

ಮೈಸೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ‘ನನ್ನ ಮತ ನನ್ನ ಹಕ್ಕು’ ಎಂಬ ಶೀರ್ಷಿಕೆಯಡಿ ಸೈಕಲ್ ರ‌್ಯಾಲಿ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ‘ನಮ್ಮ ಮೈಸೂರು ಬೈಕರ್ಸ್ ಕಮ್ಯುನಿಟಿ’ ವತಿಯಿಂದ ರ‌್ಯಾಲಿಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಚಾಲನೆ ನೀಡಲಾಯಿತು.
ಬಳಿಕ ಸೈಕಲ್ ರ‌್ಯಾಲಿ ನಜರ್‌ಬಾದ್ ಪೊಲೀಸ್ ಠಾಣೆ, ಆರ್-ಗೇಟ್, ದೇವರಾಜ ಅರಸು ರಸ್ತೆ, ಕೆ.ಆರ್.ವೃತ್ತ, ಮೆಟ್ರೋಪೋಲ್ ವೃತ್ತ, ಇರ್ವಿನ್ ರಸ್ತೆ, ಅಶೋಕ ರಸ್ತೆ, ಪುರಭವನದಲ್ಲಿ ರ‌್ಯಾಲಿ ಕೊನೆಗೊಂಡಿತು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ರ‌್ಯಾಲಿಗೆ ಹಸಿರು ನಿಶಾನೆ ತೋರಿದರು. ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ, ಎಸ್‌ಸಿ-ಎಸ್‌ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯರಾದ ಪಿರಿಯಾಪಟ್ಟಣದ ಬೆಟ್ಟದಪುರ ರವಿಕುಮಾರ್, ಅಹಿಂದ ಜವರಪ್ಪ, ಮಾಜಿ ಮೇಯರ್ ಪುರುಷೋತ್ತಮ್ ಸೇರಿದಂತೆ ಇನ್ನಿತರರಿದ್ದರು.