್ ಅವರಿಗೆ ಹಿಂದಿನ ಎರಡು ಚುನಾವಣೆಗಳಲ್ಲಿ ಸಿದ್ದರಾಮಯ್ಯ ಅವರಿಂದಲೇ ಟಿಕೆಟ್ ಸಿಕ್ಕಿತ್ತು. ಈಗ ಉಪ ಚುನಾವಣೆ ವಿಷಯದಲ್ಲೂ ಸಿದ್ದರಾಮಯ್ಯ ನಿರ್ಣಯವೇ ಅಂತಿಮ ಎನ್ನುತ್ತವೆ ಕುಟುಂಬದ ಆಪ್ತ ಮೂಲಗಳು. ಈ ಮಧ್ಯೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಶನಿವಾರ ನಾರಾಯಣರಾವ್ ಪುತ್ರ ಗೌತಮ್ ಅವರಿಗೆ ಫೋನ್ ಮಾಡಿ ಸಾಂತ್ವನ ಹೇಳಿದ್ದಾರೆ. ಪಕ್ಷ ನಿಮ್ಮೊಂದಿಗಿದೆ ಎಂದು ಧೈರ್ಯ ತುಂಬಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಮುಖಂಡರೂ ಕುಟುಂಬದ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ. ಇದೆಲ್ಲವೂ ಸಾಕಷ್ಟು ಮಹತ್ವ ಪಡೆದಿದೆ.
ಬಿಜೆಪಿ, ಜೆಡಿ ಎಸ್ ನಲ್ಲೂ
ಹೆಚ್ಚಿದ್ದಾರೆ ಆಕಾಂಕ್ಷಿಗಳು
ಉಪ ಚುನಾವಣೆ ಸನ್ನಿಹಿತವಾದ ಹಿನ್ನೆಲೆಯಲ್ಲಿ ಬಿಜೆಪಿ, ಜೆಡಿಎಸ್ ಪಾಳಯದಲ್ಲೂ ರಾಜಕೀಯ ಚಟುವಟಿಕೆ ಬಿಗಿ ಹಿಡಿಯುತ್ತಿವೆ. ಆಡಳಿತರೂಢ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿ ಇದೆ. ಜೆಡಿಎಸ್ನಲ್ಲೂ ಈ ಸಂಖ್ಯೆ ಕಮ್ಮಿಯಿಲ್ಲ. ಕಳೆದ ಸಲ ಜೆಡಿಎಸ್ನಿಂದ ವಲಸೆ ಬಂದಿದ್ದ ಮಲ್ಲಿಕಾರ್ಜುನ ಖೂಬಾ ಅವರಿಗೆ ಬಿಜೆಪಿ ಮಣೆ ಹಾಕಿತ್ತು. ಇದು ಮೂಲ ಬಿಜೆಪಿಗರನ್ನು ಸಿಟ್ಟಾಗಿಸಿತ್ತು. ಇನ್ನು ಜೆಡಿಎಸ್ ಸ್ಥಳೀಯರನ್ನು ಬಿಟ್ಟು ಮಾಜಿ ಸಚಿವ ಕನಕಪುರದ ಪಿಜಿಆರ್ ಸಿಂಧ್ಯಾ ಅವರನ್ನು ಕಣಕ್ಕಿಳಿಸಿತ್ತು. ನಿರೀಕ್ಷೆಯಂತೆ ಎರಡೂ ಪಕ್ಷದ ಮುಖಂಡರ ಲೆಕ್ಕಾಚಾರ ಉಲ್ಟಾ ಹೊಡೆದು ಕಾಂಗ್ರೆಸ್ ಕ್ಲಿಕ್ ಆಯಿತು. ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಡಜನ್ ಆಸುಪಾಸಿದೆ ! ಕೆಲವರು ಟಿಕೆಟ್ ಗಿಟ್ಟಿಸಲು ಲಾಬಿಯೂ ಆರಂಭಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ಪಕ್ಷ ಅಧಿಕಾರದಲ್ಲಿರುವ ಕಾರಣ ಸಹಜವೇ ಬಿಜೆಪಿಯಲ್ಲಿ ಟಿಕೆಟ್ ಮೇಲೆ ಕಣ್ಣಿಟ್ಟವರ ಸಂಖ್ಯೆ ಹೆಚ್ಚಿದೆ.
ಮೂರು ಚುನಾವಣೆ ಮೆಲುಕು
2018
ಬಿ. ನಾರಾಯಣರಾವ್(ಕಾಂಗ್ರೆಸ್)- 61425
ಮಲ್ಲಿಕಾರ್ಜುನ ಖೂಬಾ(ಬಿಜೆಪಿ) -44153
ಪಿ.ಜಿ.ಆರ್.ಸಿಂಧ್ಯಾ (ಜೆಡಿಎಸ್)-31414
2013
ಮಲ್ಲಿಕಾರ್ಜುನ ಖೂಬಾ (ಜೆಡಿಎಸ್)-37494
ಬಿ. ನಾರಾಯಣರಾವ (ಕಾಂಗ್ರೆಸ್)-21601
ಎಂ.ಜಿ. ಮುಳೆ (ಬಿಎಸ್ಆರ್ ಕಾಂಗ್ರೆಸ್)18214
ಸಂಜಯ್ ಪಟವಾರಿ (ಬಿಜೆಪಿ) 17431
ಮಲ್ಲಮ್ಮ ಪಾಟೀಲ್ ಅಟ್ಟೂರ್(ಕೆಜೆಪಿ)17965
2008
ಬಸವರಾಜ ಪಾಟೀಲ್ ಅಟ್ಟೂರ್ (ಬಿಜೆಪಿ)39105
ಎಂ.ಜಿ. ಮುಳೆ (ಕಾಂಗ್ರೆಸ್) 31077
ಮಲ್ಲಿಕಾರ್ಜುನ ಖೂಬಾ (ಜೆಡಿಎಸ್) 23905