

ತಿ.ನರಸೀಪುರ: ನರೇಗಾ ಯೋಜನೆಯ ಅನುದಾನದಲ್ಲಿ ಅತ್ತಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.
ತಾಲೂಕಿನ ಅತ್ತಹಳ್ಳಿ ಗ್ರಾಮದ ಹಾಲಿನ ಡೇರಿ ಮುಂಭಾಗ ಶನಿವಾರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ 14ನೇ ಮತ್ತು 15ನೇ ಹಣಕಾಸು ಅನುದಾನದ ಖರ್ಚಿಗೆ ಸಂಬಂಧಿಸಿದಂತೆ ಆಯೋಜಿಸಿದ್ದ್ದ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿರುವ ಉದ್ಯೋಗ ಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ವೈಯಕ್ತಿಕ ಕಾಮಗಾರಿಗಳ ಮಂಜೂರಿಗೆ ಅವಕಾಶ ಇರುವುದರಿಂದ ಗ್ರಾಮಸ್ಥರು ಕೂಡ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಿ, ನರೇಗಾ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಲೆಕ್ಕಪರಿಶೋಧನಾಧಿಕಾರಿ ರಂಗರಾಜ, 2023ರ ಏ.1ರಿಂದ 2024ರ ಮಾ.31ರ ವರೆಗೆ ಭರಿಸಿದ ವೆಚ್ಚಕ್ಕೆ ಸಂಬಂಧಿಸಿದ 2023- 2024ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ 14ನೇ ಮತ್ತು 15 ನೇ ಹಣಕಾಸು ಅನುದಾನದ ಖರ್ಚಿನ ವರದಿ ಮಂಡಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ವೀಣಾ ನಿಂಗರಾಜು, ಸದಸ್ಯರಾದ ಎ.ಎನ್.ವಿಶ್ವನಾಥ್, ನಾಗರಾಜು, ನಾಗರತ್ನಾ, ನಂದಿನಿ, ಜಯಲಕ್ಷ್ಮೀ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆರ್.ಮಾದೇಶ್, ಕಾರ್ಯದರ್ಶಿ ಎಸ್.ಬಿ.ಸಿದ್ದರಾಜು, ಪ್ರಥಮ ದರ್ಜೆ ಸಹಾಯಕಿ ಸೌಮ್ಯಾ, ಸಹಾಯ ಕೃಷ್ಣಪ್ಪ, ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.