ನಮ್ಮ ಸಂಸ್ಕೃತಿ, ಸಂಪ್ರದಾಯ ಉಳಿಸಬೇಕಾದರೆ ಜಾನಪದ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು

ಸಂಸ್ಕೃತಿ,
3
Published on

ನಮ್ಮ ಸಂಸ್ಕೃತಿ, ಸಂಪ್ರದಾಯ ಉಳಿಸಬೇಕಾದರೆ ಜಾನಪದ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು ಎಂದು ಮಾಜಿ ಸಚಿವ ಎಂ.ಶಿವಣ್ಣ ಒತ್ತಾಯಿಸಿದರು.

ಜಿಲ್ಲಾ ಕನ್ನಡ ಜಾನಪದ ಪರಿಷತ್, ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘದ ಸಹಯೋಗದಲ್ಲಿ ಮಾನಸ ಗಂಗೋತ್ರಿ ಇಎಂಆರ್‌ಸಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಹಾಗೂ ಯುವ ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಜಾನಪದ ಕ್ಷೇತ್ರಕ್ಕೆ ಆದ್ಯತೆ ಸಿಗುತ್ತಿಲ್ಲ. ಇದು ಹೀಗೆ ಮುಂದುವರೆದರೆ ಭಾರತೀಯ ಸಂಸ್ಕೃತಿ ನಾಶವಾಗುತ್ತದೆ ಎಂದು ಅವರು ಎಚ್ಚರಿಸಿದರು. ಜಾನಪದ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಬೇಕು. ಅವರಿಂದ ಅರ್ಜಿ ಕರೆದು ಪ್ರಶಸ್ತಿ ನೀಡುವ ಬದಲು ಸರ್ಕಾರವೇ ಗುರುತಿಸಿ, ಮನೆ ಬಾಗಿಲಿಗೆ ಹೋಗಿ ಪ್ರಶಸ್ತಿ ನೀಡಬೇಕು ಎಂದು ಅವರು ಸಲಹೆ ಮಾಡಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಮಾತನಾಡಿ, ಜಾನಪದ ಸೊಗಡು ನಮ್ಮ ಮಣ್ಣಿನ ಗುಣ. ಜಾನಪದ ಎಂದರೇ ಜೀವನ. ಹಿಂದಿನ ಕಾಲದಲ್ಲಿ ನಾಟಿ ಮಾಡುವಾಗ, ರಾಗಿ ಬೀಸುವಾಗ, ಭತ್ತ ಕುಟ್ಟುವಾಗ, ಮಗುವನ್ನು ಮಲಗಿಸುವಾಗ ಆಡುತ್ತಿದ್ದ ಜಾನಪದ ಗೀತೆಗಳು ಈಗ ಕಣ್ಮರೆಯಾಗಿವೆ. ಜಾನಪದ ಕಲೆಯನ್ನು ಉಳಿಸಿ, ಬೆಳೆಸಬೇಕಾಗಿದೆ ಎಂದರು.

ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ದೀಪಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ. ರಾಮಪ್ಪ, ಮೈಸೂರು ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಎಸ್. ಉಮೇಶ್, ಮೈಸೂರು ಕೋ-ಆಪ್ ಬ್ಯಾಂಕ್ ನಿರ್ದೇಶಕ ಎಸ್.ಆರ್. ರವಿಕುಮಾರ್ ಇದ್ದರು.

ಇದೇ ವೇಳೆ ಹುಣಸೂರು ತಾ. ಧರ್ಮಾಪುರ ಎಂ.ಎಸ್. ಕುಮಾರ, ಹುಣಸೂರು ಸಿಂಗೇಶ್, ಮೈಸೂರಿನ ಗೀತಾ ಶ್ರೀಧರ್, ಕಳಲೆ ಜವರನಾಯಕ, ಕೆ.ಆರ್. ನಗರದ ಸೈಯದ್ ರಿಜ್ವಾನ್, ಸರಗೂರು ತಾ. ಶಿರಮಳ್ಳಿಯ ಎಸ್.ಬಿ. ನಾಗೇಗೌಡ, ಮೈಸೂರು ತಾಲೂಕು ಸಜ್ಜೆಹುಂಡಿಯ ತಿರುಮಲೇಗೌಡ, ಪಿರಿಯಾಪಟ್ಟಣ ತಾಲೂಕು ಬೆಟ್ಟದತುಂಗದ ಗಂಗಮ್ಮ, ಎಚ್.ಡಿ. ಕೋಟೆ ತಾಲೂಕು ಮಲಾರದ ಮಹದೇವಯ್ಯ, ಕ್ಯಾತನಹಳ್ಳಿಯ ಸಣ್ಣಮ್ಮ ಅವರಿಗೆ ಜಿಲ್ಲಾ ಜಾನಪದ ಪ್ರಪಂಚ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಲಿಗ್ರಾಮ ತಾಲೂಕು ನಾಡಪ್ಪನಹಳ್ಳಿಯ ಲಕ್ಷ್ಮೀರಾಂ, ಮೈಸೂರಿನ ಎಸ್. ಜೋಸೆಫ್, ಕನಕಗಿರಿಯ ಕಂಸಾಳೆ ರವಿ, ಯರಗನಹಳ್ಳಿಯ ಜಿ.ಶ್ರೀಧರ್ , ಕೆ.ಎಂ.ಶ್ರುತಿ, ತಿ.ನರಸೀಪುರ ತಾಲೂಕು ತಲಕಾಡು ಕೃಷ್ಣಮೂರ್ತಿ, ಪಿ. ಪುನೀತ್ ಕುಮಾರ್, ಕೆಎಂ. ಶೇಷಣ್ಣಸ್ವಾಮಿ, ಮಾರಶೆಟ್ಟಿಹಳ್ಳಿಯ ಮಹೇಶ ಅವರಿಗೆ ಜಿಲ್ಲಾ ಯುವ ಜಾನಪದ ಪ್ರಪಂಚ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net